Advertisement

ವಿಶ್ವೇಶ್ವರಯ್ಯ ಅವರ ಆದರ್ಶ ಅನುಕರಣೀಯ: ಸುನಿಲ್‌ ಕುಮಾರ್‌

10:18 PM Sep 16, 2019 | Sriram |

ಕಾರ್ಕಳ: ಎಂಜಿನಿಯರ್ ದಿನವು ಕೇವಲ ಆಚರಣೆಗೆ ಸೀಮಿತವಾಗದೆ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಆದರ್ಶವನ್ನು ಅನುಕರಣೆ ಮಾಡಿಸುವಂತಿರಬೇಕು. ಅವರ ಪ್ರಾಮಾಣಿಕತೆ, ಸರಳತೆ, ಆದರ್ಶವನ್ನು ಪ್ರತಿಯೊಬ್ಬ ಎಂಜಿನಿಯರ್‌ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಾಗ ಆಚರಣೆ ಸಾರ್ಥಕತೆ ಕಾಣುವುದು ಎಂದು ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಕಾರ್ಕಳ ಸಿವಿಲ್‌ ಎಂಜಿನಿಯರ್ ಅಸೋಸಿಯೇಶನ್‌ ವತಿಯಿಂದ ಸೆ. 15ರಂದು ಹೊಟೇಲ್‌ ಪ್ರಕಾಶ್‌ನ ಉತ್ಸವ ಸಭಾಂಗಣದಲ್ಲಿ ಜರಗಿದ ಎಂಜಿನಿಯರ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯೋಜನೆ ರೂಪಿಸಿ
ಸುಂದರ ಕಾರ್ಕಳ ನಿರ್ಮಿಸುವ ಕಲ್ಪನೆ ನಿಟ್ಟಿನಲ್ಲಿ ಎಂಜಿನಿಯರ್‌ಗಳು ಯೋಜನೆಯೊಂದನ್ನು ರೂಪಿಸಿ. ಅದಕ್ಕಾಗಿ ಅನುದಾನ ಮಂಜೂರುಗೊಳಿಸುವ ಜವಾಬ್ದಾರಿ ನನ್ನದು ಎಂದು ಶಾಸಕರು ಹೇಳಿದರು.

ಮಂಗಳೂರು ಸೆಂಟ್ರಲ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ ಅಸೋಸಿಯೇಶನ್‌ನ ಮಾಜಿ ಉಪಾಧ್ಯಕ್ಷ ವಿಜಯ ವಿಷ್ಣು ಮಯ್ಯ ಮಾತನಾಡಿ, ಸಿವಿಲ್‌ ಎಂಜಿನಿಯರ್‌ಗಳು ಕೇವಲ ಮನೆ ಅಥವಾ ರಸ್ತೆ ನಿರ್ಮಾಣಕ್ಕೆ ಸೀಮಿತವಲ್ಲ. ಅವರು ತಮ್ಮ ನಗರವನ್ನು ಸುಂದರ ನಗರವನ್ನಾಗಿ ರೂಪಿಸುವಲ್ಲಿ ಪ್ರಯತ್ನಿಸಬೇಕು. ಆರ್ಥಿಕ ಹಿಂಜರಿತ ಸಮಸ್ಯೆಯಲ್ಲ, ಅದೊಂದು ಸವಾಲು. ಮನಸ್ಸಿನಲ್ಲಿ ದೂರದರ್ಶಿತ್ವ ಇದ್ದಾಗ ಮಾತ್ರ ಬದಲಾವಣೆ ಸಾಧ್ಯ. ಮರಳು ಸಮಸ್ಯೆಗೆ ನಮ್ಮ ನಿರ್ಲಿಪ್ತತೆಯೇ ಕಾರಣ. ಹೋರಾಟದ ಮನೋಭಾವವಿರುತ್ತಿದ್ದಲ್ಲಿ ಅದರ ಸಮಸ್ಯೆ ನಿವಾರಣೆಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಅಸೋಸಿಯೇಶನ್‌ನ ನೂತನ ಅಧ್ಯಕ್ಷ ಹಿತೇಶ್‌ ಕುಮಾರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸಮ್ಮಾನ
ಉಡುಪಿ ಯೋಜನ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಸುರೇಶ್‌ ಶೆಟ್ಟಿ ಅವರಿಗೆ ಗೋಲ್ಡನ್‌ ಎಂಜಿನಿಯರ್‌ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಈ ಸಂದರ್ಭ ಪುರಸ್ಕರಿಸಲಾಯಿತು. ಎನ್‌. ಎಂ. ಹೆಗ್ಡೆ ಸಮ್ಮಾನ ಪತ್ರ ವಾಚಿಸಿದರು.

Advertisement

ಮಂಗಳೂರು ಎಸ್ಸೆನ್‌ ಎಂಟರ್‌ಪ್ರçಸಸ್‌ನ ನವೀನಚಂದ್ರ ಪೈ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್‌ ಲಿಮಿಟೆಡ್‌ನ‌ ತಾಂತ್ರಿಕ ಮುಖ್ಯಸ್ಥ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅಧ್ಯಕ್ಷ ದಿವಾಕರ ಶೆಟ್ಟಿ ಸ್ವಾಗತಿಸಿ, ಪ್ರಶಾಂತ್‌ ಬೆಳ್ಳಿರಾಯ ಪ್ರಸ್ತಾವನೆಗೈದರು. ಕಾರ್ಯದರ್ಶಿ ರಾಜೇಶ್‌ ಕುಂಟಾಡಿ ವರದಿ ವಾಚಿಸಿದರು. ಹರೀಶ್‌ ಅಂಚನ್‌, ಗಿರೀಶ್‌ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ಪ್ರಮಲ್‌ ಕುಮಾರ್‌ ವಂದಿಸಿದರು.

15 ದಿನಗಳಲ್ಲಿ ಮರಳು ಸಮಸ್ಯೆ ನಿವಾರಣೆ
ಮರಳು ಕುರಿತಾಗಿರುವ ತೊಡಕನ್ನು ನಿವಾರಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿ ಹಾಗೂ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ಮುಂದಿನ 15 ದಿನಗಳಲ್ಲಿ ಜಿಲ್ಲೆಯಲ್ಲಿ ತಲೆದೋರಿರುವ ಸಮಸ್ಯೆ ಪರಿಹಾರವಾಗಲಿದೆ. 9/11 ಬಗೆಗಿನ ನಿಯಮ ಸರಳೀಕರಣಗೊಳಿಸುವ ನಿಟ್ಟಿನಲ್ಲೂ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಸುನಿಲ್‌ ಕುಮಾರ್‌ ಈ ಸಂದರ್ಭ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next