Advertisement

ಬಂಗಾರಪೇಟೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

01:59 PM Sep 18, 2022 | Team Udayavani |

ಬಂಗಾರಪೇಟೆ: ಸಮಾಜದ ವಿವಿಧ ವರ್ಗದ ಜನರ ಮತ ಪಡೆದುಕೊಂಡ ಕೆಲವು ಜನಪ್ರತಿನಿಧಿಗಳು, ಗೆದ್ದ ನಂತರ ಎಲ್ಲಾ ವರ್ಗದ ಜನರನ್ನು ಮರತೆ ಹೋಗಿದ್ದು, ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಬೇಕಾಗಿದೆ ಎಂದು ಸಂಸದ ಎಸ್‌. ಮುನಿಸ್ವಾಮಿ ಹೇಳಿದರು.

Advertisement

ಪಟ್ಟಣದ ವಿಶ್ವಕರ್ಮ ದೇಗುಲದಲ್ಲಿ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಈ ಕ್ಷೇತ್ರದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಮತ ಪಡೆದು ರಾಜಕಾರಣಿಯಾಗಿ ಬಡವರಿಗೆ ಸರ್ಕಾರಿ ಜಮೀನು ಮಾಡಿಕೊಡದೇ ತನ್ನ ಸ್ವಂತಕ್ಕಾಗಿ ಮಾಡಿಕೊಂಡು ಮೆರೆಯುತ್ತಿದ್ದಾರೆ ಎನ್ನುವುದು ಎಲ್ಲರ ಕಣ್ಣುಮುಂದೆ ಇದೆ ಎಂದು ಕಾಂಗ್ರೆಸ್‌ ಶಾಸಕರ ವಿರುದ್ಧ ಪರೋಕ್ಷವಾಗಿ ತಿರುಗೇಟು ನೀಡಿದರು.

ತಾಲೂಕಿನಲ್ಲಿ ಹೆಚ್ಚಾಗಿ ಸರ್ಕಾರಿ ಜಮೀನು ಗೋಮಾಳವಿದೆ. ಸಮಾಜದಲ್ಲಿರುವ ಎಲ್ಲ ಸಮಾಜಗಳಿಗೆ ತಲಾ ಐದಾರು ಎಕರೆ ಜಮೀನು ಮಂಜೂರು ಮಾಡಿಸಿದರೆ ಆ ಜನಾಂಗವು ಹೆಚ್ಚಾಗಿ ಋಣಿಯಾಗಿರುತ್ತಾರೆ. ಇಂದಿನ ಜನಪ್ರತಿನಿಧಿ ಈ ಒಳ್ಳೆಯ ಕೆಲಸವನ್ನು ಮಾಡದೇ ಯಾವ ರೀತಿ ಸರ್ಕಾರದ ಜಮೀನು ಕಬಳಿಸಿದ್ದಾರೆ ಎನ್ನುವುದು ಗೊತ್ತಿದೆ. ಇಂತಹ ಭ್ರಷ್ಟ ರಾಜಕಾರಣಿ ತಪ್ಪದೇ ಮನೆಗೆ ಕಳುಹಿಸುವ ಕೆಲಸ ಮಾಡಬೇಕು ಎಂದರು.

ವಿಶ್ವಕರ್ಮ ಜನಾಂಗಕ್ಕೆ ಬಿಎಸ್‌ವೈ ಶಕ್ತಿ ತುಂಬಿದ್ದಾರೆ: ರಾಜ್ಯದಲ್ಲಿ ವಿಶ್ವಕರ್ಮ ಜನಾಂಗವನ್ನು ಹಲವಾರು ವರ್ಷ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಬಳಸಿಕೊಂಡಿದ್ದನ್ನು ತಾವೆಲ್ಲರೂ ನೋಡಿದ್ದೀರಿ. ವಿಶ್ವಕರ್ಮ ಜನಾಂಗದ ಕೆಲವು ಮುಖಂಡರಿಗೆ ರಾಜಕೀಯ ಭವಿಷ್ಯದ ಆಮಿಷವೊಡ್ಡಿ ಅವರಿಂದ ರಾಜಕೀಯ ಅಧಿಕಾರ ಪಡೆದು ಮೋಸ ಮಾಡಿದ್ದ ವೇಳೆ ಬಿ.ಎಸ್‌.ಯಡಿಯೂರಪ್ಪ ಅವರು ವಿಶ್ವಕರ್ಮ ನಿಗಮ ಸ್ಥಾಪನೆ ಮಾಡಿ ಅನುದಾನ ಮಂಜೂರು ಮಾಡಿಸಿ ಜನಾಂಗದ ಏಳಿಗೆಗೆ ಶ್ರಮಿಸಿ ವಿಶ್ವಕರ್ಮ ಜನಾಂಗಕ್ಕೆ ಶಕ್ತಿ ತುಂಬಿದ್ದಾರೆಂದು ಹೇಳಿದರು.

ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ, ಪುರಸಭೆ ಸದಸ್ಯ ಕಪಾಲಿ ಶಂಕರ್‌, ಸಂಘದ ಅಧ್ಯಕ್ಷ ಆರ್‌.ಶಶಿಕುಮಾರ್‌, ಕಾರ್ಯದರ್ಶಿ ಗಿರಿಶೇಖರ್‌, ಖಜಾಂಚಿ ಆರ್‌.ಶ್ರೀನಿವಾಸ್‌, ಉಪಾಧ್ಯಕ್ಷ ಬುದ್ದಾಚಾರಿ, ನಾಗರಾಜ್‌, ತಿರುಮಲಚಾರಿ, ಅನಿಲ್‌ಕುಮಾರ್‌, ವೆಂಕಟರಾಮಾಚಾರಿ, ನವೀನ್‌, ಮಾರುತಿರಾಜ್‌, ಹರೀಶ್‌, ನರೇಶ್‌, ಎಸ್‌. ವೆಂಕಟೇಶ್‌, ರಾಘವೇಂದ್ರಾಚಾರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next