Advertisement

ಮತ್ತೆ ಬಂತು ನವಹರುಷವ ಹೊತ್ತು ವಿಷುಕಣಿ ಸಂಭ್ರಮ

07:20 AM Apr 14, 2018 | Karthik A |

ಇತ್ತೀಚೆಗಷ್ಟೇ ಚಾಂದ್ರಮಾನ ಯುಗಾದಿಯನ್ನು ಹಲವಾರು ಕಡೆಗಳಲ್ಲಿ ಹೊಸವರುಷವೆಂದು ಬಹಳ ಸಂಭ್ರಮದಿಂದ ಆಚರಿಸಲಾಯಿತು.ಇದೀಗ ಬಂದಿರುವುದೇ ಸೌರಯುಗಾದಿಯ ಸಂಭ್ರಮ. ‘ವಿಷು’ ಎಂದೇ ಕರೆಯಲ್ಪಡುವ ಈ ಹಬ್ಬವು ಕೇರಳೀಯರ ಹಾಗೂ ತುಳುನಾಡ ಜನರ ಪ್ರಮುಖ ಹಬ್ಬವಾಗಿದೆ.ಈ ದಿವಸವನ್ನೇ ಹೊಸವರ್ಷವೆಂದು ಆಚರಿಸುತ್ತಾರೆ. ಮೇಷಮಾಸದ ಒಂದನೇ ದಿನ ಅಂದರೆ ಸೂರ್ಯನು ಮೆಷರಾಶಿಯನ್ನು ಪ್ರವೇಶಿಸಿದ ದಿನವೇ ಸೌರಯುಗಾದಿ ಅಥವಾ ವಿಷು ಎಂದು ಕರೆಯಲ್ಪಡುವುದು.

Advertisement

ವಿಷು ಕಣಿ ಎಂದೇ ಪ್ರಸಿದ್ಧಿ ಪಡೆದಿರುವುದು ಈ ಹಬ್ಬದ ವಿಶೇಷ . ‘ವಿಷು ಕಣಿ’ ಎಂದರೆ ತಾವು ಬೆಳೆಸಿದ ವಿವಿಧ ಹಣ್ಣು ತರಕಾರಿಗಳನ್ನು ಅಥವಾ ಪೇಟೆಯಿಂದ ತಂದು ದೇವರ ಕೋಣೆಯಲ್ಲಿ ದೇವರ ಮುಂದೆ ಇಡುವುದು. ಗೇರುಹಣ್ಣು, ಮಾವಿನಹಣ್ಣು, ಚಿಕ್ಕು, ನೇರಳೆ, ಮುಸುಂಬಿ, ಸೌತೆಕಾಯಿ, ಮುಳ್ಳುಸೌತೆ ಚೀನಿಕಾಯಿ ಇತ್ಯಾದಿಗಳನ್ನು ಹಿಂದಿನ ದಿನ ರಾತ್ರಿಯೇ ಇಡುತ್ತಾರೆ. ಹಳದಿ ಬಣ್ಣದ ಪೊನ್ನೆ ಹೂ ಬಹಳ ವಿಶೇಷ. ಈ ಮಾಸದಲ್ಲಿ ಸಮೃದ್ಧವಾಗಿ ಅರಳಿ ಮರವೇ ಹೊನ್ನಿನಂತ ಕಾಣುತ್ತಿರುತ್ತದೆ. ವಿಷುವಿನ ದಿನ ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಬೇರೆ ಏನನ್ನೂ ನೋಡದೆ ಮೊದಲಿಗೆ ಹೂ ಹಣ್ಣುಗಳಿಂದ ಅಲಂಕೃತಗೊಂಡ ‘ವಿಷು ಕಣಿ’ಯನ್ನು ನೋಡಿ, ದೇವರಿಗೆ ನಮಸ್ಕರಿಸಿ, ಅನಂತರ ಮನೆಯ ಹಿರಿಯರೆಲ್ಲರಿಗೂ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುವುದು ಪದ್ಧತಿ. ಹಿರಿಯರು  ಮಕ್ಕಳಿಗೆ ಉಡುಗೊರೆ ನೀಡಿ ಹರಸಿದಾಗ ಮಕ್ಕಳಿಗೋ ಎಲ್ಲಿಲ್ಲದ ಸಂತೋಷ. ಹೊಸವರುಷದಾರಂಭದಲ್ಲಿ ಸಮೃದ್ಧಿಯ ಸಂಕೇತವಾದ ಫ‌ಲವಸ್ತುಗಳನ್ನು ದೇವರಿಗರ್ಪಿಸಿ ಬೇಡಿಕೊಂಡಲ್ಲಿ ವರುಷವಿಡೀ ಒಳ್ಳೆಯದಾಗುವುದೆಂಬ ನಂಬಿಕೆ. ಅದಕ್ಕಾಗಿಯೇ ವಿಷು ಬಂತೆಂದರೆ ನಗರವೂ ನೋಡಲು ಹೂ ಹಣ್ಣುಗಳಿಂದ ತುಂಬಿರುವುದು.ಮಾರಾಟವು ಭರದಲ್ಲಿ ಸಾಗುತ್ತಿರುವುದು.ಎಲ್ಲಾ ವಸ್ತುಗಳ ಬೆಲೆಯೂ ಗಗನಕ್ಕೇರುವುದು.

ಹಿಂದಿನ ಕಾಲದಲ್ಲಿ ಶ್ರೀ ಮಂತರಲ್ಲಿ ಎಕರೆಗಟ್ಟಲೆ ಆಸ್ತಿ ಇರುತ್ತಿದ್ದು ಹಲವಾರು ಕೃಷಿಗಳನ್ನೂ ಮಾಡುತ್ತಿದ್ದರು.ಅದನ್ನು ನೋಡಿಕೊಳ್ಳಲೆಂದು ಒಂದು ಕುಟುಂಬವೂ ಅಲ್ಲೇ ಇರುತ್ತಿತ್ತು.ಅವರನ್ನು ಒಕ್ಕಲಿಗರೆಂದು ಕರೆಯುತ್ತಿದ್ದರು.ಅವರದೇ ಜವಾಬ್ದಾರಿಯಲ್ಲಿ ಕೃಷಿಯನ್ನು ಮಾಡಿ ಬಂದ ಫ‌ಸಲಿನ ಅರ್ಧ ಭಾಗವನ್ನು ಯಜಮಾನನಿಗೆ ಕೊಡಬೇಕು. ಉಳಿದರ್ಧ ತನ್ನ ಸಂಸಾರಕ್ಕೆ ಎಂಬುದು ನಿಯಮ. ಆ ಕಾಲದಲ್ಲಿ ಒಕ್ಕಲಿಗರು ವಿಷುವಿನ ದಿವಸ ತಾವು ಬೆಳೆದ ತರಕಾರಿಯೋ,ಹಣ್ಣುಗಳ್ಳೋ,ಗೇರುಬೀಜ ಹೀಗೆ ಏನೆಲ್ಲಾ ಇವೆಯೋ ಎಲ್ಲವನ್ನು ಒಂದಷ್ಟು ಧನಿಗಳ ಮನೆಗೆ ತಂದುಕೊಟ್ಟು ಅವರ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ನಂತರ ಯಜಮಾನನು ಬಂದವರಿಗೆ ತಿಂಡಿ ಸಿಹಿ ವಸ್ತು ಬಟ್ಟೆ ಇತ್ಯಾದಿಗಳನ್ನು ನೀಡಿ ಹರಸುತ್ತಿದ್ದನು. ಕೆಲಸಕ್ಕೆ ಬರುವವರೆಲ್ಲರೂ ಆ ದಿವಸ ಕಣಿ ತಂದಿಟ್ಟು ನಮಸ್ಕರಿಸಿ ತಿಂಡಿ ತಿಂದು ಮಾತಾಡಿ ಹೋಗುತ್ತಿದ್ದರು.

ಈಗ ಅಂತಹ ಒಕ್ಕಲಿಗರೆಂಬ ವ್ಯವಸ್ಥೆಯೇ ಇಲ್ಲ. ‘ಉಳುವವನೇ ಹೊಲದೊಡೆಯ’ ಎಂಬುದು ಈಗಿನ ನಿಯಮ.ಇದರಿಂದಲಾಗಿ ಸಮಯ ಸರಿದಂತೆ ಕಣಿ ತರುವ ಪದ್ಧತಿ ನಿಂತೇ ಹೋಯಿತೆನ್ನಬಹುದು. ಹುಡುಕಿದರೆ ಬೆರಳೆಣಿಕೆಯಲ್ಲಿ ಅಂತಹ ಕ್ರಮ ಈಗಲೂ ನಡೆಯುತ್ತಿರುವುದು ಕಾಣಸಿಗುವುದು. ಹಿಂದೆಲ್ಲಾ ಮಕ್ಕಳಿಗೆ ರಜೆಯ ಮಜಾದ ಜೊತೆಗೆ ಯಥೇಚ್ಛವಾಗಿ ಹಣ್ಣುಗಳೂ ದೊರೆಯುವ ಸಮಯ.ಮತ್ತೆ ಕೆಳಬೇಕೇ.ದೇವಸ್ಥಾನಕ್ಕೆ ಹೋಗಿ ಬಂದು ನೆರೆಹೊರೆಯ ಮಕ್ಕಳ ಜೊತೆ ತೋಟ ಗುಡ್ಡ ಅಂತ ಅಡ್ಡಾಡಿ  ಬಿಸಿಲಿನ ಝಳಕ್ಕೆ ತಂಪಾಗಿಸಲು ನೀರಲ್ಲಿ ಆಡುತ್ತಾ ಸಮಯ ಹೋದ ಅರಿವೇ ಇರುವುದಿಲ್ಲ.

ಅಮ್ಮ ಬಗೆ ಬಗೆ ತಿಂಡಿ ತಿನಸು ಮಾಡಿ ಮಕ್ಕಳನ್ನು ಕರೆದು ಕೊಟ್ಟ ಊಟ ಮಾಡಿ ಮತ್ತೆ ಸಂಜೆತನಕವೂ ಆಟ. ಈಗ ಇದೆಲ್ಲಾ ಬರಿಯ ನೆನಪಷ್ಟೇ ಆಗಿ ಉಳಿದಿದೆ. ಈಗಿನ ಬದುಕೇ ಧಾವಂತದ್ದು. ದಿನವೂ ಒಂದಿಲ್ಲೊಂದು ಜಂಜಾಟಗಳು. ಪ್ರಕೃತಿಯೂ ನಶಿಸಿ ಹೋಗುತ್ತಿರುವುದು ದುರಂತ. ಕೃಷಿಯ ಕಡೆಗೆ ಆಸಕ್ತಿಯೂ ಇರುವುದಿಲ್ಲ. ನಗರವಾಸಿಗಳಿಗಂತೂ ಕೇಳುದೇ ಬೇಡ.ಇಂತಹ ಸಂತೋಷಗಳು ಎಲ್ಲಿಂದ ಸಿಗಬೇಕು. ಮಕ್ಕಳು ದಿನಬೆಳಗಾದರೆ ನಾಲ್ಕು ಗೋಡೆಯ ಮಧ್ಯೆ ಕಂಪ್ಯೂಟರ್ ಮೊಬೈಲ್‌ ನಲ್ಲಿ ಆಡುತ್ತಾ ಸಿನೆಮ ನೋಡುತ್ತಾ ಕಾಲ ಕಳೆಯುದೇ ಜಾಸ್ತಿ. ನೆರೆಹೊರೆಯವರೊಂದಿಗೋ ನೆಂಟರಿಷ್ಟರೊಂದಿಗೋ ಕೂಡಿ ಆಡುವ ಮನವೇ ಇಲ್ಲ.ಮತ್ತೆಲ್ಲಿಯ ಬಾಂಧವ್ಯ ಎಲ್ಲದರಲ್ಲೂ ಯಾಂತ್ರಿಕತೆ. ಈ ವಿಷು ಹಬ್ಬದ ಸಂದರ್ಭದಲ್ಲಿ ಪೋಷಕರು ಈ ಬಗ್ಗೆ ಚಿಂತಿಸಿ ಮಕ್ಕಳೊಂದಿಗೆ ತಾವೂ ಪರಿಸರ ಬಂಧುಬಳಗದ ಜೊತೆ ಬೆರೆತು ಹೊಸ ಬಾಂಧವ್ಯವು ಬೆಳೆಯುವಂತಾಗಲಿ ಸಂಭ್ರಮವು ಮೇಳೈಸುತಿರಲಿ ಎಂದು ಆಶಿಸೋಣ.

Advertisement

ವಿಷು ಸದ್ಯ ಹೆಸರಿನ ವಿಶೇಷ ಊಟ
ಕೇರಳದಲ್ಲಿ ಈಗಲೂ ಹೆಚ್ಚಿನ ಜನರೂ ಈ ಒಂದು ದಿನವನ್ನು ಬಹಳ ಸಂಭ್ರಮದಿಂದ ಕಳೆಯುತ್ತಾರೆ.ವಿಷು ಸದ್ಯ ಎಂಬ ವಿಶೇಷ ಊಟದ ತಯಾರಿ ಮಾಡುತ್ತಾರೆ. ಪ್ರಮುಖವಾಗಿ ಮಧ್ಯಾಹ್ನ ಭೋಜನದಲ್ಲಿ ಅವಿಯಲಲ್, ಪುಳಿಶ್ಯೇರಿ, ಹಪ್ಪಳ, ಪಾಯಸ ಸೇರಿರುತ್ತದೆ. ಈಗೀಗ ಹೋಟೆಲ್‌ ಗಳಲ್ಲಿಯೂ ವಿಷು ಸದ್ಯ ದೊರಕುವುದರಿಂದ ಕೆಲವರು ಸುಮ್ಮಗೇ ಪ್ರಯಾಸ ಯಾಕೆ ಅಂತ ಗೆಳೆಯ ಗೆಳತಿಯರ ಜೊತೆ ಅಥವಾ ಕುಟುಂಬ ಸಮೇತರಾಗಿ ಹೋಟೆಲಿಗೆ ಹೋಗಿ ಸವಿದು ಬರುತ್ತಾರೆ.

— ಅನ್ನಪೂರ್ಣಾ ಬೆಜಪ್ಪೆ ಕಿದೂರು

Advertisement

Udayavani is now on Telegram. Click here to join our channel and stay updated with the latest news.

Next