ಶಿರಸಿ: ಜಿಲ್ಲೆಯ ಅತ್ಯಂತ ದೊಡ್ಡ ಹಾಗೂ ಮಹತ್ವದ ಮಾರಿಕಾಂಬಾ ಜಿಲ್ಲಾ ಮೈದಾನದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಸರಕಾರದಿಂದ 10 ಕೋಟಿ ರೂ ಮಂಜೂರಾತಿ ಆಗಿದ್ದು, 2 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ವಾರದಲ್ಲಿ ಸಾರ್ವಜನಿಕರ ಅಭಿಪ್ರಾಯ ಕೂಡ ಪಡೆದು ಅಂತಿಮ ನೀಲನಕ್ಷೆ ಸಿದ್ಧಗೊಳಿಸುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್ ಜೊತೆ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಭೆ ನಡೆಸಿ, ಮೂರು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಒಂದು ವರ್ಷದೊಳಗೆ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಳಿಸಬೇಕು. ನೆಲ ಹಾಗೂ ಮೊದಲ ಮಹಡಿಯಲ್ಲಿ 6 ಬ್ಯಾಡ್ಮಿಂಟನ್ ಕೋರ್ಟ್, ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್, ಮಲ್ಟಿ ಜಿಮ್, ಇಂಡೋರ್ ವಾಲಿಬಾಲ್ ಕೋರ್ಟ್, ಇಂಡೋರ್ ಟೆನಿಸ್ ಕೋರ್ಟ್, ಇಂಡೋರ್ ಕಬಡ್ಡಿ, ಸ್ನೂಕರ್ ಗೇಮ್, ಕೇರಮ್ ಮತ್ತು ಚೆಸ್ ಆಡಲು ಪೂರಕ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಇಸ್ವತ್ತು ಹಾಗೂ ಫಾರ್ಮ್ ನಂಬರ್ 3 ಸಂಬಂಧಿಸಿ ತ್ವರಿತಗತಿಯಲ್ಲಿ ಇತ್ಯರ್ಥವಾಗುವಂತೆ ಈಗಾಗಲೇ ಸಭೆ ನಡೆಸಲಾಗಿದೆ. ಪಂಚಾಯತದಿಂದ ಮನೆ ನಂಬರ್ ಇರುವ ಅರಣ್ಯ ಅತಿಕ್ರಮಣದಾರರಿಗೆ ಬಸವ ವಸತಿ ಮನೆಗಳನ್ನು ಕೊಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ ಎಂದ ಕಾಗೇರಿ, ಸಹಕಾರಿ ಕ್ಷೇತ್ರದಲ್ಲಿ ಸಾಲಮನ್ನಾ ವಿಷಯದಲ್ಲಿ ತಾಂತ್ರಿಕ ಕಾರಣದಿಂದ ಸಾಲಮನ್ನಾ ಕೆಲವರಿಗೆ ಬಾಕಿಯಿದೆ. ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆದಿದೆ.
1978ರ ಪೂರ್ವದಲ್ಲಿನ ಅರಣ್ಯ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಲು ಈಗಾಗಲೇ ಪ್ರಯತ್ನ ಜಾರಿಯಲ್ಲಿದೆ ಎಂದರು. ಹೆಬ್ಟಾರ್ ಮಾತನಾಡಿ, ಒಳಾಂಗಣ ಕ್ರೀಡಾಂಗಣದ ಮೂಲಭೂತ ಅವಶ್ಯಕತೆಗೆ ಸಂಬಂಧಿಸಿ ಖೇಲೋ ಇಂಡಿಯಾ ಯೋಜನೆಯಲ್ಲಿ ಕೇಂದ್ರದಿಂದ ಅನುದಾನ ತರಲು ಸಾಧ್ಯವಿದೆ. ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿನ ಗ್ರಾಮಗಳಿಗೊಂದು ಸಮುದಾಯ ಭವನ ಕೂಡ ಮಾಡಲಾಗುತ್ತದೆ ಎಂದರು. ಡಾ| ದಿನೇಶ ಹೆಗಡೆ ಮಾತನಾಡಿ, ಒಳಾಂಗಣ ಕ್ರೀಡಾಂಗಣದಲ್ಲಿ ಸೋಲಾರ್ ರೂಪ್ ಟಾಪ್ ಮಾಡುವುದರಿಂದ ವಿದ್ಯುತ ಬಳಕೆಯಲ್ಲಿ ಸ್ವಾವಲಂಬಿಯಾಗಬಹುದು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಜಿಪಂ ಸದಸ್ಯ ಬಸವರಾಜ್ ದೊಡ್ಮನಿ, ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ರವಿ ಹಳದೋಟ, ಅಧಿಕಾರಿಗಳಾದ ಕೃಷ್ಣರೆಡ್ಡಿ, ಉಮೇಶ ಎಸ್ ಸೇರಿದಂತೆ ಹಲವರು ಇದ್ದರು.