Advertisement

ಸಿಎಂ ಭೇಟಿ: ಪ್ರತಿಭಟನೆಗೆ ಅವಕಾಶ ಬೇಡ

01:38 PM Dec 31, 2017 | |

ಪುತ್ತೂರು: ಜನವರಿ 7ರಂದು ಮಧ್ಯಾಹ್ನ 1 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ತೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭ ಯಾವುದೇ ರೀತಿಯ ಪ್ರತಿಭಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್‌ ಇಲಾಖೆಗೆ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಸೂಚಿಸಿದರು.

Advertisement

ಸಿಎಂ ಭೇಟಿ ಹಿನ್ನೆಲೆಯಲ್ಲಿ ಪುತ್ತೂರು ಮಿನಿ ವಿಧಾನಸೌಧದ ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪುತ್ತೂರಿನಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ನಿಗದಿಯಾಗಿದೆ. ಅರ್ಧ ಗಂಟೆ ತಡವಾಗುವ ಸಾಧ್ಯತೆಯೂ ಇದೆ. ಒಟ್ಟು ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಬೇಕು. ಕಾರ್ಯಕ್ರಮದಲ್ಲಿ ಶಿಸ್ತು ಇರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ತಂಡವಾಗಿ ಯೋಜನೆ ರೂಪಿಸಿ, ಕೆಲಸ ಮಾಡಬೇಕು. ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಿ. ಈ ಬಗ್ಗೆ ಸಹಾಯಕ ಆಯುಕ್ತ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಿ, ಯಾವುದೇ ಸಮಸ್ಯೆ ಆಗದಂತೆ ಪೊಲೀಸ್‌ ಇಲಾಖೆ ಕ್ರಮ ವಹಿಸಬೇಕು. ಯಾವುದೇ ಸಮಸ್ಯೆಗಳಿದ್ದರೆ ಮೊದಲೇ ಚರ್ಚಿಸಿ, ಬಗೆಹರಿಸಿಕೊಳ್ಳಿ. ಸಹಾಯಕ ಆಯುಕ್ತರು ಈ ಬಗ್ಗೆ ಸೂಕ್ತ ಸೂಚನೆ ನೀಡುತ್ತಾರೆ ಎಂದರು.

ವೇದಿಕೆ ಆರಾಮವಾಗಿ ಇರಬೇಕು. ಜನರು ವೇದಿಕೆಯಲ್ಲಿ ತಾಳ್ಮೆ ಕಳೆದುಕೊಂಡವರಂತೆ ಕಾಣಬಾರದು. ಹೆಲಿಪ್ಯಾಡ್‌ನಿಂದ ಇಳಿದು ಸಿಎಂ ನೇರವಾಗಿ ಮೈದಾನಕ್ಕೆ ಬರಲಿದ್ದಾರೆ. ಬಳಿಕ ನಿರೀಕ್ಷಣ ಮಂದಿರದಲ್ಲಿ ಭೋಜನ ಸ್ವೀಕರಿಸುವರು. ತುರ್ತು ಕೆಲಸಕ್ಕಾಗಿ ವೇದಿಕೆ ಪಕ್ಕದಲ್ಲೇ ಪೊಲೀಸ್‌ ವ್ಯಾನ್‌ ಸಿದ್ಧವಾಗಿರಲಿ. ಊಟ ಸಹಿತ ಎಲ್ಲ ಕೆಲಸಗಳಿಗಾಗಿ ಅಧಿಕಾರಿಗಳ ಬೆಂಬಲ ಬೇಕು. ಕೆಲಸಕ್ಕಾಗಿ ಸಿಬಂದಿ ನಿಯೋಜಿಸಿ ಎಂದು ತಿಳಿಸಿದರು.

ಫಲಾನುಭವಿಗಳು ಬರಲಿ
ಸರಕಾರದ ಯೋಜನೆಗಳ ಫಲಾನುಭವಿಗಳು ಸಭೆಗೆ ಬರಬೇಕು. ಅಂತಹವರನ್ನು ಸ್ವತಃ ಅಧಿಕಾರಿಗಳೇ ಸಂಪರ್ಕಿಸಿ ಆಹ್ವಾನಿಸಬೇಕು. ಫಲಾನುಭವಿಗಳ ಕುಟುಂಬದವರೂ ಬರಲಿ. ಸರಕಾರ ಈ ಬಾರಿ ಅತಿ ಹೆಚ್ಚು ಅನುದಾನ ನೀಡಿದ್ದು ಹಾಸ್ಟೆಲ್‌ ಮತ್ತು ವಿದ್ಯಾರ್ಥಿಗಳಿಗೆ. ಆದ್ದರಿಂದ ಅವರ ಉಪಸ್ಥಿತಿ ಅಗತ್ಯ ಎಂದು ಬಿಇಒಗೆ ಸೂಚಿಸಿದರು.

22 ಶಂಕುಸ್ಥಾಪನೆ
ವಿವಿಧ ಕಾಮಗಾರಿಗಳ 22 ಶಂಕುಸ್ಥಾಪನೆ ಸಮಾರಂಭ ನಡೆಯಲಿದೆ. ಒಂದೇ ರಿಮೋಟ್‌ ನಲ್ಲಿ 22 ಕಲ್ಲುಗಳ ಪರದೆ ಸರಿಯುವಂತೆ ವ್ಯವಸ್ಥೆ ಮಾಡಬೇಕು ಎಂದರು. ಇಲಾಖೆಗಳ ಕಲ್ಲುಗಳಲ್ಲಿ ಎಲ್ಲ ಸಚಿವರ ಹೆಸರನ್ನು ದಾಖಲಿಸಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಎಲ್ಲ ಕಲ್ಲುಗಳಲ್ಲಿ ಉಪಸ್ಥಿತರಿರುವ ಸಚಿವರ ಹೆಸರು ಇರಲಿ ಎಂದರು. ಶಾಸಕಿ ಶಕುಂತಳಾ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಕುಮಾರ್‌, ಸಹಾಯಕ ಆಯುಕ್ತ ರಘುನಂದನ ಮೂರ್ತಿ ಉಪಸ್ಥಿತರಿದ್ದರು.

Advertisement

ಕೊನೆಯ ಭೇಟಿ
ವಿವಿಧ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಗುವುದು. ವೇದಿಕೆಗೆ ಹೋಗುವವರ ಪಟ್ಟಿಯನ್ನು ಮೊದಲೇ ಸಿದ್ಧಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳ ಈ ಅವಧಿಯ ಕೊನೆಯ ಭೇಟಿ ಇದು. ಆದ್ದರಿಂದ ಕಾರ್ಯಕ್ರಮ ಶಿಸ್ತುಬದ್ಧವಾಗಿರಬೇಕು. ಮೈಕ್‌, ವಿದ್ಯುತ್‌ ಕೈಕೊಡಬಾರದು. ಜನರೇಟರ್‌ ವ್ಯವಸ್ಥೆ ಮಾಡಿಕೊಳ್ಳಿ ಎಂದು ಮೆಸ್ಕಾಂಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next