ಬೆಂಗಳೂರು: ಬಳ್ಳಾರಿ, ತುಮಕೂರು ನಂತರ ಇದೀಗ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ಕೇಂದ್ರವಾಗಿ ರಿಸಿ ದೇವರಾಜ ಅರಸು ಜಿಲ್ಲೆ ಮಾಡುವ ಬೇಡಿಕೆ ಪ್ರಾರಂಭವಾಗಿದೆ. ಹಳ್ಳಿಹಕ್ಕಿ ಖ್ಯಾತಿಯ ಮಾಜಿ ಸಚಿವ ಎಚ್.ವಿಶ್ವನಾಥ್ ಇಂಥದ್ದೊಂದು ಪ್ರಸ್ತಾಪ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿಟ್ಟಿದ್ದು, ಪರ-ವಿರೋಧಗಳು ವ್ಯಕ್ತವಾಗಿವೆ. ಇದು ರಾಜಕೀಯವಾಗಿ ಪ್ರತಿಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡುವ ಕಾರ್ಯತಂತ್ರ ಎಂದೇ ಹೇಳಲಾಗುತ್ತಿದೆ.
ಆದರೆ, ಹೊಸ ಜಿಲ್ಲೆ ರಚನೆ ಅಗತ್ಯತೆ ಬಲವಾಗಿ ಪ್ರತಿಪಾದಿಸಿರುವ ಎಚ್.ವಿಶ್ವನಾಥ್, ಮೈಸೂರು ಜಿಲ್ಲೆ ವಿಭಜನೆ ಮಾಡಿ ಚಿಕ್ಕ ಹಾಗೂ ಚೊಕ್ಕ ಜಿಲ್ಲೆ ರಚನೆಯಾಗಬೇಕು. ನಾಡಿನ ದೀನ ದಲಿತರು, ಶೋಷಿತರ ಪರ ಧ್ವನಿಯಾಗಿ ಕೆಲಸ ಮಾಡಿದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ ಹೆಸರಿನಲ್ಲಿ ಹೊಸ ಜಿಲ್ಲೆ ರಚನೆ ಯಾಗಬೇಕು ಎಂದುಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಅವರು, ಹುಣಸೂರು ಉಪ ವಿಭಾಗವನ್ನು ದೇವರಾಜ ಅರಸು ಜಿಲ್ಲೆಯಾಗಿ ಘೋಷಿಸಬೇಕು. ಕೆ.ಆರ್.ನಗರ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಸಾಲಿಗ್ರಾಮ ಮತ್ತು ಸರಗೂರು ತಾಲೂಕುಗಳನ್ನು ಒಳಗೊಂಡ ಹೊಸ ಜಿಲ್ಲೆಯಾಗಬೇಕು ಎಂದು ಒತ್ತಾಯಿಸಿದರು. ಇದು ಹಳೆಯ ಪ್ರಸ್ತಾವನೆ. ಈ ಹಿಂದೆಯೇ ಒಮ್ಮೆ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಸಮಾಲೋಚನೆ ಮಾಡಿದ್ದೇನೆ.
ಶೀಘ್ರವೇ ಆರು ತಾಲೂಕುಗಳ ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳು, ನಾಗರಿಕರ ಜತೆ ಸಭೆ ನಡೆಸಿ ಅಭಿಪ್ರಾಯ ಪಡೆಯಲಾ ಗುವುದು ಎಂದು ಹೇಳಿದರು. ನಾಡಿನ ಅಭಿವೃದ್ಧಿಗೆ ಕಂಕಣ ತೊಟ್ಟು ಭೂ ಸುಧಾರಣೆ ಸೇರಿ ದೇಶ ಮೆಚ್ಚುವ ಕೆಲಸ ಮಾಡಿ ದೇವರಾಜ ಅರಸು ಹೆಸರಿನಲ್ಲಿ ಜಿಲ್ಲೆ ಮಾಡಲು ಯಾರೂ ಅಡ್ಡಿಪಡಿಸಬಾರದು. ಆಂಧ್ರಪ್ರದೇಶದಲ್ಲಿ ರಂಗಾರೆಡ್ಡಿ ಜಿಲ್ಲೆ ರಚನೆ ಮಾಡಿಲ್ಲವೇ ಎಂದು ಪ್ರಶ್ನಿಸಿದರು.
ವಿಭಜನೆ ಪ್ರಸ್ತಾಪಕ್ಕೆ ಆಕ್ರೋಶ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆ ವಿಭಜನೆ ಪ್ರಸ್ತಾಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸಾಧುವಲ್ಲ ಎಂದು ತಿಳಿಸಿದ್ದಾರೆ. ಮೂವತ್ತು ಕಿ.ಮೀ.ಗೆ ಒಂದು ಜಿಲ್ಲೆ ಮಾಡಲು ಆಗುತ್ತಾ? ಮೈಸೂರು ವಿಭಜನೆ ಸಾಧ್ಯವಿಲ್ಲ, ಇರೋದು ಆರು ತಾಲೂಕು, ಮೂರು ತಾಲೂಕುಗಳಿಗೆ ಒಂದು ಜಿಲ್ಲೆ ವೈಜ್ಞಾನಿಕವಲ್ಲ. ಉಪ ಚುನಾವಣೆ ಇದೆ ಎಂಬ ಕಾರಣಕ್ಕಾಗಿ ವಿಶ್ವನಾಥ್ ಹೊಸ ಜಿಲ್ಲೆ ಪ್ರಸ್ತಾಪ ಮಾಡಿರಬಹುದು ಎಂದು ಹೇಳಿದ್ದಾರೆ. ಈ ಮಧ್ಯೆ, ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಸಹ ಜಿಲ್ಲೆ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೊಸ ಜಿಲ್ಲೆಯ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ದೇವರಾಜ ಅರಸು ಅಗ್ರಗಣ್ಯ ನಾಯಕ. ಪ್ರಾದೇಶಿಕ ಎಲ್ಲೆ ಮೀರಿ ಬೆಳೆದವರು. ಅವರನ್ನು ಚುನಾವಣೆಗಾಗಿ ಹುಣಸೂರಿಗೆ ಸೀಮಿತ ಮಾಡುವುದು ಬೇಡ. ಅವರ ಹೆಸರಿನಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಪ್ರಾರಂಭಿಸಿ. ಆಡಳಿತ ಕಾರಣಕ್ಕಾಗಿ ಸಣ್ಣ ಸಣ್ಣ ಜಿಲ್ಲೆಗಳ ರಚನೆ ಆಗಬೇಕು. ತುಮಕೂರು ಜಿಲ್ಲೆಯ ತಿಪಟೂರು ಇದರಲ್ಲಿ ಒಂದು. ಸರ್ಕಾರ ಸಣ್ಣ ಜಿಲ್ಲೆ ಮಾಡಲಿ.
-ರಮೇಶ್‌ಬಾಬು, ಜೆಡಿಎಸ್ ರಾಷ್ಟ್ರೀಯ ವಕ್ತಾರ