ಬೆಂಗಳೂರು : ವಿಶ್ವಕರ್ಮ ಸಮುದಾಯದ ಪಂಚಕಸುಬನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ವಿಶ್ವಕರ್ಮ ವಿಶ್ವವಿದ್ಯಾಲಯ ನಿರ್ಮಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕರ್ಮ ವಿಶ್ವವಿದ್ಯಾಲಯ ಯಾವ ಮಾದರಿಯಲ್ಲಿ ರಚನೆ ಮಾಡಬೇಕು ಎಂಬುದನ್ನು ಸಾಹಿತಿ ಚಂದ್ರಶೇಖರ್ ಕಂಬಾರರೊಂದಿಗೆ ಚರ್ಚಿಸಲಿದ್ದೇವೆ. ಜಮೀನಿನ ಲಭ್ಯತೆ, ಕುಲಪತಿ ನೇಮಕ ಎಲ್ಲವೂ ಮುಖ್ಯವಾಗುತ್ತದೆ ಎಂದರು.
ಮನುಷ್ಯ ಮತ್ತು ಪ್ರಕೃತಿಯನ್ನು ಸೃಷ್ಟಿಸಿರುವ ದೇವರನ್ನೇ ವಿಶ್ವಕರ್ಮರು ಸೃಷ್ಟಿ ಮಾಡಿದ್ದಾರೆ. ಹೀಗಾಗಿ ಸಮಾಜದಲ್ಲಿ ಅವರಿಗೆ ವಿಶೇಷ ಸ್ಥಾನಮಾನ ಇದೆ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚಿÌನ ಅನುದಾನ ನೀಡಬೇಕು ಎಂಬ ಬೇಡಿಕೆಯನ್ನು ಈಡೇರಿಸಲಿದ್ದೇವೆ. ವಿಶ್ವಕರ್ಮ ಸಮುದಾಯದ ಚಟುವಟಿಕೆಗಳಿಗೆ ಬೆಂಗಳೂರಿನಲ್ಲಿ ಜಾಗ ನೀಡಲಾಗುತ್ತದೆ. ಹಾಗೆಯೇ 40 ಹಿಂದುಳಿದ ವರ್ಗಗಳ ಸಂಸ್ಥೆಗಳಿಗೆ ಒಂದೇ ಕಡೆ ಜಾಗ ನೀಡಲು 90 ಎಕೆರೆ ಗುರುತಿಸಿದ್ದೇವೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಭರವಸೆ ನೀಡಿದರು.
ಕ್ರಿಯಾಶೀಲರು, ಸೃಜನಶೀಲರು ಆಗಿರುವ ವಿಶ್ವಕರ್ಮರ ಕಲಾ ನೈಪಣ್ಯತೆಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ವಿಶ್ವಕರ್ಮರ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಸರ್ಕಾರ ಮಾಡಲಿದೆ. ನಮ್ಮದು ಅಲ್ಪಸಂಖ್ಯಾತರ, ದಲಿತರ ಹಾಗೂ ಹಿಂದುಳಿದವರ ಪರವಾದ ಸರ್ಕಾರ ಮತ್ತು ದುರ್ಬಲರ ಏಳ್ಗೆಗೆ ಶ್ರಮಿಸುತ್ತೇವೆ. ಕೆಲವರು ದಲಿತರ ಮನೆಗೆಹೋಗಿ ಊಟ, ತಿಂಡಿ ಮಾಡುತ್ತಾರೆ. ಅವರ ಹಸಿವು ನೀಗಿಸಲು ಏನೂ ಮಾಡುತ್ತಿಲ್ಲ. ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕು ಎಂಬುದು ನಮ್ಮ ನಿಲುವು. ಹೀಗಾಗಿಯೇ ಬೆಂಗಳೂರಿನಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲೂ ಆರಂಭಿಸಲಿದ್ದೇವೆ ಎಂದು ಹೇಳಿದರು.
ವಿಶ್ವಕರ್ಮ ಸಮುದಾಯದವರು ತಮ್ಮ ಕಲೆಯನ್ನು ಮುಂದುವರಿಸುವುದರ ಜತೆಗೆ ಮಕ್ಕಳಿಗೆ ಶಿಕ್ಷಣವನ್ನೂ ಕೊಡಿಸಬೇಕು. ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯವಿದೆ. ಜಾತಿ ವ್ಯವಸ್ಥೆಯು ಅಕ್ಷರ ಸಂಸ್ಕೃತಿಗೆ ಕಂಟಕವಾಗಿದೆ ಮತ್ತು ಸಮಾನ ಅವಕಾಶಗಳು ದೊರೆಯದಂತೆ ಆಗಿದೆ. ಬದಲಾವಣೆ ಬಯಸದ ಕೆಲವರು ಜಾತಿ ವ್ಯವಸ್ಥೆ ಜಾರಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಸಮಾಜ ಸುಧಾರಣೆಗೆ ಯಥಾಸ್ಥಿತಿ ವಾದಿಗಳನ್ನು ವಿರೋಧಿಸಬೇಕು ಎಂಬ ಕರೆ ಕೊಟ್ಟರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರ ಮಾತನಾಡಿ, ವಿಶ್ವಕರ್ಮ ಕಲೆಯನ್ನು ಉಳಿಸಿ, ಬೆಳೆಸಲು ಸರ್ಕಾರದಿಂದ ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಎಂಜಿನಿಯರಿಂಗ್ ಮೊದಲಾದ ಕೋರ್ಸ್‌ಗಳನ್ನು ಈ ವಿಶ್ವವಿದ್ಯಾಲಯದೊಳಗೆ ಸೇರಿಸುವ ಪ್ರಯತ್ನ ಮಾಡಬೇಕು. ವಿಶ್ವಕರ್ಮ ಸಮುದಾಯದ ವಿದ್ಯಾವಂತ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮೀಸಲಾತಿ ನೀಡಿ, ತಮ್ಮ ಕಲೆಯಲ್ಲಿ ಮುಂದುವರಿಯುವಂತೆ ಮಾಡಬೇಕು ಎಂಬ ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಶಾಸಕ ಎನ್.ಎ.ಹ್ಯಾರಿಸ್, ವಿಧಾನ ಪರಿಷತ್ ಸದಸ್ಯ ರಘು ಆಚಾರ್, ಅರೇಮಾದನಹಳ್ಳಿಯ ಶಿವಸುಜ್ಞಾನಮೂರ್ತಿ ಸ್ವಾಮೀಜಿ, ಚಿಕ್ಕಬಳ್ಳಾಪುರದ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ, ಆನೆಗುಂದಿ ಶ್ರೀನಿವಾಸ ಸ್ವಾಮೀಜಿ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ನಂದಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕೃಷಿ ಅವಲಂಬಿಸಿರುವ ಭಾರತಕ್ಕೆ ರೈತ ಬೆನ್ನೆಲುಬಾದರೆ ರೈತನ ಬೆನ್ನೆಲುಬು ವಿಶ್ವಕರ್ಮ ಸಮಾಜ. ಇದು ಅತ್ಯಂತ ಪುರಾತನ ಸಮಾಜವಾಗಿದ್ದು, ಈ ಸಮುದಾಯದ ಧಾರ್ಮಿಕ ಚಟುವಟಿಕೆ ನಡೆಸಲು ಬೆಂಗಳೂರಿನಲ್ಲಿ ಸೂಕ್ತ ಜಮೀನು ಸರ್ಕಾರದಿಂದ ಒದಗಿಸುವಂತಾಗಬೇಕು.
– ಶಿವಸುಜ್ಞಾನಮೂರ್ತಿ ಸ್ವಾಮೀಜಿ, ಅರೇಮಾದನಹಳ್ಳಿ,