Advertisement

ಮೈತ್ರಿ ಧರ್ಮ ಪಾಲಿಸುವ ಹೊಣೆಗಾರಿಕೆ ನನ್ನದು

06:15 AM Aug 06, 2018 | |

ಬೆಂಗಳೂರು: “ನಾನು ಹಿಂದುಳಿದ ವರ್ಗದವನು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನದು ಒಂದೇ ಸಮಾಜ. ಹೀಗಾಗಿ ನನ್ನನ್ನು ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿಸುವ ಮೂಲಕ ಅಹಿಂದ ಮತ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂಬೆಲ್ಲಾ ಮಾತುಗಳಿವೆ. ಆದರೆ, ರಾಜಕೀಯದಲ್ಲಿ ಆ ಮಾನದಂಡದ ಮೇಲೆ ಮತ ಸೆಳೆಯೋದು ಅಸಾಧ್ಯ. ಮತ ಹಾಕುವವನು ಮತದಾರ. ಅವರನ್ನು ಸೆಳೆಯುವ ಪ್ರಯತ್ನ ಮಾತ್ರ ನಮ್ಮದು. ಏನೇ ಆಗಲಿ, ಸಿದ್ದರಾಮಯ್ಯ ಸಿದ್ದರಾಮಯ್ಯನೇ, ವಿಶ್ವನಾಥ್‌ ವಿಶ್ವಾನಾಥೇ’.

Advertisement

ಜೆಡಿಎಸ್‌ ನೂತನ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಹಿರಿಯ ನಾಯಕ ಅಡಗೂರು ಎಚ್‌.ವಿಶ್ವನಾಥ್‌ ಅವರು ನೀಡಿದ ಪ್ರತಿಕ್ರಿಯೆ ಇದು. ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಮುಂದಿನ ಕಾರ್ಯಕ್ರಮ, ಪಕ್ಷ ಸಂಘಟನೆ, ಸಮ್ಮಿಶ್ರ ಸರ್ಕಾರದಲ್ಲಿ ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿ ತಮ್ಮ ಜವಾಬ್ದಾರಿ ಇವೆಲ್ಲವನ್ನೂ ಹೇಳಿಕೊಂಡಿದ್ದಾರೆ. ಅಲ್ಲದೆ, ಮೈತ್ರಿ ಧರ್ಮದಡಿಯೇ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಮಿತ್ರಪಕ್ಷವಾಗಿರುವ ಜೆಡಿಎಸ್‌ನ ರಾಜ್ಯಾಧ್ಯಕ್ಷರಾಗಿದ್ದೀರಿ. ತಕ್ಷಣದಲ್ಲಿ ನಿಮ್ಮ ಆದ್ಯತೆ ಏನು?
       ಪ್ರಸ್ತುತ ವಿದ್ಯಮಾನ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಒಪ್ಪಿಕೊಂಡಿರುವ ನಿಲುವುಗಳನ್ನು ಪರಿಚಯ ಮಾಡಿಕೊಂಡು ಅದರ ಮೇಲೆ ಹಿರಿಯರ ಸಹಕಾರದೊಂದಿಗೆ ನನ್ನ ನಡವಳಿಕೆ ಮುಂದುವರಿಯಲಿದೆ. ಪಕ್ಷದ ಪ್ರಮುಖರೊಂದಿಗೆ ಕುಳಿತು ನನ್ನ ಅನುಭವದ ಆಧಾರದ ಮೇಲೆ ಪಕ್ಷ ಸಂಘಟನೆಗೆ ನೀಲನಕ್ಷೆ ಸಿದ್ಧಪಡಿಸುತ್ತೇನೆ. ಇದಕ್ಕೆ ಹಿರಿಯರ ಅನುಮತಿ ಪಡೆದು ಕೆಲಸ ಮಾಡುತ್ತೇನೆ.

ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿರುವುದರಿಂದ ಸಹಜವಾಗಿಯೇ ಸರ್ಕಾರದಲ್ಲಿ ಸಮನ್ವಯ ಸಮಿತಿ ಸದಸ್ಯರಾಗಿರುತ್ತೀರಿ. ನೀವು ಕಾಂಗ್ರೆಸ್‌ ತೊರೆಯಲು ಕಾರಣರಾದ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರು. ಹೀಗಾಗಿ ಸಮಿತಿ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳಲ್ಲಿ ಗೊಂದಲವಾಗುವುದಿಲ್ಲವೇ?
        ಹಾಗೇನೂ ಇಲ್ಲ. ಹಿಂದೆ ಇಬ್ಬರೂ ಒಟ್ಟಿಗೇ ಇದ್ದೆವು. ಮೇಲಾಗಿ ಸಮ್ಮಿಶ್ರ ಸರ್ಕಾರ ಮತ್ತು ಸಮನ್ವಯ ಸಮಿತಿಯ ನಡವಳಿಕೆಗಳು ರೀತಿ- ರಿವಾಜು, ಮೈತ್ರಿ ವೇಳೆ ನಾವು ಒಪ್ಪಿಕೊಂಡಿರುವ ಮಾತುಕತೆಗಳ ಮೇಲೆ ಹೋಗಬೇಕೇ ಹೊರತು ಅದನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಪರಸ್ಪರ ಗೌರವ, ವಿಶ್ವಾಸದಿಂದ ಕೆಲಸ ಮಾಡಬೇಕಾಗುತ್ತದೆ. ಅದನ್ನು ಮಾಡುತ್ತೇವೆ.

ಜೆಡಿಎಸ್‌ ಕೇವಲ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಮಾತಿನಂತೆ ನಡೆಯುತ್ತದೆ. ಬೇರೆಯವರು ರಾಜ್ಯಾಧ್ಯಕ್ಷರಾದರೆ ಅವರಿಗೆ ಕಿಮ್ಮತ್ತಿಲ್ಲ. ಈ ಹಿಂದೆ ಅನೇಕ ಸಂದರ್ಭದಲ್ಲಿ ಅದು ಸಾಬೀತಾಗಿದೆ. ಈ ಕುರಿತು ನಿಮ್ಮ ನಿಲುವೇನು?
        ಎಲ್ಲಾ ಪಕ್ಷಗಳಿಗೂ ನಾಯಕರಿರುತ್ತಾರೆ. ಸಿದ್ಧಾಂತ, ಕಾರ್ಯಕ್ರಮ, ನಡವಳಿಕೆಗಳಿರುತ್ತವೆ. ಕಾಲಘಟ್ಟದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತದೆ. ನಾನು ಜೆಡಿಎಸ್‌ ಸೇರಿ 14 ತಿಂಗಳಾಯಿತು. ನನ್ನ ಸಾರ್ವಜನಿಕ ಜೀವನ ಮುಗಿದೇ ಹೋಯಿತು ಅಂದರು. ಮುಗಿಸಿಬಿಟ್ಟೆವು ಎಂದು ಕೆಲವರು ಹೇಳಿಕೊಂಡರು. ಆ ಸಮಯದಲ್ಲಿ ದೇವೇಗೌಡರು ಆಶ್ರಯ ಕೊಟ್ಟರು. ಪ್ರೀತಿ, ಅಭಿಮಾನದಿಂದ ಕರೆದು ಹುಣಸೂರು ಕ್ಷೇತ್ರದಿಂದ ಶಾಸಕನಾದೆ. ಈಗ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಇದುವೇ ವಿಧಿ ಮತ್ತು ಅವಕಾಶ. ರಾಜಕಾರಣ ನಿಂತ ನೀರಲ್ಲ. ಚಲನೆಯಲ್ಲಿ ಏನೇನೆಲ್ಲಾ ಆಗಿರುತ್ತದೆ. ಹಿಂದೆ ಆಗಿರುವುದೆಲ್ಲಾ ಇತಿಹಾಸ.

Advertisement

ವಿಶ್ವನಾಥ್‌ ಮಂತ್ರಿಯಾಗಬೇಕೆಂದಿದ್ದರು. ರಾಜ್ಯಾಧ್ಯಕ್ಷ ಸ್ಥಾನ ಬೇಡ ಎಂದವರು. ಈಗ ಹೇಗೆ ಒಪ್ಪಿಕೊಂಡಿರಿ?
         ನಾನು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ರಾಜಕೀಯ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೆ. ಸಾಕಷ್ಟು ಹೋರಾಟಗಳಲ್ಲೂ ಪಾಲ್ಗೊಂಡಿದ್ದೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಮಂತ್ರಿಗಿರಿ ಕೇಳಿದವನಲ್ಲ. ನನಗೆ ಮಂತ್ರಿಯಾಗಬೇಕೆಂಬ ಅವಸರವೂ ಇರಲಿಲ್ಲ. ನನಗಿದ್ದ ಏಕೈಕ ಅವಸರ ಎಂದರೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಎದುರಿಸುವ ಸವಾಲುಗಳಲ್ಲಿ ಅವರ ಜತೆ ನಿಂತು ಹೋರಾಟ ಮಾಡಬೇಕು ಮತ್ತು ಅವರಿಗೆ ಸಖನಾಗಿ ಇರಬೇಕು ಎಂಬುದು. ನನಗೆ ಸಾಕಷ್ಟು ಶಸ್ತ್ರಚಿಕಿತ್ಸೆಗಳಾಗಿವೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನ ಬೇಡ ಎಂದು ಹೇಳಿದ್ದೆ. ಆದರೂ ನನಗೆ ರಾಜಕೀಯ ಪುನರ್ಜನ್ಮ ಕೊಟ್ಟ ದೇವೇಗೌಡರು ಕರೆದು ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಬೇಕು ಎಂದು ಹೇಳಿದಾಗ ಒಪ್ಪಿಕೊಳ್ಳದೇ ಬೇರೆ ದಾರಿ ಇರಲಿಲ್ಲ. ಆದರೆ, ಮಾನಸಿಕವಾಗಿ ನಾನು ಇನ್ನೂ ಘಟ್ಟಿಯಾಗಿದ್ದೇನೆ. ಸಾಕಷ್ಟು ದೂರದೃಷ್ಟಿ ಹೊಂದಿದ್ದೇನೆ. ನನ್ನ ಯೋಚನೆ ಮತ್ತು ಅನುಭವಗಳನ್ನು ಭಟ್ಟಿ ಇಳಿಸಿ ಪಕ್ಷದ ಕೆಲಸ ಮಾಡುತ್ತೇನೆ.

ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ನಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಮಂತ್ರಿಗಿರಿಯಲ್ಲೂ ಹಳೇ ಮೈಸೂರು ಭಾಗಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ ಎಂಬ ಆರೋಪವಿದೆ. ಇದೀಗ ರಾಜ್ಯಾಧ್ಯಕ್ಷ ಸ್ಥಾನವೂ ಹಳೇ ಮೈಸೂರು ಭಾಗಕ್ಕೇ ಸಿಕ್ಕಿದೆ?
        ಇರಬಹುದು. ಹಾಗೆಂದು ಜೆಡಿಎಸ್‌ನಿಂದ ಉತ್ತರ ಕರ್ನಾಟಕ್ಕೆ ಅನ್ಯಾಯ ಎಂಬುಗು ಮಿಥ್ಯಾರೋಪ. ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಯಾಗಲು ಕಾರಣರಾದವರು ದೇವೇಗೌಡರು. ಅವರು ಪ್ರಧಾನಿಯಾಗಿದ್ದಾಗ ನೀರಾವರಿ ಯೋಜನೆಗಳಿಗೆ ಕೇಂದ್ರದ ನೆರವು ಒದಗಿಸುವ ಕಾರ್ಯಕ್ರಮ ಜಾರಿಗೆ ತಂದರು. ಇದರ ಪರಿಣಾಮ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳು ತ್ವರಿತವಾಗಿ ಪೂರ್ಣಗೊಳ್ಳುವಂತಾಯಿತು. ಉತ್ತರ ಕರ್ನಾಟಕದ ವಿಚಾರವಾಗಿಯೇ ಅವರು ರಾಮಕೃಷ್ಣ ಹೆಗಡೆ ಸರ್ಕಾರದ ಅವಧಿಯಲ್ಲಿ ರಾಜೀನಾಮೆ ನೀಡಿದ್ದರು. ಉತ್ತರ ಕರ್ನಾಟಕದವರೇ ಆರು ಮಂದಿ ಮುಖ್ಯಮಂತ್ರಿಯಾಗಿದ್ದರಲ್ಲಾ, ಅವರ ಅವಧಿಯಲ್ಲಿ ಆ ಭಾಗಕ್ಕೆ ಏನು ಸಿಕ್ಕಿದೆ. ಹೀಗಾಗಿ ಇವೆಲ್ಲವೂ ಜವಾಬ್ದಾರಿತನದ ಆರೋಪಗಳಿಲ್ಲ.

ಕಾಂಗ್ರೆಸ್‌ನಲ್ಲೇ ನಿಮ್ಮ ನೇರ ನಡೆನುಡಿ ಒಪ್ಪಿಕೊಂಡಿಲ್ಲ. ಈಗ ಜೆಡಿಎಸ್‌ನಲ್ಲಿ ಅದು ಸಾಧ್ಯವೇ? ವಿಶ್ವನಾಥ್‌ ಮೊದಲಿನಂತೆ ಇರುತ್ತಾರೆಯೇ ಅಥವಾ ಬದಲಾಗುತ್ತಾರೆಯೇ?
        ನಾನು ಏನೇ ಮಾತನಾಡಿದರೂ ವಸ್ತುಸ್ಥಿತಿಯ ನೆಲೆಗಟ್ಟಿನಲ್ಲಿ ನಿಂತು ಮಾತನಾಡುತ್ತೇನೆ. ಅದನ್ನು ವಿಶ್ವನಾಥ್‌ ವಿವಾದಾತ್ಮಕ ವ್ಯಕ್ತಿ ಎಂದು ಬಿಂಬಿಸಲಾಗುತ್ತದೆ. ನನ್ನ ಗುರುಗಳು ಬಸವಲಿಂಗಪ್ಪ ಅವರು. “ನೀನು ಸಚಿವನಾದ ಮೇಲೆ ಸಂಪುಟ ಸಭೆಯಲ್ಲಿ ಚರ್ಚಿಸುವಾಗ ನಿನ್ನ ಕೆಲಸ ಆಗಬೇಕಾದರೆ ಮುಖ್ಯಮಂತ್ರಿಗಳನ್ನು ಸರ್‌ ಎನ್ನಬೇಕು. ವಿರೋಧ ಮಾಡಬೇಕಾದರೆ ಮಿಸ್ಟರ್‌ ಚೀಫ್ ಮಿನಿಸ್ಟರ್‌ ಎನ್ನಬೇಕು’ ಎಂದು ಹೇಳಿಕೊಟ್ಟವರು ಅವರು. ಎನ್‌.ರಾಚಯ್ಯ, ಚನ್ನಬಸಪ್ಪ, ಹುಚ್ಚಮಾಸ್ತಿಗೌಡ, ಜಾಫ‌ರ್‌ ಷರೀಫ್ ಮುಂತಾದ ಹಿರಿಯರೊಂದಿಗೆ ಕೆಲಸ ಮಾಡಿದ್ದೇನೆ. ನಾನು ತುಂಬಾ ಮೃದು. ವಸ್ತುಸ್ಥಿತಿ ಮಾತನಾಡುವಾಗ ಕಠಿಣವಾಗಿ ಮಾತನಾಡುತ್ತೇನೆ. ನನ್ನ ಸ್ವಭಾವ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಇಬ್ಬರಿಗೂ ಗೊತ್ತಿದೆ. ಹೀಗಾಗಿ ಅವರೂ ವಸ್ತುಸ್ಥಿತಿ ಏನಿದೆ ಎಂಬುದನ್ನು ನೇರವಾಗಿ ಹೇಳಿ. ಅದರಲ್ಲೇನು ತಪ್ಪಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಬದಲಾಗುವ ಪರಿಸ್ಥಿತಿ ಇಲ್ಲ.

ಅರಸು ಗರಡಿಯಲ್ಲಿ ಬೆಳೆದ ನಾಯಕ
ಮೈಸೂರು
:
ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕು ಅಡಗೂರು ಗ್ರಾಮದ ಹುಚ್ಚೇಗೌಡ- ರಾಮಮ್ಮ ದಂಪತಿಗೆ 1949ರ ಡಿಸೆಂಬರ್‌ 15ರಂದು ಜನಿಸಿದ ವಿಶ್ವನಾಥ್‌, ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಬಿಎಸ್ಸಿ, ಎಲ್‌ಎಲ್‌ಬಿ ವ್ಯಾಸಂಗ ಮಾಡಿದ್ದಾರೆ. 

ಕಾನೂನು ಪದವಿ ನಂತರ ವಕೀಲ ವೃತ್ತಿ ಮಾಡುತ್ತಿದ್ದ ಇವರ ನಾಯಕತ್ವ ಗುಣಗಳನ್ನು ಗುರುತಿಸಿದ ಡಿ.ದೇವರಾಜ ಅರಸು ಅವರು ರಾಜಕೀಯಕ್ಕೆ ಇವರನ್ನು ಕರೆ ತಂದರು. ಅರಸು ಗರಡಿಯಲ್ಲಿ ಬೆಳೆದ ವಿಶ್ವನಾಥ್‌, ಕೆ.ಆರ್‌.ನಗರ ಕ್ಷೇತ್ರದಿಂದ 1978ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. 

1883ರ ಚುನಾವಣೆಯಲ್ಲಿ ಸೋಲು ಕಂಡು, 1989ರ ಚುನಾವಣೆಯಲ್ಲಿ ಪುನರಾಯ್ಕೆಯಾದರು. 1994ರ
ಚುನಾವಣೆಯಲ್ಲಿ ಮತ್ತೆ ಸೋಲು ಕಂಡ ಇವರು, 1999ರ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಎಸ್‌.ಎಂ.ಕೃಷ್ಣ ಅವರ
ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದರು. ಸಮುದಾಯದತ್ತ ಶಾಲೆ, ಶಾಲಾ ಮಕ್ಕಳಿಗೆ ಮಧ್ಯಾಹ್ನದ
ಬಿಸಿಯೂಟ, ಅಕ್ಷರ ದಾಸೋಹ ಕಾರ್ಯಕ್ರಮ, ಹೈಸ್ಕೂಲ್‌ ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡಲು ಮಾಹಿತಿ ಸಿಂಧು ಕಾರ್ಯಕ್ರಮ, ಶಿಕ್ಷಣ ಸಂವಾದ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ಚಿಣ್ಣರ ಅಂಗಳ, ಶಾಲಾ ಮಕ್ಕಳಿಗೆ ಗುಂಪು ವಿಮೆ ಸೌಲಭ್ಯ, ಎಸ್‌ಡಿಎಂಸಿ ರಚನೆ, ಹತ್ತನೇ ತರಗತಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಸಹಕಾರ ಸಚಿವರಾಗಿ ಯಶಸ್ವಿನಿ ಆರೋಗ್ಯ ವಿಮೆ ಜಾರಿ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದರು. ಅಲ್ಲದೆ, ಜೆಡಿಎಸ್‌ನಿಂದ ಹೊರ ಬಂದಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2009ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು- ಕೊಡಗು ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು, 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್‌ ಸಿಂಹ ವಿರುದಟಛಿ 32 ಸಾವಿರ ಮತಗಳ ಅಂತರದಿಂದ ಸೋಲು ಕಂಡರು. ನಂತರ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಜತೆಗೆ ಅಸಮಾಧಾನಗೊಂಡು, ನಾಲ್ಕು ದಶಕಗಳ ಕಾಂಗ್ರೆಸ್‌ ನಂಟು ತೊರೆದು, ಜೆಡಿಎಸ್‌ ಸೇರಿ ಹುಣಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

1974ರಲ್ಲಿ ಶಾಂತಮ್ಮ ಅವರನ್ನು ಕೈಹಿಡಿದಿರುವ ವಿಶ್ವನಾಥ್‌ಗೆ, ಜಿಪಂ ಸದಸ್ಯ ಅಮಿತ್‌ ದೇವರಹಟ್ಟಿ, ಸುಗಮ ಸಂಗೀತ ಗಾಯಕ ಪೂರ್ವಜ್‌ ವಿಶ್ವನಾಥ್‌ ಸೇರಿ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ.

ಸಚಿವರಾಗಿದ್ದಾಗಲೇ ಆಡಂಬರಕ್ಕೆ ಜೋತು ಬೀಳದೆ ತಮ್ಮ ಪುತ್ರಿಯನ್ನು ಸಾಮೂಹಿಕ ವಿವಾಹದಲ್ಲಿ ಧಾರೆ ಎರೆದು ಕೊಟ್ಟಿದ್ದರು. ಕುರುಬ ಸಮುದಾಯದ ಸಂಘಟನೆ ಹಾಗೂ ಕಾಗಿನೆಲೆಯಲ್ಲಿ ಮಠ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ಕೆಲಸ ಮಾಡಿರುವ ಅವರು, ಹಳ್ಳಿಹಕ್ಕಿ ಹಾಡು, ಮತಸಂತೆ ಕೃತಿಗಳನ್ನು ರಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next