ಹುಣಸೂರು: ಎಲ್ಲಾ ವರ್ಗಗಳನ್ನು ಪ್ರೀತಿ-ವಿಶ್ವಾಸದಿಂದ ಕಾಣುವ ವಿಶ್ವನಾಥ್ ಒಬ್ಬ ದಕ್ಷ ಆಡಳಿತಗಾರರಾಗಿದ್ದು, ಈ ಉಪ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅವರನ್ನು ಬೆಂಬಲಿಸಬೇಕೆಂದು ಅಹಿಂದ ರಾಜ್ಯಾಧ್ಯಕ್ಷ ಮುಕಡಪ್ಪ ಮನವಿ ಮಾಡಿದರು. ಕಾಗಿನೆಲೆ ಪೀಠದ ಸಂಸ್ಥಾಪಕ ಅಧ್ಯಕ್ಷರು, ಸಮಾಜವಾದಿಗಳಾಗಿರುವ ವಿಶ್ವನಾಥರಿಂದಾಗಿಯೇ ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಬಂದು ಮುಖ್ಯಮಂತ್ರಿಯಾದವರು.
ಆದರೆ, ಕರೆತಂದವರನ್ನೇ ಹೊರ ಕಳುಹಿಸಿದ ಸಿದ್ದರಾಮಯ್ಯ ಒಬ್ಬ ಸ್ವಾರ್ಥಿ. ಉಡಾಫೆ ಮನುಷ್ಯ, ಕುರುಬ ಸಮಾಜಕ್ಕೆ ಏನು ಮಾಡಲಿಲ್ಲ. ಕನಿಷ್ಠ ಹಿಂದುಳಿವ ವರ್ಗಗಳಿಗೆ ನ್ಯಾಯ ಸಿಗುತ್ತಿದ್ದ ಜನಗಣತಿ ವರದಿ ಬಿಡುಗಡೆ ಮಾಡುವಲ್ಲಿ ಹಿಂದೇಟು ಹಾಕಿದರು ಎಂದು ದೂರಿದರು. ಆದರೆ, ಯಡಿಯೂರಪ್ಪ ಕೊಟ್ಟ ಮಾತಿನಿಂತೆ ನಡೆದುಕೊಳ್ಳವ ರಾಜಕಾರಣಿ. ಹೀಗಾಗಿ ಅವರನ್ನು ಬೆಂಬಲಿಸುತ್ತಿದ್ದೇವೆ. ಇನ್ನು ಮೋದಿಯವರ ಕಾರ್ಯಕ್ರಮಗಳನ್ನು ಮೆಚ್ಚಿ ಬಿಜೆಪಿ ಸೇರಿದ್ದೇವೆಂದರು.
ಸುದ್ದಿಗೋಷ್ಠಿಯಲ್ಲಿ ಅಖೀಲ ಭಾರತೀಯ ಮಡಿವಾಳ ಮಹಾಸಭಾದ ಅಧ್ಯಕ್ಷ ಜಿ.ಎಂಜೆರಪ್ಪ, ಬಿಜೆಪಿ ಮುಖಂಡ ಎಸ್.ಪುಟ್ಟಸ್ವಾಮಿ, ಹಿಂದುಳಿದ ವರ್ಗಗಳ ಮುಖಂಡ ಟಿ.ಬಿ.ಬೆಳಗಾವಿ, ಆದಿವಾಸಿ ಮುಖಂಡ ಗೋಪಾಲ್ ಪೂಜಾರಿ ಮತ್ತಿತರರಿದ್ದರು.
ವಿಶ್ವನಾಥ್‌ಗೆ ದಸಂಸ ಬೆಂಬಲ: ಹಿಂದಿನಿಂದಲೂ ಬಿಜೆಪಿಯನ್ನು ವಿರೋಧಿಸುತ್ತಲೇ ಬಂದಿರುವ ದಸಂಸ, ಈ ಬಾರಿ ಸಾಮಾಜಿಕ ನ್ಯಾಯ ಗೌರವಿಸುವ ಎಲ್ಲಾ ಸಮಾಜಗಳನ್ನು ಪ್ರೀತಿಯಿಂದ ಕಾಣುವ ಎಚ್.ವಿಶ್ವನಾಥ ಅವರನ್ನು ಬೆಂಬಲಿಸಲಿದೆ ಎಂದು ದಸಂಸ ಜಿಲ್ಲಾ ಕಾರ್ಯದರ್ಶಿ ನಿಂಗರಾಜಮಲ್ಲಾಡಿ ತಿಳಿಸಿದರು.
ಜನರಿಗಾಗಿ ಜಾಗೃತಿ ವೇದಿಕೆ ಸಂಚಾಲಕ ಡೀಡ್ ಡಾ.ಶ್ರೀಕಾಂತ್ ಮಾತನಾಡಿ, ಚುನಾವಣೆಗಾಗಿ ಜನಸಾಮಾನ್ಯರ ಪ್ರಣಾಳಿಕೆ ಹುಣಸೂರನ್ನು ಜಿಲ್ಲೆಯಾಗಿ ಘೋಷಿಸುವುದು, ಲಕ್ಷ್ಮಣತೀರ್ಥ ನದಿ ಶುದ್ಧೀಕರಣ ಹಾಗೂ ಆದಿವಾಸಿಗಳಿಗೆ ಸಂಬಂಧಿಸಿದ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಣಾಳಿಕೆಯಲ್ಲಿ ಸೇರಿಸಿದ್ದಲ್ಲಿ ಬಿಜೆಪಿ ಬೆಂಬಲಿಸುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ರಾಮು, ದೇವೇಂದ್ರ, ಕೆಂಪರಾಜು, ಶೇಖರ್ ಇದ್ದರು.
ಹಾಲುಮತ ಮಹಾಸಭಾ ಬೆಂಬಲ: ಈ ಚುನಾವಣೆಯಲ್ಲಿ ವಿಶ್ವನಾಥರು ಗೆಲ್ಲಬೇಕಿರುವುದು ಈ ರಾಜ್ಯದ ಜನರ ಆಶಯವಾಗಿದ್ದು, ಹಾಲುಮತ ಸಂಘಟನೆ ತಾಲೂಕಿನಲ್ಲಿ ಮನೆಮನೆಗೆ ತೆರಳಿ ವಿಶ್ವನಾಥ ಅವರನ್ನು ಬೆಂಬಲಿಸುವಂತೆ ಕೋರಲಾಗುವುದೆಂದು ಅಖೀಲ ಕರ್ನಾಟಕ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ಬಿ.ಮಲ್ಲೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗೋಷ್ಠಿಯಲ್ಲಿ ಮಹಾಸಭಾದ ಬೀರೇಶ್, ಸೋಮಣ್ಣ, ಚಿಕ್ಕಸ್ವಾಮಿ, ಉಮೇಶ್ ಇದ್ದರು.