ಹುಣಸೂರು: ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ ಆದಿವಾಸಿಗಳ ಭೂಮಿಯ ಸರ್ವೆ ಕಾರ್ಯ ಮುಗಿಯುವ ಹಂತದಲ್ಲಿದೆ. ಪಕ್ಕಾಪೋಡಿ ಕಾರ್ಯ ಇನ್ನು 10 ರಿಂದ 15 ದಿನಗಳಲ್ಲಿ ಪೂರ್ಣಗೊಳಿಸಲಾಗುವುದೆಂದು ಜಿಲ್ಲಾಧಿಕಾರಿ ಜಿ.ಅಭಿರಾಂ ಶಂಕರ್ ಭರವಸೆ ನೀಡಿದರು.
ನಾಗರಹೊಳೆಯಿಂದ ಪುನರ್ವಸತಿಗೊಂಡಿರುವ ತಾಲೂಕಿನ ನಾಗಪುರ ಆದಿವಾಸಿ ಕೇಂದ್ರಕ್ಕೆ ಭೇಟಿ ನೀಡಿ ಆದಿವಾಸಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾತನಾಡಿದ ಅವರು, ಎರಡು ದಶಕಗಳಿಂದ ವಾಸಿಸುತ್ತಿರುವ ಆದಿವಾಸಿಗಳಿಗೆ ಮೂಲಸೌಕರ್ಯ ಹಾಗೂ ಮೀಸಲಿಟ್ಟ ಭೂಮಿಯ ಸಾಗುವಳಿ ಪತ್ರ ನೀಡುವ ಕಾರ್ಯ ಇನ್ನೊಂದು ವಾರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಪುನರ್ವಸತಿ ಕೇಂದ್ರದ 1, 2, 3 ಮತ್ತು 6 ಘಟಕಗಳ ಸರ್ವೇ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಉಳಿದಿರುವ ಇನ್ನೆರಡು ಘಟಕಗಳ ಪಕ್ಕಾಪೋಡಿ ಕಾರ್ಯ ನಡೆಸಿ 6 ಘಟಕಗಳ ನಿವಾಸಿಗಳಿಗೆ ಒಟ್ಟಿಗೆ ಸಾಗುವಳಿ ಪತ್ರ ವಿತರಿಸಲಾಗುವುದು. ಈ ನಿಟ್ಟಿನಲ್ಲಿ ಪ್ರತಿ ಮನೆಗೆ ತೆರಳಿ ಮೂಲ ಫಲಾನುಭವಿಗಳು, ವಾರಸುದಾರರ ಮಾಹಿತಿಯನ್ನು ಪಡೆಯಲಾಗುತ್ತಿದೆ. ಸರ್ವೇ ಕಾರ್ಯದ ವೇಳೆ ಕಂದಾಯ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಸರ್ವೇ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಪಿಟಿಸಿಎಲ್ ಕಾಯ್ದೆಯಡಿ ಪ್ರಕರಣ ದಾಖಲಿಸಿ: ಪುನರ್ವಸತಿಗರಿಗಾಗಿ ಮೀಸಲಿಟ್ಟ 731 ಹೆಕ್ಟೇರ್ ಪ್ರದೇಶದ ಸುತ್ತ ಆನೆಕಂದಕ ನಿರ್ಮಾಣ ಮಾಡಬೇಕಿದೆ. ಪ್ರಮುಖವಾಗಿ ಆದಿವಾಸಿಗಳಿಗೆ ಮೀಸಲಿಟ್ಟ ಭೂಮಿಯನ್ನು ಇತರೆ ಜನಾಂಗದವರು ಒತ್ತುವರಿ ಮಾಡಿಕೊಂಡಿದ್ದಾರೆ.
ಒತ್ತುವರಿ ತೆರವುಗೊಳಿಸಿ, ಅರಣ್ಯ ಹಕ್ಕು ಕಾಯ್ದೆ ಹಾಗೂ ಪಿಟಿಸಿಎಲ್ ಕಾಯ್ದೆಯಡಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು. ಈ ಹಿಂದೆ ಹುಣಸೂರಿನಲ್ಲಿ ಎಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಹರೀಶ್‌ಪಾಂಡೆ ಕೆಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು.
ಆದರೂ ಒತ್ತುವರಿಯೊಂದಿಗೆ ಜಮೀನು ಗುತ್ತಿಗೆಗೆ ಪಡೆಯುವ ಕಾರ್ಯ ಮುಂದುವರಿದಿದೆ. ಇದನ್ನು ತಡೆಯದ ಹೊರತು ನಮ್ಮ ಜನಾಂಗದ ಅಭಿವೃದ್ಧಿ ಸಾಧ್ಯವಿಲ್ಲ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆದಿವಾಸಿ ವ್ಯವಸಾಯ ಆಂದೋಲನ ಸಮಿತಿಯ ಮುಖಂಡ ಹರೀಶ್ ಆಗ್ರಹಿಸಿದರು.
ಗಿರಿಜನರ ದೂರುಗಳನ್ನು ಆಲಿಸಿದ ಜಿಲ್ಲಾಧಿಕಾರಿ ನಿಖರವಾದ ದೂರನ್ನು ಆಧರಿಸಿ ಕಾನೂನು ಕ್ರಮ ಜರುಗಿಸಲಾಗುವುದೆಂದು ಭರವಸೆ ನೀಡಿದರು. ಉಪವಿಭಾಗಾಧಿಕಾರಿ ಕೆ.ನಿತೀಶ್, ತಹಶೀಲ್ದಾರ್ ಮಹೇಶ್, ಗಿರಿಜನ ಮುಖಂಡರಾದ ಪ್ರಭು, ಮಣಿ, ಹರೀಶ್ ಚೆನ್ನಪ್ಪ ಇತರರಿದ್ದರು.