Advertisement
ಕೆಲ ವರ್ಷಗಳ ಹಿಂದೆ ಸುಳ್ಯ ತಾಲೂಕು ಅಡಿಕೆ ಬೆಳೆಗೆ ಪ್ರಸಿದ್ಧವಾಗಿತ್ತು. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸುಳ್ಯ ತಾಲೂಕು ಅಡಿಕೆ ಕೃಷಿಯಲ್ಲಿ ಮುಂಚೂಣಿಯಲ್ಲಿತ್ತು. ಇದೀಗ ಅಡಿಕೆ ಬೆಳೆಗೆ ಹಳದಿ ರೋಗ ಸಹಿತ ತಗಲಿರುವ ವಿವಿಧ ರೋಗಗಳಿಂದ ತಾಲೂಕಿನ ಅಡಿಕೆ ಕೃಷಿಕರು ದಿಕ್ಕು ತೋಚದೆ ಅರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಂತಹ ಅರ್ಥಿಕ ಸಂಕಷ್ಟ ಪರಿಸ್ಥಿತಿ ನಡುವೆ ಅನೇಕ ಅಡಿಕೆ ಕೃಷಿಕರು ಪರ್ಯಾಯ ಕೃಷಿಯತ್ತ ಅಲೋಚಿಸುತ್ತಿದ್ದಾರೆ.
ತಾಲೂಕಿನ ಅರಂತೋಡು ಗ್ರಾಮದ ವಿಶ್ವನಾಥ ಅಡ್ಕಬಳೆ ಅವರು ಒಂದು ಕಾಲದಲ್ಲಿ ಸುಮಾರು 10 ಎಕ್ರೆ ಭೂಮಿಯಲ್ಲಿ ತೆಂಗು, ಅಡಿಕೆ ಕೃಷಿ ಮಾಡುತ್ತಿದ್ದರು. ಹಿರಿಯರಿಂದ ಬಂದ ಕೃಷಿಭೂಮಿ ಅದು. ಸುಮಾರು 25 ಕ್ವಿಂಟಲ್ ಅಡಿಕೆ ಬೆಳೆಯುತ್ತಿದ್ದರು. ಆದರೆ, ಅಡಿಕೆ ಕೃಷಿ ಹಳದಿ ರೋಗದಿಂದ ಸಂಪೂರ್ಣ ನಾಶಗೊಂಡಿತು. ಹಾಗೆಂದು ಚಿಂತಿಸುತ್ತ ಕೂರದೆ ಅಡಿಕೆ ಕೃಷಿ ಇದ್ದ ಜಾಗದಲ್ಲಿ 150 ತಾಳೆ ಗಿಡಗಳನ್ನು ನೆಟ್ಟು, ಬೆಳೆಸಿ, ಆರ್ಥಿಕ ಸಂಕಷ್ಟ ಪರಿಸ್ಥಿತಿಯನ್ನು ಸರಿದೂಗಿಸಿಕೊಳ್ಳುತ್ತಿದ್ದಾರೆ. ಐದು ಕ್ವಿಂಟಲ್ ಫಸಲು
ಈ ಪರಿಸರದ ಹವಾಮಾನಕ್ಕೆ ಸೂಕ್ತವಾಗಿರುವ ತಾಳೆ ಗಿಡಗಳಿಗೆ ಈಗ ಮೂರು ವರ್ಷ ತುಂಬಿದ್ದು, ಸೊಂಪಾಗಿ ಬೆಳೆದು ಉತ್ತಮ ಫಸಲು ನೀಡುತ್ತಿವೆ. ಪ್ರತಿ 15 ದಿನಗಳಿಗೊಮ್ಮೆ ತಾಳೆ ಗೊನೆ ಕೊಯ್ಯುತ್ತಾರೆ. ಪ್ರತಿ ಕೊಯ್ಲಿಗೆ ಸುಮಾರು 5 ಕ್ವಿಂಟಲ್ ಫಸಲು ದೊರೆಯುತ್ತಿದೆ.
Related Articles
ನನಗೆ 1,500 ಅಡಿಕೆ ಮರಗಳಿದ್ದವು ಅವು ಹಳದಿ ರೋಗದಿಂದ ಸಂಪೂರ್ಣ ನಾಶವಾಗಿವೆ. ಈ ಸಮಯದಲ್ಲಿ ನಾನು ಬಹಳವಾಗಿ ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದೆ.ಈ ಸಂದರ್ಭದಲ್ಲಿ ನನಗೆ ತೋಚಿದ್ದು ತಾಳೆ ಕೃಷಿ. ಈಗ ನಾನು ಅಡಿಕೆ ಕೃಷಿ ಇದ್ದ ಜಾಗದಲ್ಲಿ ತಾಳೆ ಕೃಷಿ ಮಾಡುತ್ತಿದ್ದು, ಉತ್ತಮ ಆದಾಯ ಗಳಿಸುತ್ತಿದ್ದೇನೆ.
– ವಿಶ್ವನಾಥ ಅಡ್ಕಬಳೆ
ತಾಳೆ ಕೃಷಿಕ
Advertisement
ತೇಜೇಶ್ವರ್ ಕುಂದಲ್ಪಾಡಿ