ಲಕ್ಷ್ಮೇಶ್ವರ: ಕೃಷಿಯಿಂದ ಕೈಸುಟ್ಟುಕೊಳ್ಳುತ್ತಿರುವ ರೈತ ಸಮುದಾಯ ಇದರಿಂದ ವಿಮುಖರಾಗುತ್ತಿದ್ದಾರೆ.ಆದರೆ ಭೂಮಿತಾಯಿ ನಂಬಿದವರನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸದಿಂದ ಸಮೀಪದ ಚಿಕ್ಕಸವಣೂರ ಗ್ರಾಮದ ಯುವ ಪ್ರಗತಿಪರ ರೈತ ವಿಶ್ವನಾಥರೆಡ್ಡಿ ಮಲ್ಲಪ್ಪ ಗೋಕಾವಿ ಕೃಷಿಯಿಂದಲೇ ಬದುಕಿನಲ್ಲಿ ಖುಷಿ ಕಂಡಿದ್ದಾರೆ.
ಮೂಲತಃ ಕೃಷಿ ಕುಟುಂಬದಿಂದಲೇ ಬಂದಿರುವ ವಿಶ್ವನಾಥ ಅವರು ತಮ್ಮ ತಂದೆ ಮಲ್ಲಪ್ಪನವರು ಕೋಟಿ ವಿದ್ಯೆಗಿಂತ ಮೇಟಿವಿದ್ಯೆ ಮೇಲು ಎಂದು ವಿಶ್ವನಾಥ ಅವರಲ್ಲಿ ತುಂಬಿದ ವಿಶ್ವಾಸ ಅವರನ್ನೀಗ 2019-20 ನೇ ಸಾಲಿನ ತಾಲೂಕು ಮಟ್ಟದ ಶ್ರೇಷ್ಠ ಯುವ ಕೃಷಿಕನನ್ನಾಗಿ ಗುರುತಿಸುವಂತೆ ಮಾಡಿದೆ. ಜ.20ರಂದು ಧಾರವಾಡದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅವರು ತಮ್ಮ ಒಟ್ಟು 15 ಎಕರೆ ನೀರಾವರಿ ಪ್ರದೇಶದಲ್ಲಿ 3 ಎಕರೆ ಜಮೀನಿನಲ್ಲಿ ವಿವಿಧ ಸಸ್ಯಗಳು, ಮರಗಳು, ಹಣ್ಣು-ಹಂಪಲಗಳನ್ನು ಬೆಳೆಯುವುದರ ಜತೆಗೆ ಆಡು, ಕುರಿ, ಕೋಳಿ, ಆಕಳು ಸಾಕಾಣಿಕೆಯಉಪ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.
ಇವರು ಸಮಗ್ರ ಕೃಷಿಯಲ್ಲಿ ಖುಷಿ ಕಂಡುಕೊಂಡಿದ್ದು ದೀರ್ಘಕಾಲಿನ ಉತ್ತಮ ಆದಾಯ ತರುವ 1150 ಮಹಾಗಣಿ ಸಸ್ಯ, 1150 ಶ್ರೀಗಂಧ, 5 ಎಕರೆ( 400 ಗಿಡ) ಗೋಡಂಬಿ, ತೋಟಗಾರಿಕೆಯ ಇತರೆ ಬೆಳೆಗಳಾದ ಪಪ್ಪಾಯಿ, ಕರಬೇವು, ಪೇರಲ, ಮಾವು,ನುಗ್ಗೆ ಬೆಳೆಯಲಾಗಿದೆ. ಹಡಗು ನಿರ್ಮಾಣ ಮತ್ತು ಮುಖ್ಯವಾದ ಪಿಠೊಪಕರಣಗಳಿಗೆ ಬಳಸುವ ಅತ್ಯಂತ ಬೆಲೆ ಬಾಳುವ ಮಹಾಗಣಿ ಮತ್ತು ಶ್ರೀಗಂಧ ಸಸ್ಯ ಬೆಳೆಸುತ್ತಿದ್ದಾರೆ. ಇವುಗಳು 10-12 ವರ್ಷಕ್ಕೆ ಕಡಿಮೆ ಖರ್ಚಿನಲ್ಲಿ ಸಾಕಷ್ಟು ಆದಾಯ ತರುವ ಮರಗಳಾಗುತ್ತವೆ.
ಆಡು-ಕುರಿ-ಕೋಳಿ ಸಾಕಾಣಿಕೆ: ಕೊಟ್ಟಿಗೆ ಪದ್ಧತಿಯಲ್ಲಿ ವಿನೂತವಾಗಿ ಕುರಿ, ಆಡು, ಕೋಳಿ ಸಾಕಾಣಿಕೆಯಕೈಗೊಳ್ಳುವ ಮೂಲಕ ವರ್ಷದುದ್ದಕ್ಕೂ ಉತ್ತಮ ಆದಾಯ ತಂದುಕೊಳ್ಳುವ ಉಪಕಸುಬು ಮಾಡುತ್ತಿದ್ದಾರೆ. ಆಡು-ಕುರಿ ಮತ್ತು ಆಕಳಿಗಾಗಿ ತೋಟದಲ್ಲಿಕುದರಿಮೆಂತೆ, ಬೇಲಿ ಮೆಂತೆ, ರೇಷ್ಮೆ ಸೇರಿ ವಿಭಿನ್ನ ಜಾತಿಯ ಹುಲ್ಲುಗಳನ್ನು ಬೆಳೆಸುವ ಮೂಲಕ ಹಸಿರು ಮೇವನ್ನು ಬೆಳೆಯುತ್ತಾರೆ. ಈ ಉಪ ಕಸುಬುಗಳಿಂದ ವರ್ಷಕ್ಕೆ 5 ಲಕ್ಷ ರೂ. ಆದಾಯ ತಂದುಕೊಳ್ಳುತ್ತಾರೆ. ಅಲ್ಲದೇ ಇದರಿಂದ ಬರುವ ಗೊಬ್ಬರವನ್ನು ತೋಟಕ್ಕೆ ಬಳಸಿ ಸಂಪೂರ್ಣ ಸಾವಯುವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.
ಸಮಗ್ರ ಕೃಷಿಯಿಂದ ಬದುಕು ಕಟ್ಟಿಕೊಂಡಿದ್ದಲ್ಲದೇ ನಾಲ್ಕಾರು ಜನರಿಗೂ ಉದ್ಯೋಗ ಕಲ್ಪಿಸುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಇವರ ಸಾಧನೆಯನ್ನು ಮನಗಂಡ ತೋಟಗಾರಿಕೆ ಮತ್ತು ಕೃಷಿ ಇಲಾಖೆಯವರು 2019-20ನೇ ಸಾಲಿನ
ತಾಲೂಕು ಮಟ್ಟದ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಜ.18 ರಿಂದ 20 ರವರೆಗೆ ಧಾರವಾಡದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಈ ಪ್ರಶಸ್ತಿ ಪಡೆಯಲಿದ್ದಾರೆ.