Advertisement

ದೇವಸ್ಥಾನ ನಿರ್ಮಾಣಕ್ಕಾಗಿ ಕರಸೇವೆ, ಕ್ರೌಡ್‌ ಫ‌ಂಡಿಂಗ್‌

10:59 AM Nov 14, 2019 | Hari Prasad |

ಅಯೋಧ್ಯೆ/ಹೊಸದಿಲ್ಲಿ: ಮುಂದಿನ ವರ್ಷದಿಂದ ನಿರ್ಮಾಣವಾಗಲಿರುವ ರಾಮ ಮಂದಿರಕ್ಕೆ ದೇಶದ ನಾಗರಿಕರಿಂದ ಹಣ ಸಂಗ್ರಹಿಸಲು (ಕ್ರೌಡ್‌ ಫ‌ಂಡಿಂಗ್‌) ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ತೀರ್ಮಾನಿಸಿದೆ. ಜತೆಗೆ ನಿರ್ಮಾಣ ಕಾರ್ಯಕ್ಕೆ ‘ಕರಸೇವೆ’ ನಡೆಸಲೂ ತೀರ್ಮಾನಿಸಿದೆ. ಅದಕ್ಕಾಗಿ ಶೀಘ್ರದಲ್ಲಿಯೇ ಬೃಹತ್‌ ಆಂದೋಲನ ಶುರುವಾಗಲಿದೆ.

Advertisement

1990ರಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ವಿಎಚ್‌ಪಿ ಕಾರ್ಯಕರ್ತರು ಮಂದಿರ ನಿರ್ಮಾಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಇಟ್ಟಿಗೆ ಮತ್ತು ದೇಣಿಗೆಯನ್ನು ಸಂಗ್ರಹಿಸಿದ ಮಾದರಿಯಲ್ಲಿಯೇ ಅದನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.

ಕ್ರೌಡ್‌ ಫ‌ಂಡಿಂಗ್‌: ದೇಗುಲ ನಿರ್ಮಾಣಕ್ಕೆ ಬೇಕಾಗುವ ವೆಚ್ಚವನ್ನು ಜನರಿಂದ ದೇಣಿಗೆ ಸಂಗ್ರಹ (ಕ್ರೌಡ್‌ ಫ‌ಂಡಿಂಗ್‌) ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಗೊಂದಲ ಇಲ್ಲ ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದ್ದಾರೆ. ಅದಕ್ಕಾಗಿ ಶೀಘ್ರದಲ್ಲಿಯೇ ತಂಡಗಳನ್ನು ರಚನೆ ಮಾಡಲಾಗುತ್ತದೆ. ಅವುಗಳು ಜನರಿಂದ ದೇಣಿಗೆ ಸಂಗ್ರಹಿಸಲಿವೆ. ನಿರ್ಮಾಣ ಕಾರ್ಯಕ್ಕಾಗಿ ಜನರು ನೀಡುವ ಉದಾರ ದೇಣಿಗೆಯನ್ನು ಮಾತ್ರವೇ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ ಕುಮಾರ್‌.

ವಿಎಚ್‌ಪಿ ವಕ್ತಾರ ವಿನೋದ್‌ ಬನ್ಸಾಲ್‌ ಮಾತನಾಡಿ ದೇಶದಾದ್ಯಂತ ಜನರಿಂದ ಧನ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಅಗತ್ಯ ಬಿದ್ದರೆ ‘ಕರಸೇವೆ’ಯ ನೆರವನ್ನೂ ಕೈಗೊಳ್ಳಲಾಗುತ್ತದೆ. ದೇಗುಲ ನಿರ್ಮಾಣಕ್ಕೆ ದೇಶದ 718 ಜಿಲ್ಲೆಗಳಿಂದ ಭಕ್ತರನ್ನು, ಉತ್ಸಾಹಿಗಳನ್ನು ಆಹ್ವಾನಿಸಲಾಗುತ್ತದೆ ಎಂದು ‘ದ ಟೈಮ್ಸ್‌ ಆಫ್ ಇಂಡಿಯಾ’ಕ್ಕೆ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಒಂದು ವಾರ ಕಾಲ ಅವರು ಇದ್ದು ದೇಗುಲ ನಿರ್ಮಾಣ ಕಾರ್ಯದಲ್ಲಿ ಕೊಡುಗೆ ನೀಡುವ ಯೋಜನೆ ಇದೆ ಎಂದು ಹೇಳಿದ್ದಾರೆ.

ಭಕ್ತರಿಗೆ ಇರಲಿ ಅವಕಾಶ: ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ರಚಿಸಲು ಉದ್ದೇಶಿಸಿರುವ ಟ್ರಸ್ಟ್‌ನಲ್ಲಿ ಭಕ್ತರಿಗೆ ಅವಕಾಶ ನೀಡಿದರೆ ಒಳ್ಳೆಯದು ಎಂದು ಬನ್ಸಲ್‌ ಹೇಳಿದ್ದಾರೆ.

Advertisement

ನಿರಂತರ ಪಹರೆ, ಎಚ್ಚರಿಕೆ: ಡಿಜಿಪಿ ಅಯೋಧ್ಯೆಯ ಜಮೀನು ಮಾಲೀಕತ್ವದ ಬಗ್ಗೆ ತೀರ್ಪು ಪ್ರಕಟವಾಗಿದ್ದರೂ, ಮುಂದಿನ ಹಲವು ದಿನಗಳ ವರೆಗೆ ಉತ್ತರ ಪ್ರದೇಶದಾದ್ಯಂತ ಬಿಗಿ ಪಹರೆ, ಕಟ್ಟೆಚ್ಚರದ ವ್ಯವಸ್ಥೆ ಮುಂದುವರಿಯುತ್ತದೆ ಎಂದು ಪೊಲೀಸ್‌ ಮಹಾನಿರ್ದೇಶಕ ಒ.ಪಿ.ಸಿಂಗ್‌ ಹೇಳಿದ್ದಾರೆ.

‘ಪಿಟಿಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಅವರು, ತೀರ್ಪಿನ ಬಗ್ಗೆ ಆಕ್ಷೇಪಾರ್ಹವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 70 ಮಂದಿಯನ್ನು ಬಂಧಿಸಲಾಗಿದೆ. ಇದರ ಜತೆಗೆ 270ಕ್ಕೂ ಅಧಿಕ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ನಿಗಾ ಇರಿಸಲಾಗಿತ್ತು. ಅದಕ್ಕಾಗಿಯೇ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಹೇಳಿದ್ದಾರೆ. ನಕಲಿ, ಸುಳ್ಳು ಮಾಹಿತಿ ಹರಡುವುದನ್ನು ತಡೆಯಲು ಎಂಟು ಲಕ್ಷ ಮಂದಿ ಡಿಜಿಟಲ್‌ ಸ್ವಯಂಸೇವಕರನ್ನು ನೇಮಿಸಲಾಗಿತ್ತು ಎಂದು ಹೇಳಿದ್ದಾರೆ.

ಭಕ್ತರಿಂದ ಪುಣ್ಯ ಸ್ನಾನ
ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ಮಂಗಳವಾರ ನಡೆದ ಮೊದಲ ಕಾರ್ತಿಕ ಪೂರ್ಣಿಮೆ ಪ್ರಯುಕ್ತ ದೇಶದ ವಿವಿಧ ಭಾಗಗಳಿಂದ ಬಂದ ಲಕ್ಷಾಂತರ ಮಂದಿ ಭಕ್ತರು ಸರಯೂ ನದಿ ಮತ್ತು ಇತರ ಕಲ್ಯಾಣಿಗಳಲ್ಲಿ ಪವಿತ್ರ ಸ್ನಾನ ಮಾಡಿ ಕೃತಾರ್ಥರಾದರು. ಸೋಮವಾರ ಸಂಜೆ 4 ಗಂಟೆಯಿಂದಲೇ ಭಕ್ತರು ಅಲ್ಲಿಗೆ ಆಗಮಿಸಿ ಸ್ನಾನ-ಧಾರ್ಮಿಕ ವಿಧಿಗಳನ್ನು ಪೂರೈಸಿದರು.

ಹನುಮಾನ್‌ ಮಂದಿರದಿಂದ ಭಕ್ತರಿಗಾಗಿ ಅಡುಗೆ ಕೋಣೆ
ಅಯೋಧ್ಯೆಯ ರಾಮ ಮಂದಿರ ಸ್ಥಳಕ್ಕೆ ಭೇಟಿ ನೀಡುವ ಶ್ರದ್ಧಾಳುಗಳ ಊಟ-ಉಪಚಾರಕ್ಕಾಗಿ ಪಾಟ್ನಾದಲ್ಲಿರುವ ಹನುಮಾನ್‌ ಮಂದಿರದ ವತಿಯಿಂದ ಅಡುಗೆ ಕೋಣೆ ನಿರ್ಮಿಸಲಾಗುತ್ತದೆ. ಅದಕ್ಕಾಗಿ 10 ಕೋಟಿ ರೂ. ನೀಡಲು ಸಿದ್ಧರಿದ್ದೇವೆ ಎಂದು ಮಂದಿರದ ನೇತೃತ್ವ ವಹಿಸಿರುವ ಮಹಾವೀರ ಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಕಿಶೋರ್‌ ಕುನಾಲ್‌ ಹೇಳಿದ್ದಾರೆ.

ಸದ್ಯ ದೇಗುಲಗಳ ನಗರಿಯಲ್ಲಿ ಪರಿಸ್ಥಿತಿ ಯಥಾಸ್ಥಿತಿಗೆ ಬರಲು ಕಾಯುತ್ತಿದ್ದೇವೆ. ಅಯೋಧ್ಯೆಯಲ್ಲಿರುವ ದೇಗುಲ ಸ್ಥಳದ ಹೊರಭಾಗದಲ್ಲಿ ಅಡುಗೆ ಕೋಣೆ ನಿರ್ಮಿಸಿ ಸಾಮೂಹಿಕ ಭೋಜನದ ಜತೆಗೆ ಪ್ರಸಿದ್ಧ “ನೈವೇದ್ಯ’ ಲಡ್ಡುಗಳನ್ನು ಪ್ರವಾಸಿಗರಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next