Advertisement

ಲೋಕಾಪುರಕ್ಕೆ ಜಿಲ್ಲಾಧಿಕಾರಿ ಭೇಟಿ-ಪರಿಶೀಲನೆ

01:02 PM Jun 23, 2022 | Team Udayavani |

ಲೋಕಾಪುರ: ಪಟ್ಟಣಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಬುಧವಾರ ಭೇಟಿ ನೀಡಿ ಮುಖಂಡರಿಂದ ಪಟ್ಟಣದ ಸಮಸ್ಯೆಗಳ ಬಗ್ಗೆ ಆಲಿಸಿದರು. ಮುಖಂಡ ಲೋಕಣ್ಣ ಕತ್ತಿ ಮಾತನಾಡಿ, ಈ ಹಿಂದೆ ಗ್ರಾಪಂಯಲ್ಲಿ ಪಟ್ಟಣದಲ್ಲಿರುವ ಮನೆಗಳಿಗೆ ನಮೂನೆ. ನಂ.9 ಪ್ರಕಾರ ಉತಾರೆ ನೀಡಿದ್ದು, ಈಗ ಪಪಂಯಲ್ಲಿ ಸದರಿ ಆಸ್ತಿಗಳಿಗೆ ಮನೆ ಉತಾರೆ ನೀಡುತ್ತಿಲ್ಲ. ಪಪಂಯವರು ಮನಸ್ಸಿಗೆ ಬಂದಂತೆ ಆಸ್ತಿ ತೆರಿಗೆ ನಿಗದಿಪಡಿಸಿದ್ದು ಮತ್ತು ಮನಸ್ಸಿಗೆ ಬಂದವರಿಗೆ ಉತಾರೆ ನೀಡುತ್ತಿದ್ದಾರೆ. ಇದರಿಂದ ಬಡಜನರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಪಟ್ಟಣದ 1, 2, 3, 4 ಹಳೇ ವಾರ್ಡ್‌ಗಳಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ರೋಗ, ರುಜಿನುಗಳು ಹರಡುವ ಸಂಭವವಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಎದುರು ಅಳಲು ತೋಡಿಕೊಂಡರು.

Advertisement

ನಂತರ ಪಪಂಗೆ ತೆರಳಿ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಲೋಕಾಪುರ ಗ್ರಾಮ ಠಾಣೆ ವ್ಯಾಪ್ತಿಯ ಮನೆಗಳು, ಬಿನ್‌ಶೇತ್ಕಿಯಾದ ಜಮೀನುಗಳು, ಕೆಜೆಪಿ ಆಗದಿರುವ ಜಮೀನುಗಳಲ್ಲಿ ಮನೆಗಳ ಬಗ್ಗೆ ಸ್ಥಳ ತನಿಖೆ ಮಾಡಿ ಸೂಕ್ತ ಮಾಹಿತಿ ತಯಾರಿಸಿ, ಗ್ರಾಪಂಯಲ್ಲಿ ನಮೂನೆ. ನಂ.9ರಲ್ಲಿ ದಾಖಲಿಸಿರುವ ಬಗ್ಗೆ ಸಂಪೂರ್ಣ ಪರಿಶೀಲಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದರು.

ಲೋಕಾಪುರ ಪಟ್ಟಣದಲ್ಲಿ ಪೂರೈಕೆಯಾಗುತ್ತಿರುವ ಕಲುಷಿತ ನೀರಿನ ಬಗ್ಗೆ ಸ್ಥಳ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಮುಧೋಳ ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಹಶೀಲ್ದಾರ್‌ ವರ್ಚಗಲ್‌ದಲ್ಲಿರುವ ಬಹುಗ್ರಾಮಗಳ ಕುಡಿವ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಖ್ಯಾಧಿಕಾರಿಗಳು ಹಾಗೂ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಯವರಿಗೆ ಕಲುಷಿತ ನೀರು ಸರಬರಾಜು ಆಗದಂತೆ ಕ್ರಮ ಜರುಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ವೇಳೆ ಜಮಖಂಡಿ ಉಪ ವಿಭಾಗಾಧಿಕಾರಿ ಸಿದ್ದು ಹಲ್ಲೋಳ್ಳಿ, ತಹಶೀಲ್ದಾರ್‌ ವಿನೋದ ಹತ್ತಳ್ಳಿ, ತಾಪಂ ಇಒ ಕಿರಣ ಘೋರ್ಪಡೆ, ಉಪ ತಹಶೀಲ್ದಾರ್‌ ಎಂ.ಬಿ. ಪಾಂಡವ, ಕಂದಾಯ ನಿರೀಕ್ಷಕ ಸತೀಶ ಬೇವೂರ, ಪಪಂ ಮುಖ್ಯಾಧಿ ಕಾರಿ ಮಾರುತಿ ನಡುವಿನಕೇರಿ, ಮುಖಂಡರಾದ ಅರುಣ ಕಾರಜೋಳ, ಲೋಕಣ್ಣ ಕತ್ತಿ, ಭೀಮಶೆಪ್ಪ ಹಲಕಿ, ಯಮನಪ್ಪ ಹೊರಟ್ಟಿ, ವೀರೇಶ ಪಂಚಕಟ್ಟಿಮಠ, ವಿನೋಧ ಘೋರ್ಪಡೆ, ಪರಮಾನಂದ ಟೋಪಣ್ಣವರ, ಬಿ.ಎಲ್‌. ಬಬಲಾದಿ, ಮಾರುತಿ ರಂಗಣ್ಣವರ, ಪ್ರಮೋದ ತೆಗ್ಗಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next