ಮೈಸೂರು: ಹಣ ಬಲದಿಂದ ಮತದಾರರನ್ನು ಕೊಂಡುಕೊಳ್ಳಲು ಬಂದಿರುವ ಸಿದ್ದರಾಮಯ್ಯ ಅವರನ್ನು ಸೋಲಿಸುವ ಮೂಲಕ ಅವರ ದುರಹಂಕಾರ ಇಳಿಸಿ, ಜಿ.ಟಿ.ದೇವೇಗೌಡರಂಥ ಜನಸ್ನೇಹಿ ಶಾಸಕರನ್ನು ಗೆಲ್ಲಿಸಿಕೊಳ್ಳಿ ಎಂದು ಜೆಡಿಎಸ್ ರಾಜಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಯಪುರ ಗೇಟ್‌ನ ದೇವಮ್ಮ ಚಿಕ್ಕ ಅಂಕೇಗೌಡ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮರ ನಡೆ-ಜೆಡಿಎಸ್ ಕಡೆ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಹಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿ, ಈ ಚುನಾವಣೆಯನ್ನು ತಮ್ಮನ್ನು ಬೆಂಬಲಿಸಿ, ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚನೆಯಾದರೆ ವಿಶ್ವಕರ್ಮ ಸಮಾಜದ ಮುಖಂಡರನ್ನು ತಿಂಗಳಿಗೊಮ್ಮೆ ವಿಧಾನಸೌಧದ ಮೂರನೇ ಮಹಡಿಗೆ ಕರೆಸಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಮನವಿ ಸಲ್ಲಿಕೆ: ಬೇಲೂರಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆ ನಿರ್ಮಾಣ, ಸಮಾಜಕ್ಕೆ ರಾಜಕೀಯ ಸ್ಥಾನಮಾನ ಕಲ್ಪಿಸುವುದು, ಪ್ರತ್ಯೇಕವಾಗಿ ಶೇ.3 ಒಳ ಮೀಸಲಾತಿ ನೀಡುವುದು, ಕುಶಲಕರ್ಮಿಗಳಿಗೆ ಪ್ರತ್ಯೇಕ ವಸತಿ ನೀತಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ 100 ಕೋಟಿ ರೂ. ಅನುದಾನ, ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಿಶ್ವಕರ್ಮ ಸಮುದಾಯ ಭವನ,
ಗ್ರಾಮೀಣ ಪ್ರದೇಶಗಳಲ್ಲಿ ಪಂಚ ಕಸುಬುಗಳನ್ನು ಮಾಡುವ ವಿಶ್ವಕರ್ಮರಿಗೆ ಪ್ರತ್ಯೇಕ ಶೆಡ್ ನಿರ್ಮಾಣ, ಅಮರಶಿಲ್ಪಿ ಜಕಣಾಚಾರಿ ಹೆಸರಲ್ಲಿ ಪ್ರತ್ಯೇಕ ವಿವಿ ಸ್ಥಾಪನೆ, ಕುಲ ಕಸುಬುಗಳನ್ನು ಉಳಿಸುವ ಸಲುವಾಗಿ ಸಮಾಜದವರಿಗೆ ಟೂಲ್ಸ್ ಕಿಟ್ ವಿತರಣೆ ಮಾಡುವುದು ಸೇರಿದಂತೆ ಅನೇಕ ಬೇಡಿಕೆಗಳ ಮನವಿ ಪತ್ರವನ್ನು ಸಮಾಜದ ಮುಖಂಡರು ಕುಮಾರಸ್ವಾಮಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕುಮಾರಸ್ವಾಮಿ, ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವುದು ಸರಿಯಲ್ಲ. ತಮ್ಮ ಜತೆಗೆ ನಾನಿದ್ದೇನೆ. ತನ್ನನ್ನು ನಂಬಿ ಜೆಡಿಎಸ್ ಬೆಂಬಲಿಸಿ, ಜಿ.ಟಿ.ದೇವೇಗೌಡರನ್ನು ಗೆಲ್ಲಿಸಿ, ತಮ್ಮ ಕೆಲಸಗಳನ್ನು ಮಾಡಿಕೊಡಲು ತಾನು ಸಿದ್ಧನಿದ್ದೇನೆ ಎಂದರು.
ಶಾಸಕ ಜಿ.ಟಿ.ದೇವೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಹಿನಕಲ್ ರಾಜು, ವಿಶ್ವಕರ್ಮ ಸಮಾಜದ ಮುಖಂಡರಾದ ಆನಂದೂರು ಪುಟ್ಟಸ್ವಾಮಾಚಾರ್, ಮುಳ್ಳೂರು ರಾಮಲಿಂಗಾಚಾರ್, ಕೆಂಡಗಣ್ಣ ವಿಶ್ವಕರ್ಮ, ರವಿಕುಮಾರ್ ಹೆಬ್ಟಾಳ್, ನಿಂಗಾಚಾರ್, ರಿಷಿ, ಆರ್.ಮುಕುಂದಾಚಾರ್ ಹಾಜರಿದ್ದರು. ಇದೇ ವೇಳೆ ಸಮಾಜದ ಹಲವು ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು.