Advertisement

ವಿಶ್ವನಾಥ್‌ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ

11:16 PM Jun 16, 2019 | Lakshmi GovindaRaj |

ಬೆಂಗಳೂರು: “ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಎಚ್‌.ವಿಶ್ವನಾಥ್‌ ಅವರೇ ಮುಂದುವರಿಯಲಿದ್ದಾರೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

Advertisement

ಭಾನುವಾರ ಪಕ್ಷದ ಕಚೇರಿಯಲ್ಲಿ ಉಪ್ಪಾರ ಸಮುದಾಯದ ನಾಯಕರ ಸಭೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, “ವಿಶ್ವನಾಥ್‌ ರಾಜೀನಾಮೆ ನೀಡಿದ್ದಾರೆ. ಆದರೆ, ಅದನ್ನು ಅಂಗೀಕರಿಸುವುದಿಲ್ಲ. ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದರಿಂದ ಬೇರೆಯವರನ್ನು ಹುಡುಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಹೇಳಿದರು.

“ತುಮಕೂರಿನಲ್ಲಿ ನನ್ನ ಸೋಲಿಗೆ ಕಾಂಗ್ರೆಸ್‌ ನಾಯಕರಷ್ಟೇ ಕಾರಣ ಎಂದು ಹೇಳುವುದಿಲ್ಲ. ಎಲ್ಲರೂ ನನ್ನ ಪರ ಕೆಲಸ ಮಾಡಿದ್ದಾರೆ. ಯಾರೋ ಒಬ್ಬರ ಮೇಲೆ ಸೋಲಿನ ಹೊಣೆ ಹೊರಿಸುವುದು ಸರಿಯಲ್ಲ’ ಎಂದು ಹೇಳಿದರು.

“ನಾನು ಚುನಾವಣೆಯಲ್ಲಿ ಸೋತೆ ಎಂದು ಸುಮ್ಮನೆ ಕುಳಿತುಕೊಂಡಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ನಾನು ಚುನಾವಣೆಯಲ್ಲಿ ಗೆದ್ದಿದ್ದರೆ, ಮನೆಯಲ್ಲಿ ಪುಸ್ತಕ ಓದುತ್ತ ಕುಳಿತುಕೊಳ್ಳುತ್ತಿದ್ದೆ. ಈಗ ಮನೆಯಲ್ಲಿ ಕುಳಿತು ಪುಸ್ತಕ ಓದಲು ಕಾಲವಿಲ್ಲ. ಪುಸ್ತಕವನ್ನು ಮುಂದೆ ಓದಬಹುದು. ಈಗ ಪಕ್ಷ ಸಂಘಟನೆ ಮಾಡಬೇಕಿದೆ. ಅದನ್ನು ಮಾಡುತ್ತಿದ್ದೇನೆ’ ಎಂದು ಹೇಳಿದರು.

ಇದೇ ವೇಳೆ, ಸಂಪುಟಕ್ಕೆ ಇಬ್ಬರು ಪಕ್ಷೇತರರನ್ನು ಸೇರಿಸಿಕೊಂಡಿರುವುದನ್ನು ಸಮರ್ಥಿಸಿಕೊಂಡ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ತೀರ್ಮಾನ ಮಾಡಿದ್ದಾರೆ.

Advertisement

ಕಾಂಗ್ರೆಸ್‌ನಲ್ಲಿ ಶಿವಶಂಕರ ರೆಡ್ಡಿ ಹಾಗೂ ಕೃಷ್ಣ ಬೈರೇಗೌಡ ಹಾಗೂ ಜೆಡಿಎಸ್‌ನಲ್ಲಿ ಎಂ.ಸಿ. ಮನಗೂಳಿ ಅಗತ್ಯ ಬಿದ್ದರೆ, ಸರ್ಕಾರ ಉಳಿಸಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಸರ್ಕಾರ ಉಳಿಸಲು ಅನೇಕರು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧರಿರುವುದರಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ಇನ್ನು ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಬೇಡಿಕೆ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next