ಬೆಳಗಾವಿ: ವಿಶ್ವಕರ್ಮರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಭಾರತೀಯ ಕಲೆ, ಸಂಸ್ಕೃತಿ, ತಂತ್ರಜ್ಞಾನದ ಪ್ರತೀಕವಾಗಿದ್ದಾರೆ ಎಂದು ಹಾರೂಗೇರಿಯ ನಿವೃತ್ತ ಪ್ರಾಚಾರ್ಯರಾದ ಶ್ರೀಕಾಂತ ಪತ್ತಾರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ವಿಶ್ವಕರ್ಮರು ಅಪಾರ ಜ್ಞಾನದಿಂದ ಅರಮನೆ, ಮಹಲುಗಳು, ವಾಹನಗಳು, ಆಯುಧಗಳನ್ನು ಸೇರಿದಂತೆ ಅನೇಕ ರೀತಿಯ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿದ್ದಾರೆ. ಪ್ರತಿವರ್ಷ ವಿಶ್ವಕರ್ಮ ಜಯಂತಿಯಂದು ಉಪಕರಣ, ಯಂತ್ರಗಳನ್ನು ಮತ್ತು ಕೈಗಾರಿಕಾ ಘಟಕಗಳನ್ನು ಪೂಜಿಸಲ್ಪಡುವುದು ನಮ್ಮ ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದರು.
ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅನಿಲ ಬೆನಕೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಸ್ವಾಗತಿಸಿದರು. ಡಾ| ಪ್ರತಾಪ್ ಕುಮಾರ ಅವರು ಕಾರ್ಯಕ್ರಮ ನಿರೂಪಿಸಿದರು. ಹಾರೂಗೇರಿ ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣ ಸಂಘದ ಅಧ್ಯಕ್ಷರಾದ ಕಲ್ಲಪ್ಪ ಬಡಿಗೇರ ವಂದಿಸಿದರು. ಸಂತೋಷ ಪತ್ತಾರ, ಬೆಂಗಳೂರು ಲಲಿತ ಕಲಾ ಅಕಾಡೆಮಿಯ ಈರಣ್ಣ ಅರ್ಕಸಾಲಿ, ಸಮಾಜದ ಮುಖಂಡರಾದ ಭರತೇಶ ಶಿರೋಳ್ಕರ, ಉತ್ತರ ಕರ್ನಾಟಕ ವಿಶ್ವಕರ್ಮ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇದ್ರ ಪತ್ತಾರ, ಮಲ್ಲಗೌಡ ಪಾಟೀಲ ಉಪಸ್ಥಿತರಿದ್ದರು.