ಅಭಿಮಾನಿಗಳ ಪಾಲಿನ ಪ್ರೀತಿಯ ಸಾಹಸ ಸಿಂಹ, ವಿಷ್ಣುದಾದ ಅಗಲಿ ಇಂದಿಗೆ (ಡಿ.30) ಬರೋಬ್ಬರಿ 12 ವರ್ಷ. ಈ ಹನ್ನೆರಡು ವರ್ಷಗಳಲ್ಲಿ ಅಭಿಮಾನಿಗಳು ಅವರನ್ನು ನೆನೆಯದ ದಿನವಿಲ್ಲ. ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಲೇ ಬಂದಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ವಿಷ್ಣು ಹೆಸರನ್ನು ಚಿರಸ್ಥಾಯಿಯನ್ನಾಗಿಸಿದ್ದಾರೆ.
ಆದರೆ, ಅಭಿಮಾನಿಗಳಿಗೆ ಒಂದು ಬೇಸರ ಮಾತ್ರ ಇದ್ದೇ ಇದೆ. ಅದು ಸಮಾಧಿ ಕುರಿತಾಗಿದ್ದು. ಅದರಾಚೆ ವಿಷ್ಣು ತೀರಿಕೊಂಡು 12 ವರ್ಷವಾದರೂ ಅಭಿಮಾನಿಗಳ ಅಭಿಮಾನ ಒಂಚೂರು ಕಮ್ಮಿಯಾಗಿಲ್ಲ.
ಪ್ರೀತಿ, ಒಂಚೂರು ಸಿಟ್ಟು, ಅಪಾರ ವಿನಯ, ಕಿಂಚಿತ್ ಸಂಕೋಚ, ಮುಚ್ಚುಮರೆಯಿಲ್ಲದ ಮಾತು, ಮನಗೆಲ್ಲುವ ಮಂದಹಾಸ- ಇವೆಲ್ಲದರ ಮೊತ್ತವಾಗಿದ್ದವರು ವಿಷ್ಣುವರ್ಧನ್.
ಸಂಪತ್ ಕುಮಾರ್ ಆಗಿ ಚಿತ್ರರಂಗಕ್ಕೆ ಬಂದು “ವಂಶವೃಕ್ಷ’ದಲ್ಲಿ ಪುಟ್ಟ ಪಾತ್ರ ಮಾಡಿ, ರಾಮಾಚಾರಿ ಯಾಗಿ ಎದ್ದು ನಿಂತ ವಿಷ್ಣುವರ್ಧನ್ ಮತ್ತೆ ತಿರುಗಿ ನೋಡಲಿಲ್ಲ. ಇನ್ನೂರು ಚಿತ್ರಗಳ ಗಡಿ ದಾಟಿದ ವಿಷ್ಣುವರ್ಧನ್ ಚಾರಿತ್ರಿಕ, ಪೌರಾಣಿಕ, ಸಾಮಾಜಿಕ ಪಾತ್ರಗಳಲ್ಲಿ ನಟಿಸಿ ಗೆದ್ದವರು.
ಅಭಿಮಾನಿಗಳ ಪಾಲಿಗೆ “ಸಾಹಸ ಸಿಂಹ’, ಹೆಣ್ಮಕ್ಕಳ ಪಾಲಿಗೆ “ಬಂಧನ’ದ ಭಗ್ನಪ್ರೇಮಿ, “ಬಿಳಿಗಿರಿಯ ಬನ’ದ ಬಂಡಾಯಗಾರ, “ಹೊಂಬಿ ಸಿಲು’ ಚಿತ್ರದ ನಿಷ್ಪಾಪಿ, “ಸಿಡಿದೆದ್ದ ಸಹೋದರ’, “ಬಂಗಾರದ ಜಿಂಕೆ’ಯ ಬೆನ್ನಟ್ಟಿದ ಪ್ರೇಮಿ, “ಇಂದಿನ ರಾಮಾ ಯಣ’ದ ನ್ಯಾಯವಂತ, ದೆವ್ವಕ್ಕೆ ಸಡ್ಡು ಹೊಡೆದ “ಆಪ್ತಮಿತ್ರ’- ಹೀಗೆ ವಿಷ್ಣು ಎಲ್ಲ ಪಾತ್ರಗಳಲ್ಲೂ ನಟಿಸಿ ಗೆದ್ದವರು. ಅಪಾರ ಹಾಸ್ಯಪ್ರಜ್ಞೆ, ತುಂಬು ಮಾನವೀಯತೆ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕ ನಟರಾಗಿ ಅಪಾರ ಅಭಿಮಾನಿ ವರ್ಗವನ್ನು ಸಂಪಾದಿಸಿದವರು ವಿಷ್ಣು.