Advertisement
ವಿಶಾಲಾ ಗಾಣಿಗ ಕೊಲೆ ಪ್ರಕರಣದಲ್ಲಿ ಕೃತ್ಯ ನಡೆದಿರುವ ಸ್ಥಳದಲ್ಲಿ ಯಾವುದೇ ಕುರುಹುಗಳು ಇರಲಿಲ್ಲ. ಸಿಸಿಟಿವಿ ದೃಶ್ಯಾವಳಿ, ವಾಚ್‌ಮ್ಯಾನ್ ಇಲ್ಲದೆ ಇರುವುದು ಪೊಲೀಸರ ಪಾಲಿಗೆ ಪ್ರಕರಣ ಬೇಧಿಸುವುದು ದೊಡ್ಡ ಚಾಲೆಂಜ್ ಆಗಿತ್ತು.
Related Articles
Advertisement
ತಾಂತ್ರಿಕ ಪುರಾವೆ-ತನಿಖೆಗೆ ತಿರುವು
ತನಿಖೆ ಹಂತದಲ್ಲಿ ಇರುವಾಗ ತಾಂತ್ರಿಕ ಪುರಾವೆ ಲಭ್ಯವಾಗುತ್ತದೆ. ಅದನ್ನು ಫೀಲ್ಡ್ ಮಟ್ಟದಲ್ಲಿ ಇದ್ದುಕೊಂಡು ಪರಿಶೀಲನೆ ನಡೆಸಿದಾಗ ಪ್ರಕರಣದ ಶಂಕಿತ ವ್ಯಕ್ತಿಯೋರ್ವ ಉತ್ತರ ಪ್ರದೇಶದಲ್ಲಿ ಇರುವುದು ಪತ್ತೆಯಾಗಿತ್ತು. ಮಣಿಪಾಲ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಮಹಾರಾಷ್ಟ್ರದಿಂದ ಯುಪಿಗೆ ತೆರಳಿ ಅಲ್ಲಿನ ಎಸ್ಪಿ ದಿನೇಶ್ ಕುಮಾರ್ ಹಾಗೂ ಅವರ “SWAT’ ತಂಡದ ಸಹಭಾಗಿತ್ವದಲ್ಲಿ ಸಂಶಯಿತ ಆರೋಪಿ ಸ್ವಾಮಿನಾಥ ನಿಶಾದನನ್ನು ನೇಪಾಲದ ಗಡಿಯಲ್ಲಿ ಬಂಧಿಸಿ ತನಿಖೆ ಮಾಡಿದಾಗ ಕೃತ್ಯವನ್ನು ವಿಶಾಲಾ ಪತಿ ಸುಪಾರಿ ಮೇರೆಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ವೇಳೆ ಉಡುಪಿ ತಂಡ ಆರೋಪಿ ಪತಿ ರಾಮಕೃಷ್ಣ ಗಾಣಿಗ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ ಎಂದು ಘಟನೆಯ ವಿವರವನ್ನು ಬುಧವಾರ ಎಸ್ಪಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ತಿಳಿಸಿದರು.
6 ತಿಂಗಳ ಸಂಚು
ಪತಿ ರಾಮಕೃಷ್ಣ ಗಾಣಿಗ ಪತ್ನಿ ವಿಶಾಲಾ ಅವರನ್ನು ಕೊಲೆ ಮಾಡಲು ಆರು ತಿಂಗಳ ಹಿಂದಿನಿಂದ ಸಂಚು ರೂಪಿಸಿದ್ದ. ತನ್ನ ಗೆಳೆಯನೊಬ್ಬನ ಮೂಲಕ ಉತ್ತರ ಪ್ರದೇಶದ ಇಬ್ಬರು ಸುಪಾರಿ ಕಿಲ್ಲರ್‌ಗಳನ್ನು ಪರಿಚಯ ಮಾಡಿಸಿಕೊಂಡ. 2021ರ ಮಾರ್ಚ್‌ನಲ್ಲಿ ದುಬಾಯಿಯಿಂದ ದಂಪತಿ ರಾಮಕೃಷ್ಣ – ವಿಶಾಲಾ ಸಂಸಾರ ಸಮೇತವಾಗಿ ಉಡುಪಿಗೆ ಬಂದರು. ಈ ವೇಳೆ ಇಬ್ಬರು ಸುಪಾರಿ ಕಿಲ್ಲರ್‌ಗಳನ್ನು ತನ್ನ ಗೆಳೆಯರು ಹಾಗೂ ಪೈಯಿಂಟಿಂಗ್ ಕೆಲಸ ಮಾಡುತ್ತಾರೆ ಎಂದು ಪತ್ನಿ ವಿಶಾಲಾ ಗಾಣಿಗ ಅವರಿಗೆ ಪರಿಚಯಿಸಿಕೊಂಡು ಮನೆಯ ಜಾಗವನ್ನು ತೋರಿಸಿದ್ದ. ದಂಪತಿ, ಮಗು ವಾಪಸು ದುಬಾಯಿಗೆ ಹೋದರು. ಬಳಿಕ ಜು. 2ರಂದು ವಿಶಾಲಾ ಮತ್ತು ಮಗು ಊರಿಗೆ ಬಂದರು.
ಅಣುಕು ಪ್ರದರ್ಶನ
ರಾಮಕೃಷ್ಣ ಗಾಣಿಗ ಅವರು ಪತ್ನಿ ಕೊಲೆ ಮಾಡುವ ಒಂದು ವಾರದ ಹಿಂದೆ ಕೊಲೆ ಮಾಡುವ ಉದ್ದೇಶದಿಂದ ಅಣುಕು ಪ್ರದರ್ಶನ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ನಡೆಯುವ ಆರು ದಿನಗಳ ಹಿಂದೆ ದುಬಾಯಿಯಿಂದ ರಾಮಕೃಷ್ಣರ ಗೆಳೆಯರು ಬಂದಿದ್ದರು. ಇವರೊಂದಿಗೆ ದುಬಾಯಿಯವರೊಬ್ಬರು ವಿಶಾಲಾ ಅವರಿಗೆ ತಲುಪಿಸಲು ಮೇಕಪ್ ಸಾಮಗ್ರಿಗಳನ್ನು ಕಳುಹಿಸಿದ್ದರು. ಇದನ್ನುಫ್ಲ್ಯಾಟ್ ನಲ್ಲಿ ಒಬ್ಬಳೇ ಸ್ವೀಕರಿಸು ಎಂದು ಪತ್ನಿಗೆ ರಾಮಕೃಷ್ಣ ಜುಲೈ ಮೊದಲ ವಾರದಲ್ಲಿ ಹೇಳಿದ್ದ. ಅದರಂತೆ ಪತ್ನಿ ಏಕಾಂಗಿಯಾಗಿ ಫ್ಲ್ಯಾಟ್ ನಲ್ಲಿ ಪಾರ್ಸೆಲ್ ಸ್ವೀಕರಿಸಿದ್ದರು. ಇದನ್ನು ಖಚಿತ ಪಡಿಸಿಕೊಂಡ ಆರೋಪಿ ಪತಿ ಉತ್ತರ ಪ್ರದೇಶದ ಆರೋಪಿಗಳನ್ನು ಕೊಲೆ ಮಾಡಲು ಕಳುಹಿಸಿದ.
ತುರ್ತು ಕರೆ
ವಿಶಾಲಾ ಗಾಣಿಗ ಅವರು ಮಗುವಿನೊಂದಿಗೆ ಆಗಮಿಸಿ ಉಪ್ಪಿನಕೋಟೆಯ ಕುಮ್ರಗೋಡು ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ಜು.7ರಂದು ರಾಮಕೃಷ್ಣರ ಆಸ್ತಿಗೆ ಸಂಬಂಧಿಸಿದ ಪಾಲುಪಟ್ಟಿ ಮಾಡಲಾಗಿತ್ತು. ಜು. 12ರಂದು ವಿಶಾಲಾ ಗಾಣಿಗ ತನ್ನ ತಂದೆ, ತಾಯಿ ಹಾಗೂ ಪುತ್ರನೊಂದಿಗೆ ಆಟೋ ರಿಕ್ಷಾದಲ್ಲಿ ತಾಯಿ ಮನೆ ಗುಜ್ಜಾಡಿಗೆ ಹೋಗಿದ್ದರು. ಈ ನಡುವೆ ಪತಿ ಕರೆ ಮಾಡಿ, ನನ್ನ ಇಬ್ಬರು ಸ್ನೇಹಿತರು ಬರುತ್ತಾರೆ. ಪಾರ್ಸೆಲ್ ನೀಡುವಾಗ ಒಂಟಿಯಾಗಿರು ಎನ್ನುವುದಾಗಿ ಕರೆ ಮಾಡಿ ತಿಳಿಸಿದ.
ಪರಿಚಯ-ಜೀವಕ್ಕೆ ಕುತ್ತು
ವಿಶಾಲಾ ಗಾಣಿಗ ಫ್ಲ್ಯಾಟ್ ಗೆ ಜು.12ರಂದು ಮರಳಿದರು. ಪತ್ನಿ ಫ್ಲ್ಯಾಟ್ ಗೆ ಆಗಮಿಸಿದ 10-15 ನಿಮಿಷದ ಅಂತರದಲ್ಲಿ ಸುಪಾರಿ ಕಿಲ್ಲರ್ ಫ್ಲ್ಯಾಟ್‌ಗೆ ಬಂದರು. ಹಿಂದಿನ ಪರಿಚಯದ ಹಿನ್ನೆಲೆಯಲ್ಲಿ ಆಕೆ ಬಾಗಿಲು ತೆಗೆದು ಆರೋಪಿಗಳನ್ನು ಒಳಗೆ ಕರೆದರು. ಈ ವೇಳೆ ಹಂತಕರು ಆಕೆಯ ಕುತ್ತಿಗೆ ಬಿಗಿದು ಕೊಲೆ ನಡೆಸಿ ಬಾಗಿಲು ಹಾಕಿಕೊಂಡು ಹೋದರು. ಈ ವೇಳೆ ಪತ್ತೆಯಾದ ಪುರಾವೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಹಣದ ವರ್ಗಾವಣೆ
ಕೊಲೆ ನಡೆಸಲು ಆರೋಪಿಗಳಿಗೆ 2 ಲ.ರೂ.ಗಿಂತ ಹೆಚ್ಚಿನ ಹಣವನ್ನು ಪತಿ ರಾಮಕೃಷ್ಣ ಗಾಣಿಗ ನೀಡಿದ್ದ. ಆರು ತಿಂಗಳಲ್ಲಿ ಹಂತ ಹಂತವಾಗಿ ಬ್ಯಾಂಕ್ ಮೂಲಕ ಖಾತೆಗೆ ವರ್ಗಾಯಿಸಲಾಗಿದೆ. ರಾಮಕೃಷ್ಣ ಸುಪಾರಿ ಕಿಲ್ಲರ್‌ಗೆ ನಿರ್ದಿಷ್ಟವಾಗಿ ಎಷ್ಟು ಹಣ ನೀಡಿದ್ದಾನೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಈ ಬಗ್ಗೆ ವಿಚಾರಣೆ ಪ್ರಗತಿಯಲ್ಲಿ ಇದೆ.
ಪ್ರಕರಣ ದಾರಿ ತಪ್ಪಿಸಲು ಪ್ರಯತ್ನ
ಸುಪಾರಿ ಕಿಲ್ಲರ್‌ಗಳು ಪ್ರಕರಣದಲ್ಲಿ ಪೊಲೀಸರ ಹಾದಿ ತಪ್ಪಿಸಲು ವಿಶಾಲಾ ಗಾಣಿಗ ಅವರ ಮೈಮೇಲಿನ ಚಿನ್ನಾಭರಣವನ್ನು ದೋಚಿ ಪರಾರಿಯಾದರು. ಪ್ರಾರಂಭಿಕ ಹಂತದಲ್ಲಿ ಯಾವುದೇ ಸುಳಿವು ಸಿಗದ ಸಮಯ ಮೇಲ್ನೋಟಕ್ಕೆ ಇದು ಚಿನ್ನಾಭರಣಕ್ಕಾಗಿ ಕೊಲೆ ನಡೆಸಲಾಗಿದೆ ಎಂದು ಬಿಂಬಿಸಲಾಗಿತ್ತು.
ನೇಪಾಳದ ಗಡಿ-ಬಂಧನ
ಪೊಲೀಸರಿಗೆ ದೊರಕಿದ ಸುಳಿವಿನ ಆಧಾರದ ಮೇಲೆ ಉತ್ತರ ಪ್ರದೇಶದ ಗೋರಖ್ ಪುರ ಪೊಲೀಸರ ಸಹಕಾರದೊಂದಿಗೆ, ಗೋರಖ ಪುರ ಜಿಲ್ಲೆಯ ಚಾರ್ಪನ್ ಬುಹುರಾಗ್ ಗ್ರಾಮದ ಸ್ವಾಮಿನಾಥ ನಿಶಾದ (38) ಜು.19 ರಂದು ನೇಪಾಳದ ಗಡಿಯಲ್ಲಿ ಬಂಧಿಸಿ, ಉಡುಪಿಗೆ ಕರೆ ತರಲಾಗಿದೆ.
ತಲೆಮರೆಸಿಕೊಂಡ ಆರೋಪಿಗಳು
ಸುಪಾರಿ ಕಿಲ್ಲರ್ ಇಬ್ಬರಲ್ಲಿ ಓರ್ವ ತಲೆ ಮರೆಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ವಿವಿಧ ಕಡೆಗಳಿಗೆ ತೆರಳಿ ಪತ್ತೆ ಹಚ್ಚುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಇಬ್ಬರು ಸುಪಾರಿ ಕಿಲ್ಲರ್ ಪರಿಚಯಿಸಿದ ವ್ಯಕ್ತಿಯ ಪತ್ತೆ ಮಾಡಲಾಗುತ್ತಿದೆ.
ನಾನವನಲ್ಲ ಎಂದವನಿಂದ ಕೊಲೆ
ವಿಶಾಲಾ ಗಾಣಿಗ ಸಾಯುವ ಮುನ್ನ ವಿದೇಶದಲ್ಲಿದ್ದ ರಾಮಕೃಷ್ಣ ಗಾಣಿಗ ಅವರು ಪತ್ನಿ ಸತ್ತ ಬಳಿಕ ಊರಿಗೆ ಬಂದ. ಆತನ ಮನೆಯಲ್ಲಿ ಪತ್ನಿಯ ಅಂತ್ಯಸಂಸ್ಕಾರ, ಬಳಿಕ ನಡೆಯುವ ಕ್ರಿಯೆಯಲ್ಲಿಯೂ ಪತಿ ಪಾಲ್ಗೊಂಡಿದ್ದ. ಈ ವೇಳೆ ಪೊಲೀಸರು ಎರಡು ಮೂರು ಬಾರಿ ಕೊಲೆ ಬಗ್ಗೆ ವಿಚಾರಣೆ ಮಾಡಿದಾಗ ಬೇರೆಯವರ ಮೇಲೆ ಅನುಮಾನಗಳನ್ನು ವ್ಯಕ್ತಪಡಿಸಿ, ತನಿಖೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾನೆ.
ಅತಿಯಾದ ಆತ್ಮವಿಶ್ವಾಸ
ದುಬಾಯಿನಲ್ಲಿ ಉಳಿದುಕೊಂಡು ಕೃತ್ಯ ನಡೆಸಿದರೆ ಯಾರಿಗೂ ತಿಳಿಯುವುದಿಲ್ಲ ಹಾಗೂ ಇಂಟರ್ ರ್ನೆಟ್ ಕರೆ ಕಂಡು ಹಿಡಿಯಲು ಸಾಧ್ಯವಿಲ್ಲ. ಜತೆಗೆ ಪೊಲೀಸರು ಈ ಬಗ್ಗೆ ತನ್ನನ್ನು ಹೆಚ್ಚು ವಿಚಾರಿಸುವುದಿಲ್ಲ ಎನ್ನುವ ಆತ್ಮ ವಿಶ್ವಾಸದಿಂದ ಕುಕೃತ್ಯಕ್ಕೆ ಇಳಿದ ಎನ್ನಲಾಗಿದೆ.
ವೈಮನಸ್ಸು ಕಾರಣ
ರಾಮಕೃಷ್ಣ ಹಾಗೂ ವಿಶಾಲಾ ಅವರ ದಾಂಪತ್ಯದಲ್ಲಿ ವೈಮನಸ್ಸು ಮೂಡಿದ್ದು ಇದರಿಂದಾಗಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ರಾಮಕೃಷ್ಣ ಗಾಣಿಗ ಒಪ್ಪಿಕೊಂಡಿದ್ದಾನೆ. ಪೊಲೀಸರು ತನ್ನಷ್ಟು ತನಿಖೆ ಚುರುಕುಗೊಳಿಸಿ ನಿಜವಾದ ಕಾರಣವನ್ನು ಪತ್ತೆ ಹಚ್ಚ ಬೇಕಾಗಿದೆ.
ತನಿಖೆಗೆ 5 ತಂಡಗಳು
ಕೊಲೆ ಪ್ರಕರಣವನ್ನು ಬೇಧಿಸಲು ಎಸ್ಪಿ ವಿಷ್ಣುವರ್ಧನ್ ಎನ್., ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಸುಧಾಕರ ಎಸ್. ನಾಯ್ಕ ಅವರ ನಿರ್ದೇಶನದಂತೆ ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಬ್ರಹ್ಮಾವರ ಪಿಎಸ್‌ಐ ಗುರುನಾಥ ಬಿ. ಹಾದಿಮನಿಯವರ ತಂಡ ಮಣಿಪಾಲ ಪಿಐ ಮಂಜುನಾಥ, ಪಿಎಸ್‌ಐ ರಾಜಶೇಖರ ವಂದಲಿ, ಮಲ್ಪೆ ಸಿಪಿಐ ಶರಣಗೌಡ, ಪಿಎಸ್‌ಐ ಮಧು, ಕಾರ್ಕಳ ಸಿಪಿಐ ಸಂಪತ್ ಕುಮಾರ್, ಪಿಎಸ್‌ಐ ರಾಘವೇಂದ್ರ ಸಿ., ಶ್ರೀಧರ್ ನಾಯ್ಕ ಹಾಗೂ ಜಿಲ್ಲಾ ಪೊಲೀಸ್ ಕಚೆೇರಿಯ ಆರ್.ಡಿ.ಪಿ.ಯ ತಾಂತ್ರಿಕ ತಂಡ ಒಳಗೊಂಡಂತೆ ಒಟ್ಟು 5 ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಕಿಲ್ಲರ್- ಬೆಂಗಳೂರಿನಲ್ಲಿ ಕೆಲಸ
ಸುಪಾರಿ ಕಿಲ್ಲರ್ ಗೋರಖು³ರದವ. ಹಿಂದಿನ ಲಾಕ್‌ಡೌನ್ ಪೂರ್ವದಲ್ಲಿ ಆರೋಪಿಗಳು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಲಾಕ್‌ಡೌನ್ ಬಳಿಕ ತವರೂರಿಗೆ ಮರಳಿದ್ದರು.
ತಂಡಕ್ಕೆ ಬಹುಮಾನ
ಡಿಜಿ ಹಾಗೂ ಐಜಿಪಿ ತಂಡ ಪ್ರಕರಣ ಬೇಧಿಸಿದ ಜಿಲ್ಲಾ ಪೋಲಿಸ್ ತಂಡಕ್ಕೆ 50,000 ರೂ. ಬಹುಮಾನ ಘೋಷಣೆ ಮಾಡಿದ್ದು, ಸದಸ್ಯರಿಗೆ ಮೆಚ್ಚುಗೆ ಪತ್ರವನ್ನು ನೀಡಲಿದ್ದಾರೆ.
ಫ್ಲ್ಯಾಟ್‌ಗೆ ಪೊಲೀಸ್ ನೋಟಿಸ್
ಘಟನೆ ವೇಳೆ ಫ್ಲ್ಯಾಟ್ ನಲ್ಲಿ ಸಿಸಿಟಿವಿ ಹಾಗೂ ವಾಚ್ ಮ್ಯಾನ್ ಇಲ್ಲದೇ ಇದ್ದುದರಿಂದ ಪೊಲೀಸರ ತನಿಖೆಗೆ ಹಿನ್ನಡೆಯಾಗಿತ್ತು. ಇದೀಗ ಮುಂಜಾಗೃತಾ ಕ್ರಮವಾಗಿ ಸಿಸಿಟಿವಿ ಅಳವಡಿಸುವಂತೆ ಫ್ಲ್ಯಾಟ್ ಮಾಲಕರಿಗೆ ಪೊಲೀಸ್ ನೋಟಿಸ್ ನೀಡಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.