ಹುಣಸೂರು: ಹಳ್ಳಿಗಳಲ್ಲಿ ಬಹುತೇಕ ಮನೆಗಳಲ್ಲಿ ಶೌಚಾಲಯ ನಿರ್ಮಿಸಿದ್ದರೂ ಅವುಗಳನ್ನು ಬಳಸುತ್ತಿಲ್ಲ. ಇದರಿಂದ ಯೋಜನೆಯ ಉದ್ದೇಶವೇ ವಿಫಲವಾಗುತ್ತಿದ್ದು, ಪ್ರತಿಯೊಬ್ಬರೂ ಆರೋಗ್ಯ ದೃಷ್ಟಿಯಿಂದ ಕಡ್ಡಾಯವಾಗಿ ಶೌಚಾಲಯ ಬಳಸಬೇಕು ಎಂದು ತಾಲೂಕು ಪಂಚಾಯ್ತಿ ಇಒ ಕೃಷ್ಣಕುಮಾರ್ ಮನವಿ ಮಾಡಿದರು.
ತಾಲೂಕಿನ ಕಟ್ಟೆಮಳಲವಾಡಿ ಪ್ರೌಢಶಾಲಾ ಆವರಣದಲ್ಲಿ ನಡೆದ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಶೌಚಾಲಯ ನಿರ್ಮಾಣದಲ್ಲಿ ದೊಡ್ಡ ಕ್ರಾಂತಿಯೇ ನಡೆದಿದೆ. ಆದರೆ, ಬಹುತೇಕ ಹಳ್ಳಿಗಳಲ್ಲಿ ಬಳಕೆ ಮಾಡದಿರುವುದು ಕಂಡಬರುತ್ತಿದೆ. ಅದರಲ್ಲೂ ಸುಮಾರು 8 ಸಾವಿರ ಜನಸಂಖ್ಯೆ ಹೊಂದಿರುವ ಕಟ್ಟೆಮಳಲವಾಡಿ ಗ್ರಾಮದಲ್ಲಿ ಶೇ.30ರಷ್ಟು ಮಂದಿ ಬಯಲಿಗೆ ತೆರಳುತ್ತಿರುವ ಬಗ್ಗೆ ದೂರು ಬಂದಿದ್ದು,
ಇದರಿಂದಾಗಿ ಈ ಗ್ರಾಮವನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಬಯಲು ಶೌಚಾಲಯದಿಂದ ಸಾಂಕ್ರಾಮಿಕ ರೋಗ ಹರಡುವ ಮತ್ತು ಪರಿಸರ ಹಾಳಾಗುವ ಹಿನ್ನೆಲೆಯಲ್ಲಿ ಅಂಗನವಾಡಿ-ಆಶಾ, ಆರೋಗ್ಯ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಜಾಥಾ ಮತ್ತು ಮನೆ-ಮನೆ ಭೇಟಿ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಅರಿವು ಮೂಡಿಸಿ: ತಾಪಂ ಉಪಾಧ್ಯಕ್ಷ ಪ್ರೇಮಕುಮಾರ್ ಮಾತನಾಡಿ, ಸ್ವತ್ಛ ಭಾರತ ಅಭಿಯಾನ, ಶೌಚಾಲಯ ಬಳಕೆ ಪರಿಕಲ್ಪನೆ ಉತ್ತಮವಾಗಿದ್ದು, ಆದರೆ ಇನ್ನೂ ಕೂಡ ಹಳ್ಳಿಗಳಲ್ಲಿ ಶೌಚಾಲಯ ಬಳಕೆ ಮಾಡಿಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಹಾಗೂ ಇತರರಿಗೂ ಬಳಕೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಚಿಲ್ಕುಂದ ಸೇರಿದಂತೆ ಎಲ್ಲೆಡೆ ಇಂತಹ ಜಾಗೃತಿ ಕಾರ್ಯಕ್ರಮ ನಡೆಸಬೇಕೆಂದು ಕೋರಿದರು.
ಜಾಥಾಕ್ಕೆ ಚಾಲನೆ: ಕಾರ್ಯಕ್ರಮದ ನಂತರ ಶಾಲಾ ಆವರಣದಿಂದ ಹೊರಟ ಜಾಥಾಕ್ಕೆ ಕಟ್ಟೆಮಳಲವಾಡಿ ಹಾಗೂ ಬಿಳಿಗೆರೆ ಗ್ರಾಪಂ.ಅಧ್ಯಕ್ಷರು ಬ್ಯಾಂಡ್ ಬಾರಿಸುವ ಮೂಲಕ ಚಾಲನೆ ನೀಡಿದರು. ಜಾಥಾದಲ್ಲಿ ಶಾಲಾ ಮಕ್ಕಳು, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಫಲಕ ಹಿಡಿದು, ಘೋಷಣೆ ಕೂಗುತ್ತಾ ಗ್ರಾಮದ ಎಲ್ಲಾ ಬೀದಿಗಳಲ್ಲೂ ಜಾಗೃತಿ ಮೂಡಿದರು.
ಈ ವೇಳೆ ಗ್ರಾಪಂ ಸದಸ್ಯರಾದ ದೇವರಾಜ್, ಸುಂದರಮ್ಮ, ಪ್ರೌಢಶಾಲಾ ಮುಖ್ಯಶಿಕ್ಷಕ ನಾಗಯ್ಯ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್, ಅಂಗನವಾಡಿ ಮೇಲ್ವಿಚಾರಕಿ ಶೋಭಾ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪ್ರೌಢಶಾಲಾ ಮುಖ್ಯಶಿಕ್ಷಕ ನಾಗಯ್ಯ, ಶಿಕ್ಷಕರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.