Advertisement

ಸರಕಾರದ ವಿರುದ್ಧ ದನಿಯೆತ್ತಿದ ವಿಶ್ವನಾಥ್‌

11:28 PM Dec 07, 2020 | mahesh |

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕಾಗಿ ರಚಿಸಿರುವ ಕಾರ್ಯಪಡೆಯ ಅಧ್ಯಕ್ಷ ಸ್ಥಾನದಿಂದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್‌ ಅವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌ ಪಟ್ಟು ಹಿಡಿಯುವ ಮೂಲಕ ಆಡಳಿತಾರೂಢ ಬಿಜೆಪಿಗೆ ಮುಜುಗರ ತಂದ ಪ್ರಸಂಗ ಪರಿಷತ್ತಿನಲ್ಲಿ ಸೋಮವಾರ ನಡೆಯಿತು.

Advertisement

ನೀತಿ ಅನುಷ್ಠಾನ ಕುರಿತು ಸರಕಾರ ಸಿದ್ಧತೆ ಬಗ್ಗೆ ಮಹಂತೇಶ ಕವಠಗಿಮಠ ಕೇಳಿದ್ದ ಪ್ರಶ್ನೆಗೆ ಡಿಸಿಎಂ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿ, ನೀತಿ ಅನುಷ್ಠಾನಕ್ಕೆ ಸರಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಮುಂದಿನ 5 ವರ್ಷದಲ್ಲಿ ಸಾಧಿಸಬೇಕಾದ ಗುರಿಯನ್ನು ನಿಗದಿಪಡಿಸಿಕೊಂಡಿದೆ. ಇದಕ್ಕಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್‌ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಚ್‌.ವಿಶ್ವನಾಥ್‌ ಅವರು, ರಂಗನಾಥ್‌ ಆರ್ಥಿಕ ಅಪರಾಧ ಆರೋಪ ಎದುರಿಸುತ್ತಿರುವ ಕಂಪೆನಿಯೊಂದರ ಅಧ್ಯಕ್ಷರಾಗಿದ್ದಾರೆ. ಆ ಕಂಪೆನಿಯ ಆಡಳಿತ ವ್ಯವಸ್ಥಾಪಕರಾಗಿದ್ದ ವಿ.ಜಿ.ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾರ್ಯಪಡೆಗೆ ರಂಗನಾಥ್‌ ನೇಮಕ ಪ್ರಧಾನ ಮಂತ್ರಿಯವರ ಆಶಯದ ರಾಷ್ಟ್ರೀಯ ನೀತಿಯ ಮೂಲ ತತ್ವಕ್ಕೆ ವಿರುದ್ಧವಾಗಿದೆ. ಹೀಗಾಗಿ ಅವರನ್ನು ಕೂಡಲೇ ಕಾರ್ಯಪಡೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ವಿಶ್ವನಾಥ್‌ ವಾದವನ್ನೊಪ್ಪದ ಅಶ್ವತ್ಥನಾರಾಯಣ ಅವರು, ರಂಗನಾಥ್‌ ನೇಮಕದ ಸರಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡರು. ವಿಶ್ವನಾಥ್‌ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಬೇಕು ಎಂದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿಶ್ವನಾಥ್‌, ಹಾಗಿದ್ದರೆ ಸಚಿವರು ಹೊಸ ನೀತಿಯನ್ನು ಸರಿಯಾಗಿ ಓದಿಲ್ಲ ಅನಿಸುತ್ತಿದೆ ಎಂದರು.

ಕಾಂಗ್ರೆಸ್‌ ಸದಸ್ಯ ಬಿ. ಕೆ. ಹರಿಪ್ರಸಾದ್‌ ಮಾತನಾಡಿ, ಈ ನೀತಿಯ ಮೂಲಕ ಸಂಸ್ಕೃತ ಹಾಗೂ ಹಿಂದಿ ಹೇರಿಕೆಯ ಪ್ರಯತ್ನವಾಗುತ್ತಿದ್ದು, ಪ್ರತ್ಯೇಕ ಚರ್ಚೆ ಅಗತ್ಯವಿದೆ. ನಿರ್ದಿಷ್ಟ ಸಂಘಟನೆಗಳು ಸೇರಿಕೊಂಡು ನೀತಿ ರಚನೆ ಮಾಡಿವೆ. ಆ ಸಂಘಟನೆಗಳ ಇತಿಹಾಸ ಸದನಕ್ಕೆ ತಿಳಿಸಬೇಕು ಎಂದರು. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿ, ಮಾತೃಭಾಷೆಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next