Advertisement

ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ಆ.10ರಂದು ವಿಷ್ಣು ಸಹಸ್ರನಾಮ ಯಾಗ, ಲಕ್ಷ್ಮೀನಾರಾಯಣ ಹೃದಯ ಹೋಮ

01:13 PM Aug 08, 2023 | Team Udayavani |

ಉಡುಪಿ: ಉಡುಪಿ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಶ್ರೀ ವಿಷ್ಣು ಸಹಸ್ರನಾಮ ಯಾಗ ಮತ್ತು ಲಕ್ಷ್ಮೀನಾರಾಯಣ ಹೃದಯ ಹೋಮವು ಆಗಸ್ಟ್ 10ರಂದು ನಡೆಯಲಿದೆ.

Advertisement

ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಗುರುವಾರದಂದು ಯಾಗ ಸಂಪನ್ನಗೊಳ್ಳಲಿದೆ.

ಅಧಿಕಮಾಸದಲ್ಲಿ ಸಂಪನ್ನಗೊಳ್ಳಲಿರುವ ಈ ಯಾಗವು ಬೆಳಿಗ್ಗೆ 8 ಗಂಟೆಗೆ ಆರಂಭಗೊಳ್ಳಲಿದ್ದು, ವಿಶೇಷ ದಾನಾದಿಗಳು ಆಚರಣೆಗಳು ನಡೆದು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆಯೂ ಸಂಪನ್ನಗೊಳ್ಳಲಿದೆ.

ಈ ಮಹಾನ್ ಯಾಗವು ಸಾಮೂಹಿಕವಾಗಿ ನೆರವೇರಲಿರುವುದರಿಂದ ಆಸಕ್ತ ಭಕ್ತರು ಕ್ಷೇತ್ರವನ್ನು ಸಂಪರ್ಕಿಸಿ ಯಾಗದಲ್ಲಿ ಪಾಲ್ಗೊಳ್ಳಬಹುದು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.

ಅಧಿಕ ಮಾಸ ಎಂದರೇನು? ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವರನ್ನು ವಿಶಿಷ್ಟ ರೀತಿಯಲ್ಲಿ ಪೂಜಿಸಲಾಗುತ್ತದೆ ಮತ್ತು ಪ್ರತಿಯೊಂದು ಹಬ್ಬದಲ್ಲಿ ದೇವರನ್ನು ಕಾಣುವ ಪದ್ಧತಿಯಿದೆ. ಸೂರ್ಯ ಸಂಕ್ರಾಂತಿ ಇಲ್ಲದ ಚಂದ್ರನ ಮಾಸವನ್ನು ಅಧಿಕಮಾಸ ಎಂದು ಕರೆಯಲಾಗುತ್ತದೆ. ಇದನ್ನು ಮಲ ಮಾಸ ಅಥವಾ ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ.

Advertisement

ಈ ಮಾಸದಲ್ಲಿ ಯಾವುದೇ ಹಬ್ಬಗಳಿಲ್ಲ ಆದರೆ ಈ ಮಾಸದಲ್ಲಿ ಮಾಡುವ ದಾನ ಮತ್ತು ಆಚರಣೆಗಳು ಅತ್ಯಂತ ಪವಿತ್ರ ಹಾಗೂ ಫಲಪ್ರದವಾಗಿದೆ. ಅಧಿಕಸ್ಯ ಅಧಿಕ ಫಲಂ ಎಂಬಂತೆ ಈ ಅಧಿಕ ಶ್ರಾವಣ ಮಾಸದಲ್ಲಿ ಮಾಡಿದಂತಹ ಯಜ್ಞ ಯಾಗಾದಿಗಳು ದಾನ ಧರ್ಮಗಳು ಉಳಿದ ಸಮಯದಲ್ಲಿ ಮಾಡಿದವುಗಳಿಗಿಂತ 10 ಪಟ್ಟು ಹೆಚ್ಚಿನ ಫಲವನ್ನು ನೀಡುವಂತಹುದಾಗಿದೆ.

ಮೂವತ್ತು ಮೂರು ಸಂಖ್ಯೆಗೆ ಅಧಿಕಮಾಸದಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ. ನಾವು ಮಾಡುವ ಧಾರ್ಮಿಕ ಕಾರ್ಯ ಹಾಗೂ ದಾನ ಧರ್ಮಗಳು 33 ಕೋಟಿ ದೇವರುಗಳಿಗೆ ಸಲ್ಲುತ್ತದೆ. ಕೋಟಿ ಎಂದರೆ ಸಂಸ್ಕೃತದಲ್ಲಿ ವರ್ಗ ಎಂದರ್ಥ. 33 ಕೋಟಿ ದೇವತೆಗಳ ವರ್ಗವೆಂದರೆ ಅವುಗಳಲ್ಲಿ 8 ವಸುಗಳು 11 ರುದ್ರರು 12 ಆದಿತ್ಯರು ಒಂದು ಪ್ರಜಾಪತಿ ಹಾಗೂ ಒಂದು ವಶಟ್ಕಾರ. ಹೀಗೆ 33 ದೇವ ಕುಟುಂಬಗಳು ನಮ್ಮನ್ನು ಆಶೀರ್ವದಿಸುತ್ತಾರೆ ಎನ್ನುವುದು ಶಾಸ್ತ್ರದ ಉಲ್ಲೇಖ. ಈ 33 ದೇವರುಗಳಲ್ಲಿ ಅಂತರ್ಗತವಾಗಿ ಪುರುಷೋತ್ತಮರು ನೆಲೆಸಿರುತ್ತಾರೆ.

ಪುರುಷೋತ್ತಮರೆಂದರೆ ಮಹಾವಿಷ್ಣು ಹಾಗಾಗಿ ಅಧಿಕಮಾಸದಲ್ಲಿ ನಡೆಸಲ್ಪಡುವ ಯಜ್ಞ ಯಾಗಾದಿಗಳು ಮುಕ್ಕೋಟಿ ದೇವರುಗಳಲ್ಲಿ ಅಂತರ್ಗತರಾಗಿರುವ ವಿಷ್ಣುವಿಗೆ ಸಲ್ಲುತ್ತದೆ. ಅಧಿಕಮಾಸದಲ್ಲಿ ಯಾವುದೇ ಪದಾರ್ಥವನ್ನು 33 ಸಂಖ್ಯೆಯಲ್ಲಿ ದಾನ ಮಾಡುವ ಸಂಪ್ರದಾಯ ಪ್ರಾಚೀನದಿಂದಲೂ ನಡೆದು ಬಂದಿರುವ ಪದ್ಧತಿ.

 ಯಾವ ದಾನ ಶ್ರೇಷ್ಠ?: ಅಧಿಕಮಾಸದಲ್ಲಿ ಅತ್ತಿರಸ ದಾನಕ್ಕೆ ಬಹಳ ಮಹತ್ವವಿದೆ. ಬೆಲ್ಲ ಮತ್ತು ಅಕ್ಕಿ ಮತ್ತು ತುಪ್ಪ ದಿಂದ ತಯಾರಿಸಿದ ಆತ್ತಿ ರಸವನ್ನು 33 ಸಂಖ್ಯೆಯಲ್ಲಿ ಒಂದು ಕಂಚಿನ ಪಾತ್ರೆಯಲ್ಲಿಟ್ಟು ತಾಂಬೂಲಾದಿ ದಕ್ಷಣೆ ಯೊಂದಿಗೆ ವಸ್ರ ಸಹಿತವಾಗಿ 33 ಶ್ರೇಷ್ಠ ವಿಪ್ರರಿಗೆ ದಾನ ಮಾಡಬೇಕು. ಕಂಚಿನ ಪತ್ರೆಯಲ್ಲಿ ಅತ್ತಿರಸವನ್ನು ಇಟ್ಟು ದಾನ ಮಾಡಿದರೆ ಆ ಅತ್ತಿರಸದಲ್ಲಿ ಎಷ್ಟು ರಂದ್ರಗಳಿವೆಯೋ ಅಷ್ಟು ವರ್ಷಗಳ ಕಾಲ ದಾನ ಮಾಡಿದವರು ಸ್ವರ್ಗ ಸುಖವನ್ನು ಅನುಭವಿಸುವುದರ ಜೊತೆಗೆ ವಂಶವೂ ಕೂಡ ಉದ್ದಾರವಾಗುವುದು ಎಂಬ ಉಲ್ಲೇಖವಿದೆ.

ಮಾಸನಿಯಾಮಕನಾದ ಪುರುಷೋತ್ತಮನ ಪ್ರೀತ್ಯರ್ಥ ಒಂದು ತಿಂಗಳ ಕಾಲ 33 ಸಂಖ್ಯೆಯಲ್ಲಿ ದಾನವನ್ನು ಮಾಡಿದರೆ ಅನಂತ ಫಲವನ್ನು ಪಡೆಯಬಹುದು ಅದು ಸಾಧ್ಯವಾಗದಿದ್ದಲ್ಲಿ ಒಂದು ದಿನವಾದರೂ ಯಜ್ಞ ಸಂಪನ್ನಗೊಳಿಸಿ ದಾನ ಧರ್ಮ ಮಾಡಿದಲ್ಲಿ ಭಗವಂತನ ಕೃಪೆಗೆ ಪಾತ್ರರಾಗಬಹುದು.

ಮಾಹಿತಿ: ಶ್ರೀ ರಮಾನಂದ ಗುರೂಜಿ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next