Advertisement

ಪದವೀಧರ ಯಕ್ಷಗಾನ ಸಮಿತಿಗೆ ವಿಶ್ವೇಶ ತೀರ್ಥ ಪ್ರಶಸ್ತಿ

06:26 PM Nov 14, 2019 | mahesh |

ಈ ವರ್ಷದ ಶ್ರೀ ವಿಶ್ವೇಶ ತೀರ್ಥ ಪ್ರಶಸ್ತಿಗೆ ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಆಯ್ಕೆಯಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭ ನ.17ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ. ಯಕ್ಷಗಾನಕ್ಕೆ ಎಚ್‌.ಬಿ.ಎಲ್‌. ರಾವ್‌ ನೇತೃತ್ವದ ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಇದರ ಕೊಡುಗೆ ದಾಖಲಾರ್ಹ. 1950-60ರ ದಶಕದಲ್ಲಿ ಮುಂಬಯಿಗೆ ಹೋಗಿ ಅಲ್ಲಿ ನೆಲೆನಿಂತವರು ಯಕ್ಷಗಾನವನ್ನು ಸಂಘಟಿಸಿದ್ದು ಮುಖ್ಯವಾಗಿ ಪ್ರದರ್ಶನ ನೋಡಿ ಆನಂದಿಸುವುದಕ್ಕೇ ಹೌದಾದರು ಅದರಿಂದ ಈ ಕಲಾ ಪ್ರಕಾರಕ್ಕಾದ ಲಾಭ ಗಮನಾರ್ಹ.

Advertisement

1973ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ ಐದು ದಶಕದ ಕಾಲಾವಧಿಯಲ್ಲಿ ಮಾಡಿದ ಸಾಧನೆ ಬಹುಮುಖೀ. ಪ್ರದರ್ಶನ, ಸಮ್ಮಾನ, ಸಮ್ಮೇಳನ ಮತ್ತು ಪುಸ್ತಕ ಪ್ರಕಟಣೆಯತ್ತ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿದೆ. ನಿರಂತರ ಕಾರ್ಯಕ್ರಮ ನಡೆಸುತ್ತಾ ಕಲಾವಿದರನ್ನು, ಕಲಾವಿದ್ವಾಂಸರನ್ನು ಮಾನಿಸುತ್ತಾ ಬಂದಿದೆ.

ಪದವೀಧರ ಯಕ್ಷಗಾನ ಸಮಿತಿ ಆರಂಭದಲ್ಲಿ ಯಕ್ಷಗಾನ ಪ್ರದರ್ಶನ ನೀಡುವುದಕ್ಕಷ್ಟೇ ಸೀಮಿತವಾಗಿತ್ತು. ತರಬೇತಿಯೊಂದಿಗೆ ಮುಂಬಯಿ ಮತ್ತು ಕರ್ನಾಟಕದ ಅನ್ಯಾನ್ಯ ಪ್ರದೇಶಗಳಲ್ಲಿ ರಾಜಧಾನಿ ದೆಹಲಿಯಲ್ಲಿ ಪ್ರದರ್ಶನ ನೀಡಿದೆ. ಹವ್ಯಾಸಿ ತಂಡವಾಗಿದ್ದು ಸ್ವಂತ ವೇಷಭೂಷಣ ಹಿಮ್ಮೇಳ ಪರಿಕರ ಹೊಂದಿರುವುದು ಇನ್ನೊಂದು ವೈಶಿಷ್ಟé. ಮುಂಬಯಿಯಲ್ಲಿ 16 ಬಾರಿ ಯಕ್ಷಗಾನ ಸಾಹಿತ್ಯ ಸಮ್ಮೇಳನ ನಡೆಸಿದ ಖ್ಯಾತಿಗೆ ಸಂಘಟನೆ ಪಾತ್ರವಾಗಿದೆ. ಯಕ್ಷಸೌರಭ, ಯಕ್ಷಪದ್ಮ, ಯಕ್ಷರತ್ನ, ಯಕ್ಷಸುಧಾ, ಯಕ್ಷಲಕ್ಷ್ಮೀ, ಯಕ್ಷದರ್ಪಣ, ಯಕ್ಷನೂಪುರ ಹೀಗೆ ಸುಂದರ ಶಿರೋನಾಮೆಯೊಂದಿಗೆ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದೆ. ಬಣ್ಣದ ವೇಷ, ಹಾಡುಗಾರಿಕೆಯ ಕಮ್ಮಟ ನಡೆಸಿದೆ. ಯಕ್ಷಗಾನದ ಪ್ರಸಂಗ ಸಾಹಿತ್ಯವನ್ನು ಪ್ರಕಟಿಸುವಲ್ಲಿ ಈ ಸಂಸ್ಥೆ ಮಹಣ್ತೀದ ಮೈಲಿಗಲ್ಲು ಸ್ಥಾಪಿಸಿದೆ. ಈ ವರೆಗೆ 153 ಪ್ರಸಂಗ ಕೃತಿಗಳು ಪ್ರಕಟವಾಗಿವೆ. ಇವುಗಳಲ್ಲಿ ಹಲವು ಅಜ್ಞಾತ ಕವಿಗಳ ಅಪ್ರಕಟಿತವಾಗಿದ್ದ ಅಮೂಲ್ಯ ಕೃತಿಗಳೆಂಬುದು ಗಮನಾರ್ಹ. ಅತ್ಯುತ್ತಮ ಯಕ್ಷಗಾನ ಧ್ವನಿ ಸುರುಳಿಗಳನ್ನು ಬಿಡುಗಡೆ ಮಾಡಿದೆ.

ತಾಳಮದ್ದಲೆ ಸಪ್ತಾಹವನ್ನೇರ್ಪಡಿಸಿ ಶ್ರೇಷ್ಠ ಅರ್ಥಧಾರಿಗಳ ಮೌಲಿಕ ಕೂಟಗಳ ಮೂಲಕ ಮುಂಬಯಿಯ ಕಲಾರಸಿಕರಿಗೆ ಮಾತುಗಾರಿಕೆಯ ರಸದೌತಣ ಬಡಿಸಿದೆ. ಹಿರಿಯ ಅರ್ಥಧಾರಿಗಳನ್ನು ಕಲಾವಿದರನ್ನು ಗುರುತಿಸಿ ಗೌರವಿಸಿದೆ. ಹಲವಾರು ಕಲಾ ಸಂಘಟನೆಗಳನ್ನು ಪುರಸ್ಕರಿಸಿ ಪ್ರೋತ್ಸಾಹಿಸಿದೆ.

ಪ್ರೊ| ನಾರಾಯಣ ಎಂ. ಹೆಗಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next