Advertisement

ಊರೂರು ಸುತ್ತಿ ಸಿಸಿಬಿ ಎದುರು ಮಂಡಿಯೂರಿದ ವಿಷ್ಣು!

08:48 AM Oct 04, 2017 | |

ಬೆಂಗಳೂರು: ಮದ್ಯದ ಅಮಲಿನಲ್ಲಿ ವೇಗವಾಗಿ ಕಾರು ಚಾಲನೆ ಮಾಡಿ ಅಪಘಾತವೆಸಗಿದ್ದಕ್ಕೆ ಸಾರ್ವಜನಿಕರಿಂದ ಹಲ್ಲೆಗೊಳಗಾಗಿದ್ದ ಹಾಗೂ ನಂತರ ಚಿಕಿತ್ಸೆ ಪಡೆಯುತ್ತಿದ್ದ ಮಲ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದ ಟಿಟಿಡಿ ಮಾಜಿ ಅಧ್ಯಕ್ಷ ದಿ. ಆದಿಕೇಶವಲು ಅವರ ಮೊಮ್ಮಗ ವಿಷ್ಣು, ಮಂಗಳವಾರ ರಾತ್ರಿ ಸಿಸಿಬಿ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ.

Advertisement

ಸೆ.28ರಂದು ಅಪಘಾತವೆಸಗಿದ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿಷ್ಣು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಲ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಇಲ್ಲಿನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಸೆ.29ರಂದು ಬೆಳಗ್ಗೆ ಪೊಲೀಸರ ಕಣ್ಣು ತಪ್ಪಿಸಿ ಆಸ್ಪತ್ರೆ ಸಿಬ್ಬಂದಿ ಹಾಗೂ ತನ್ನ ಸಹೋದರಿಯ ಸಹಾಯದಿಂದ ನಾಪತ್ತೆಯಾಗಿದ್ದ. ಬಳಿಕ ಹೈದ್ರಾಬಾದ್‌ ಹಾಗೂ ತಿರುಪತಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ, ನಂತರ ಮಡಿಕೇರಿಗೆ ಹೋಗಲು ಯೋಚಿಸಿದ್ದ. ಸಿಸಿಬಿ ಪ್ರಕರಣದ ತನಿಖೆ ಚುರುಕುಗೊಳಿಸುತ್ತಿದ್ದಂತೆ ಬಂಧನ ಭೀತಿಯಿಂದ ವಿಷ್ಣು ಶರಣಾಗಿದ್ದಾನೆ. ಜತೆಗೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಯನ್ನು ಕೋರ್ಟ್‌ ಬುಧವಾರಕ್ಕೆ ಮುಂದೂಡಿತ್ತು. ಈ ಎಲ್ಲ ಪ್ರಕ್ರಿಯೆಗಳಿಂದ ಆತಂಕಗೊಂಡು ಶರಣಾಗಿರುವ ಸಾಧ್ಯತೆಯಿದೆ ಎಂದು ಸಿಸಿಬಿ ಅಧಿಕಾರಿ ಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಎಸಿಪಿ ವೆಂಕಟೇಶ್‌ ಪ್ರಸನ್ನ ಅವರಿಗೆ ಸ್ಥಳೀಯ ಕಾಯಿನ್‌ ಬಾಕ್ಸ್‌ ನಂಬರ್‌ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ವಿಷ್ಣು ಇರುವ ಸ್ಥಳದ ಲೊಕೇಶನ್‌ ತಿಳಿಸಿದ್ದ. ಆದರೆ, ಕರೆ ಮಾಡಿದ ವ್ಯಕ್ತಿ ಯಾರೆಂದು ಗೊತ್ತಿಲ್ಲ. ಕರೆ ಮಾಡಿದಾತ ವಿಷ್ಣುನೇ ಇರಬಹುದು. ಅನುಮಾನ ಗೊಂಡ ಸಿಬ್ಬಂದಿ ಕೂಡಲೇ ಆ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ವಿಷ್ಣು ಏಕಾಏಕಿ ತನ್ನ ಮಾವನ ಜತೆ ರಾತ್ರಿ 8.30ರ ಸುಮಾರಿಗೆ ಚಾಮರಾಜ ಪೇಟೆ ಯಲ್ಲಿರುವ ಸಿಸಿಬಿ ಕಚೇರಿಗೆ ಬಂದು ಶರಣಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಹೈದರಾಬಾದ್‌, ಗೋವಾ ಸುತ್ತಿದ 

ಸೆ.29ರ ಬೆಳಗ್ಗೆ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಷ್ಣು, ಪೊಲೀಸರ ಕಣ್ಣು ತಪ್ಪಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಅಲ್ಲಿಂದ ನೇರವಾಗಿ ಹೈದರಾಬಾದ್‌ನ ತನ್ನ ಮನೆಗೆ ಹೋದ ವಿಷ್ಣು, ಅಲ್ಲಿ ಕುಟುಂಬದವರ ಸಲಹೆ ಪಡೆದು ಗೋವಾಗೆ ಹೋಗಿದ್ದ. ಇತ್ತ ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ತೀವ್ರ ಶೋಧ ಆರಂಭಿಸಿದ ವೆಂಕಟೇಶ್‌ ಪ್ರಸನ್ನ ಮತ್ತು ತಂಡ, ಆರೋಪಿಗಾಗಿ ಹೊರ ರಾಜ್ಯಗಳಲ್ಲಿ ಶೋಧ ನಡೆಸಿತ್ತು.

Advertisement

ತನ್ನ ಮಾವನ ಜತೆ ಬಂದು ತನಿಖಾಧಿಕಾರಿ ಮುಂದೆ ಶರಣಾದ ವಿಷ್ಣು, ಸಂಪೂರ್ಣ ಗಲಿಬಿಲಿಗೊಂಡಿದ್ದಾನೆ. ಹೀಗಾಗಿ ಆತನನ್ನು ವಶಕ್ಕೆ ಪಡೆದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗುವುದು. ಹಾಗೇ ಆತನ ಮೂತ್ರ ಮತ್ತು ರಕ್ತ ಪರೀಕ್ಷೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಆತಂಕಗೊಂಡು ಶರಣಾದ: ಮಂಗಳವಾರ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್‌ ಬುಧವಾರಕ್ಕೆ ಮುಂದೂಡಿತ್ತು. ಬುಧವಾರವೂ ವಿಚಾರಣೆ ಮುಂದೂಡಿದರೆ, ಗುರುವಾರ ಸರ್ಕಾರಿ ರಜೆ. ಹೀಗಾಗಿ ಮತ್ತೂಂದಿಷ್ಟು ದಿನ ವಿಸ್ತರಣೆಯಾಗಬಹುದು ಎಂಬ ಕುರಿತು ಸಂಬಂಧಿಗಳಿಂದ ವಿಷ್ಣು ಮಾಹಿತಿ ಪಡೆದಿದ್ದಾನೆ. ಬಂಧನದಿಂದ ಏನೆಲ್ಲ ಆಗಬ ಹುದು. ಜಾಮೀನು ಪಡೆದರೆ ಮುಂದಿನ ವಿಚಾರಣೆ ಹೇಗಿರುತ್ತದೆ ಎಂಬ ಮಾಹಿತಿ ಪಡೆದು ಆತಂಕಗೊಂಡ ಆರೋಪಿ, ಕೂಡಲೇ ಶರಣಾಗಿದ್ದಾನೆ.

ಪೋಷಕರು, ಸಂಬಂಧಿಕರಿಗೆ ಖಡಕ್‌ ವಾರ್ನಿಂಗ್‌!
ಇತ್ತ ಪ್ರಕರಣದ ತನಿಖಾಧಿಕಾರಿ ವೆಂಕಟೇಶ್‌ ಪ್ರಸನ,° ತಿರುಪತಿ, ಚಿತ್ತೂರು ಮತ್ತು ಬೆಂಗಳೂರಿನಲ್ಲಿನ
ಸಂಬಂಧಿಕರ ಮನೆಗಳಳಿಗೆ ತಮ್ಮ ತಂಡಗಳನ್ನು ಕಳಿಸಿ ಹುಡುಕಾಡಿದ್ದರು. ಈ ವೇಳೆ ತಿರುಪತಿಯ ಪದ್ಮಾವತಿ ರೆಸಾರ್ಟ್‌ನಲ್ಲಿ ತಂಗಿದ್ದ ವಿಷ್ಣು ತಂದೆ ಮತ್ತು ತಾಯಿಯನ್ನು ವಿಚಾರಣೆಗೊಳಪಡಿಸಿದ ತಂಡ, “ನಿಮ್ಮ ಮಗ ಪರಾರಿಯಾಗಿ ತಪ್ಪು ಮಾಡಿದ್ದಾನೆ. ಶರಣಾಗುವಂತೆ ಆತನಿಗೆ ತಿಳಿ ಹೇಳಿ,’ ಎಂದು ಸೂಚಿಸಿತ್ತು. ಜತೆಗೆ ಹೆಚ್ಚಿನ ವಿಚಾರಣೆಗಾಗಿ ನಿಮ್ನನ್ನು ವಶಕ್ಕೆ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಮತ್ತೂಂದೆಡೆ ಸಂಬಂಧಿಗಳಿಗೂ ಪೊಲೀಸರು ಖಡಕ್‌ ವಾರ್ನಿಂಗ್‌ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next