ಮೈಸೂರು: ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾವತಿಯಿಂದ ಅಕ್ಟೋಬರ್ 8ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಅಖೀಲ ಭಾರತ ವಿಶ್ವಕರ್ಮ ಜಯಂತ್ಯುತ್ಸವ ಆಚರಿಸಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ ಎಂದು ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು. ನಗರದ ದಳವಾಯಿ ಶಾಲಾ ಪಕ್ಕದಲ್ಲಿ ಆರಂಭಗೊಂಡ ವಿಶ್ವಕರ್ಮ ಮಹಾಸಬಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮೂರನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಪಕ್ಷ ಕಟ್ಟುವುದು ಸುಲಭ. ಆದರೆ, ಒಂದು ಸಮುದಾಯ ಕಟ್ಟುವುದು ಸುಲಭದ ಮಾತಲ್ಲ. ಹಾಗಾಗಿ ಹಿಂದುಳಿದ ಸಮುದಾಯವನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗಕ್ಕೆ ರಾಜಕೀಯ ಶಕ್ತಿ ನೀಡಬೇಕಿದೆ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಲ್ಲೂ ರಾಜ್ಯ ಕಾಂಗ್ರೆಸ್ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸೆ.17 ರಂದು ಪ್ರಧಾನಿ ನರೇಂದ್ರಮೋದಿಯವರ ಹುಟ್ಟಿದ ದಿನವಾಗಿದ್ದು, ಅಂದೇ ರಾಷ್ಟ್ರಾದ್ಯಂತ ವಿಶ್ವಕರ್ಮ ಜಯಂತಿ ಆಚರಿಸಲು ವಿಶ್ವಕರ್ಮ ಸಮುದಾಯ ಶಕ್ತಿ ಪ್ರದರ್ಶನ ಮೂಲಕ ಒತ್ತಡ ಹೇರಬೇಕಿದೆ ಎಂದರು. 16 ವರ್ಷಗಳಿಂದ ನಮ್ಮ ಸಮುದಾಯ ರಾಜಕೀಯವಾಗಿ ಹಿಂದೆ ಉಳಿದಿದ್ದು, ಸಮುದಾಯವನ್ನು ಮುಂದೆ ತರುವ ನಿಟ್ಟಿನಲ್ಲಿ ಬಿಜೆಪಿ ಸೇರಿದ್ದೇನೆಯೇ ಹೊರತು ಬೇರಾವುದೇ ಉದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ತಾಲೂಕು ಬಿಜೆಪಿ ಮುಖಂಡ ಮಹದೇವಯ್ಯ, ವಿಶ್ವಕರ್ಮ ಜನಾಂಗದ ಮುಖಂಡ ರಾಜುಕಾರ್ಯ, ಬಸವರಾಜು, ವಿಶ್ವಕರ್ಮ ತಾಲೂಕು ಗೌರವಾಧ್ಯಕ್ಷ ನಾಗಚಾರ್, ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ರಾಜು, ಸಿದ್ದಾಚಾರ್, ಸಿದ್ದಪ್ಪಾ$ಜಿ, ಹೊಸಹೊಳಲು ಸಿದ್ದಪ್ಪಾಜಿ, ಯುವ ಘಟಕದ ನಾಗೇಶ್ ಇತರರು ಇದ್ದರು.