Advertisement

ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸಭೆ: 2024ರ ಜನವರಿಯಲ್ಲಿ ಪ್ರಾಣಪ್ರತಿಷ್ಠೆ

01:56 AM Apr 20, 2022 | Team Udayavani |

ಉಡುಪಿ: ಅಯೋಧ್ಯೆಯಲ್ಲಿ ಮಂಗಳವಾರ ನಡೆದ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸಭೆಯಲ್ಲಿ 2023ರ ಡಿಸೆಂಬರ್‌ ಒಳಗೆ ಮಂದಿರ ಕಾಮಗಾರಿ ನಡೆಸಿ 2024ರ ಜನವರಿಯಲ್ಲಿ ಪ್ರಾಣಪ್ರತಿಷ್ಠೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಯಿತು ಎಂದು ಸಭೆಯಲ್ಲಿ ಪಾಲ್ಗೊಂಡ ಟ್ರಸ್ಟ್‌ ವಿಶ್ವಸ್ತರಾದ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದರು.

Advertisement

2023ರ ಡಿಸೆಂಬರ್‌ನಲ್ಲಿ ಪ್ರಾಣಪ್ರತಿಷ್ಠೆ ನಡೆಸುವುದೆಂದು ಹಿಂದೆ ನಿರ್ಧರಿಸಲಾಗಿತ್ತು. ಈಗ ಜನವರಿಯಲ್ಲಿ ಉತ್ತರಾಯಣ ಪರ್ವಕಾಲ ಬರುವುದರಿಂದ ಜನವರಿಯಲ್ಲಿ ಪ್ರತಿಷ್ಠಾ ವಿಧಿವಿಧಾನಗಳನ್ನು ನಡೆಸಲು ಸಭೆಯಲ್ಲಿ ಚರ್ಚೆ ನಡೆಯಿತು. ಇಲ್ಲಿ ಹಿಂದಿನಿಂದಲೂ ರಮಾನಂದ ಸಂಪ್ರದಾಯದಂತೆ ಪೂಜೆಗಳು ನಡೆಯುತ್ತಿದ್ದು ಈ ಸಂಪ್ರದಾಯದ ಮಠಾಧಿಪತಿಗಳ ನೇತೃತ್ವದಲ್ಲಿ ಪ್ರತಿಷ್ಠಾ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಯಿತು. ಸ್ಥಳೀಯ ಅರ್ಚಕರಿಗೆ ಸೂಕ್ತ ಪ್ರಶಿಕ್ಷಣ ನೀಡಲು ಸಭೆ ನಿರ್ಧರಿಸಿತು ಎಂದರು.

ಕಾಮಗಾರಿ ನಡೆಸುವಾಗ ಸಿಕ್ಕಿರುವ ಅವಶೇಷಗಳನ್ನು ಸಂಗ್ರಹಿಸಿ ವಸ್ತು ಸಂಗ್ರಹಾಲಯ ನಿರ್ಮಿಸಲು ನಿರ್ಧರಿಸಲಾಗಿದೆ. ಇವು ಭಾರತದ ಹಿಂದಿನ ಪ್ರಧಾನಮಂತ್ರಿಗಳ ಜೀವನಚರಿತ್ರೆ ಕುರಿತು ಮಾಡಿದ ವಸ್ತುಸಂಗ್ರಹಾಲಯದ ಮಾದರಿಯಲ್ಲಿ ಮಾಡುವ ಕುರಿತು ಪ್ರಧಾನಿಯವರ ಆಪ್ತ ಸಲಹೆಗಾರರು ವಿವರಿಸಿದರು.

ಯೋಜನಾ ವೆಚ್ಚ ಹೆಚ್ಚಳ
ಈ ಹಿಂದೆ 400 ಕೋ.ರೂ. ವೆಚ್ಚದಲ್ಲಿ ಮಂದಿರ ನಿರ್ಮಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಭೂಸಾಮರ್ಥ್ಯದ ಅಧ್ಯಯನದ ಪ್ರಕಾರ ಅನೇಕ ಬದಲಾವಣೆ ಮಾಡಿರುವುದರಿಂದ ಹೆಚ್ಚುವರಿ ಖರ್ಚು ಮಾಡಲು ಸಭೆ ಅನುಮೋದನೆ ನೀಡಿತು. 70 ಎಕ್ರೆ ಸ್ಥಳದಲ್ಲಿ ಮಂದಿರಕ್ಕೆ ಸಂಬಂಧಿಸಿದ ನಿರ್ಮಾಣಗಳು ಮಾತ್ರ ಇರಲಿವೆ. ಯಾತ್ರೀ ನಿವಾಸಗಳನ್ನು ಇಲ್ಲಿ ನಿರ್ಮಿಸುವುದಿಲ್ಲ ಎಂದು ಸಭೆ ಸ್ಪಷ್ಟಪಡಿಸಿತು.

ಕರಸೇವೆಗೆ ಅವಕಾಶ ಇಲ್ಲ
ಸ್ವಯಂಸೇವಕರು ಕರಸೇವೆ ಮಾಡಲು ಉತ್ಸುಕರಾಗಿದ್ದರೂ ಕ್ರೇನ್‌ ಮೂಲಕ ಕೆಲಸ ನಡೆಯುವುದರಿಂದ ಇದಕ್ಕೆ ಅವಕಾಶ ಇಲ್ಲ ಎಂದು ಸಭೆ ನಿರ್ಧರಿಸಿತು. ಅಖಂಡ ಭಜನೆ ಈಗಾಗಲೇ ಆರಂಭಗೊಂಡಿದ್ದು ಭಕ್ತರು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಯಾವುದೇ ಊರಿನ ಭಕ್ತರು ಇಚ್ಛಿಸಿದರೆ ಅವರು ವಿಹಿಂಪ ಪ್ರಮುಖರಾದ ಚಂಪತ್‌ರಾಯ್‌, ಗೋಪಾಲ್‌ ಅವರನ್ನು ಸಂಪರ್ಕಿಸಬಹುದು ಎಂದು ಶ್ರೀಗಳು ತಿಳಿಸಿದರು.

Advertisement

ದೇವಸ್ಥಾನಕ್ಕೆ ಬಲವಾದ ಬುನಾದಿ ಹಾಕಲಾಗಿದೆ. ಜೂನ್‌ನಲ್ಲಿ 16.5 ಅಡಿ ಎತ್ತರದ ಪ್ಲಿಂತ್‌ ನಿರ್ಮಿಸುವ ಕೆಲಸ ನಡೆಯಲಿದೆ. ಜೂನ್‌ನಲ್ಲಿ ಶಿಲಾಸ್ತಂಭಗಳನ್ನು ನಿಲ್ಲಿಸಲು ಆರಂಭವಾಗುತ್ತದೆ ಎಂದು ಗೋಪಾಲ್‌ ತಿಳಿಸಿದರು.

ಶ್ರೀಗಳು ಮೊದಲು ತಾತ್ಕಾಲಿಕ ಮಂದಿರ ದಲ್ಲಿರುವ ರಾಮಲಲ್ಲಾನ ದರ್ಶನ ಪಡೆದು ಚಾಮರಸೇವೆ, ಮಂಗಳಾರತಿ ಬೆಳಗಿ ದೇಶದ ಕ್ಷೇಮ, ಸುಭಿಕ್ಷೆ, ಶಾಂತಿಗೆ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next