ಮೈಸೂರು: ವಿಶ್ವಕರ್ಮ ಜಯಂತಿಯಂದೇ ರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಲು ಪ್ರಧಾನಿ ನರೇಂದ್ರಮೋದಿ ಅವರಿಗೆ ಮೈಸೂರಿನಿಂದಲೇ ಮನವಿ ಸಲ್ಲಿಸಬೇಕಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು. ಭಾರತೀಯ ಮಜ್ದೂರ್ ಸಂಘದ ಮೈಸೂರು ವಿಭಾಗದಿಂದ ನಗರದ ಶಂಕರಮಠದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಮತ್ತು ವಿಶ್ವಕರ್ಮರ ಜಯಂತಿಯಲ್ಲಿ ಮಾತನಾಡಿದರು.
ವಿಶ್ವಕರ್ಮ ಸಮುದಾಯದವರನ್ನು ಕೇವಲ ಜಾತಿಯ ಮೂಲಕ ಗುರುತಿಸುವ ಬದಲಿಗೆ ಅವರ ವಿನ್ಯಾಸಕಲೆ, ವಾಸ್ತುಶಿಲ್ಪ, ಚಿನ್ನ ಹಾಗೂ ಮರದಕೆತ್ತನೆ ಕೆಲಸಗಳನ್ನು ನೋಡಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು. ಸಮಾಜದಲ್ಲಿ ಪ್ರತಿನಿತ್ಯ ತಮ್ಮ ಕೆಲಸಗಳಿಂದಲೇ ಮುಂಚೂಣೆಯಲ್ಲಿರುವ ವಿಶ್ವಕರ್ಮರ ಜಯಂತಿಯಂದೇ ರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಬೇಕಿದೆ.
ಹೀಗಾಗಿ ಸೆ.17ರಂದು ರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸುವಂತೆ ಮೈಸೂರಿನಿಂದಲೇ ಎಲ್ಲರೂ ಪ್ರಧಾನಿಗೆ ಮನವಿ ಸಲ್ಲಿಸುವ ಕೆಲಸವಾಗಬೇಕಿದೆ ಎಂದರು. ವಿಶ್ವಕರ್ಮರ ಮೂಲದ ಬಗ್ಗೆ ಇಂದಿಗೂ ಹಲವು ಗೊಂದಲಗಳಿವೆ. ಆದರೆ ಶ್ರೀಕೃಷ್ಣನ ದ್ವಾರಕೆ ನಿರ್ಮಿಸುವ ಅವಕಾಶ ವಿಶ್ವಕರ್ಮರ 3ನೇ ಸಂತತಿಗೆ ಸಿಕ್ಕಿತ್ತು. ಮಹಾಭಾರತದ ನಂತರ ಇಂದ್ರಪ್ರಸ್ತ ನಿರ್ಮಿಸಿಕೊಟ್ಟವರು ವಿಶ್ವಕರ್ಮರೇ ಆಗಿದ್ದು, ಅಂದಿನಿಂದಲೂ ಶಿಲ್ಪಿಗಳಾಗಿ, ಚಿನ್ನ-ಬೆಳ್ಳಿ ವರ್ತಕರಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆಂದರು.
ವಿಶ್ವಕರ್ಮರ ಚಿಂತನೆಗಳು ಅಡಕವಾಗಿದ್ದ ಒಲೆಗರಿಗಳನ್ನು ಕದ್ದು ಹೋದ ಜರ್ಮನ್ ಅದರ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಇದೇ ಕಾರಣಕ್ಕಾಗಿ ಜರ್ಮನ್ ಸರ್ಕಾರ ಇಂದಿಗೂ ವಿಶ್ವಕರ್ಮರ ದಿನವನ್ನು ಆಚರಿಸುತ್ತಿದೆ ಎಂದು ಹೇಳಿದರು. ಭಾರತೀಯ ಮಜ್ದೂರ್ ಸಂಘದ ರಾಜಾಧ್ಯಕ್ಷ ವಿಶ್ವನಾಥ್ ಶೆಟ್ಟಿ, ದೇಶದಲ್ಲಿ ಡೋಂಗಿ ಕಾರ್ಮಿಕ ಸಂಘಟನೆಗಳ ಹಾವಳಿ ಹೆಚ್ಚಾಗಿದ್ದು, ಇದರ ಪರಿಣಾಮ ನಿಜವಾದ ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಇದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರದಿಂದ ಕಾರ್ಮಿಕ ಸಂಘಟನೆಗಳ ಪರಿಶೀಲನೆ ನಡೆಯುತ್ತಿದ್ದು, ಇದಕ್ಕಾಗಿ ಭಾರತೀಯ ಮಜ್ದೂರ್ ಸಂಘ 1.75 ಕೋಟಿ ಸದಸ್ಯರ ದಾಖಲೆ ಒದಗಿಸಿಕೊಟ್ಟಿದೆ ಎಂದು ತಿಳಿಸಿದರು. ಭಾರತೀಯ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಟಿ.ವಿ.ಬಾಲಕೃಷ್ಣ, ಕಲ್ಯಾಣಗಿರಿ ಸೆಂಟ್ರಲ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಎಚ್.ಎಸ್.ಪ್ರಸನ್ನ, ಸಂಘದ ಗೌರವಾಧ್ಯಕ್ಷ ಎಚ್.ಎಸ್.ಸದಾಶಿವ, ಕಾರ್ಯದರ್ಶಿ ಶಾಂತಕುಮಾರ್ ಇದ್ದರು.