ವಾಡಿ: ಕುಶಲಕರ್ಮಿಗಳ ಕಲಾ ವೃತ್ತಿ ಪೋಷಿಸಿ ಬದುಕು ಉಜ್ವಲಗೊಳಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳಿಗೆ ಇದರ ಲಾಭ ತಲುಪಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು ಎಂದು ವಿಶ್ವಕರ್ಮ ಯೋಜನೆಯ ಚಿತ್ತಾಪುರ ತಾಲೂಕು ಸಲಹೆಗಾರ ಭರತ್ ಮುತ್ತಗಾ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮರಗೆಲಸ, ದೋಣಿ ತಯಾರಿಕೆ, ಬೀಗ ತಯಾರಿಕೆ, ನೇಕಾರಿಕೆ, ಕುಂಬಾರಿಗೆ, ಪಾದರಕ್ಷೆ ತಯಾರಿಕೆ, ಚಮ್ಮಾರರು, ಅಕ್ಕಸಾಲಿಗರು, ಕಮ್ಮಾರರು, ಅಗಸರು, ದರ್ಜಿಗಳು, ಶಿಲ್ಪಕಾರರು, ಚಮ್ಮಾರರು, ಮಕ್ಕಳ ಆಟಿಕೆ ತಯಾರಕರು, ಬಿದಿರು ಬುಟ್ಟಿ ತಯಾರಕರು, ಕ್ಷೌರಿಕರು, ಮೀನು ಬಲೆ ಹೆಣೆಯುವವರು, ಹೂಮಾಲೆ ಕಟ್ಟುವವರು
ಸೇರಿದಂತೆ ಇತರೆ ಕುಶಲಕರ್ಮಿಗಳು ಯೋಜನೆಯ ಅರ್ಹ ಫಲಾನುಭವಿಗಳಾಗಿದ್ದಾರೆ.
ಆನ್‌ಲೈನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದರು. ಆಯ್ಕೆಯಾದ ಫಲಾನುಭವಿಗಳಿಗೆ ಡಿಜಿಟಲ್ ಐಡಿ ಕಾರ್ಡ್ ಮತ್ತು ಪ್ರಧಾನಮಂತ್ರಿ ವಿಶ್ವಕರ್ಮ ಪ್ರಮಾಣಪತ್ರ ವಿತರಿಸಲಾಗುವುದು. ಕೌಶಲ್ಯ ತರಬೇತಿ ನೀಡುವ ಜತೆಗೆ ಅಗತ್ಯ ಉಪಕರಣಗಳನ್ನು ಒದಗಿಸಲಾಗುತ್ತದೆ. ಅಲ್ಲದೇ ಶೇ.5 ಬಡ್ಡಿ ದರದಲ್ಲಿ ಒಂದು ಲಕ್ಷ ರೂ. ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಕೇಂದ್ರ ಸರ್ಕಾರ ಕುಶಲಕರ್ಮಿಗಳಿಗೆ ಕೌಶಲ್ಯಾಭಿವೃದ್ಧಿ
ತರಬೇತಿ ನೀಡುವುದರ ಜತೆಗೆ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಿ ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿಕೊಡುತ್ತಿರುವುದು ಜನಪರ ನಿಲುವಾಗಿದೆ. ಇದರಿಂದ ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆ ಕಾಣಲಿದ್ದು, ಸಾಮಾಜಿಕ ಕಾಳಜಿಯಿಂದ ಜಾರಿಗೆ ತರಲಾಗಿರುವ ಈ ಯೋಜನೆಯನ್ನು ಪ್ರತಿಯೊಬ್ಬ ಕುಶಲಕರ್ಮಿಗೂ ತಲುಪಿಸುವ
ಕಾರ್ಯ ನಮ್ಮ ಕಾರ್ಯಕರ್ತರು ಮಾಡಲಿದ್ದಾರೆ ಎಂದರು.
ಪಕ್ಷದ ಉಪಾಧ್ಯಕ್ಷ ಪ್ರಕಾಶ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಅನಸೂಯಾ ಪವಾರ, ಅನ್ನಪೂರ್ಣ ದೊಡ್ಡಮನಿ, ಉಮಾದೇವಿ ಗೌಳಿ, ಮಲ್ಲಿಕಾರ್ಜುನ ಸಾತಖೇಡ, ಮಹಾಲಿಂಗ ಶೆಳ್ಳಗಿ, ಅಯ್ಯಣ್ಣ ದಂಡೋತಿ, ಶ್ರೀಕಾಂತ ಪಂಚಾಳ, ಪ್ರೇಮ ತೇಲ್ಕರ್ ಹಾಗೂ ಇನ್ನಿತರರು ಇದ್ದರು.