ಹುಳಿಯಾರು ತಾಲೂಕಿನ ವಸತಿ ಶಾಲೆಯಲ್ಲಿ ಮಕ್ಕಳು ವಿಷಮಿಶ್ರಿತ ಆಹಾರ ಸೇವಿಸಿ ಮೃತಪಟ್ಟಿರುವುದು ಆಘಾತಕಾರಿ. ಆಹಾರವನ್ನು ದೊಡ್ಡ ಪ್ರಮಾಣದಲ್ಲಿ ಸಾಮೂಹಿಕವಾಗಿ ತಯಾರಿಸುವಾಗ ಕಿಂಚಿತ್ ಎಚ್ಚರತಪ್ಪಿದರೂ ಪರಿಣಾಮ ಘೋರವಾಗಿರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಜತೆಗೆ ನೈರ್ಮಲ್ಯಕ್ಕೂ ಪ್ರಾಮುಖ್ಯ ನೀಡಬೇಕಿದೆ. ಯಾರದೋ ನಿರ್ಲಕ್ಷ್ಯ ಅಥವಾ ದುರುದ್ದೇಶಕ್ಕೆ ಅಮಾಯಕ ಮಕ್ಕಳು ಬಲಿಯಾಗಬಾರದು.
ತುಮಕೂರು ಜಿಲ್ಲೆಯ ಹುಳಿಯಾರು ತಾಲೂಕಿನಲ್ಲಿರುವ ವಿದ್ಯಾವಾರಿಧಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಹಾಸ್ಟೆಲ್‌ನಲ್ಲಿ ಬುಧವಾರ ರಾತ್ರಿ ವಿಷಮಿಶ್ರಿತ ಊಟ ಸೇವಿಸಿ ಮೂವರು ಮಕ್ಕಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಶಾಲೆ ಮತ್ತು ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಬಡಿಸುವ ಆಹಾರದ ಸುರಕ್ಷೆಯ ಕುರಿತು ಕಳವಳಪಡುವಂತೆ ಮಾಡಿದೆ. ಸರಕಾರಿ ಶಾಲೆಗಳಲ್ಲಿ ಒದಗಿಸುವ ಮಧ್ಯಾಹ್ನದೂಟ ವಿಷಾಹಾರವಾಗಿ ಮಕ್ಕಳು ಅಸ್ವಸ್ಥರಾಗುವ ಅಥವಾ ಸಾಯುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತವೆ. ನಾಲ್ಕು ವರ್ಷದ ಹಿಂದೆ ಬಿಹಾರದ ಸರಣ್ ಜಿಲ್ಲೆಯಲ್ಲಿ ವಿಷಮಿಶ್ರಿತ ಆಹಾರ ಸೇವಿಸಿ 23 ಮಕ್ಕಳು ಮೃತಪಟ್ಟ ಘಟನೆ ಇನ್ನೂ ನೆನಪಿನಿಂದ ದೂರವಾಗಿಲ್ಲ.
ಅಂತೆಯೇ 2014ರಲ್ಲಿ ಬೆಂಗಳೂರಿನ ಉರ್ದು ಶಾಲೆಯಲ್ಲಿ ವಿಷ ಮಿಶ್ರಿತ ಮಧ್ಯಾಹ್ನದೂಟ ಸೇವಿಸಿ 300ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದರು. ಇವೆಲ್ಲ ಸರಕಾರಿ ಶಾಲೆಗಳ ಕತೆಯಾಯಿತು. ಆದರೆ ತುಮಕೂರಿನಲ್ಲಿ ದುರಂತ ಸಂಭವಿಸಿರುವುದು ಲಕ್ಷಾಂತರ ರೂಪಾಯಿ ಶುಲ್ಕ ವಸೂಲು ಮಾಡುವ ಖಾಸಗಿ ಶಾಲೆಯಲ್ಲಿ. ಅದೂ ಇಂಟರ್‌ನ್ಯಾಶನಲ್ ಸ್ಕೂಲ್ ಎಂಬ ಹೆಗ್ಗಳಿಕೆ ಹೊಂದಿರುವ ಶಾಲೆಯಲ್ಲಿ. ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಅನ್ನ, ಸಾಂಬಾರ್, ಚಪಾತಿ ಮತ್ತು ಪಲ್ಯವನ್ನು ಒದಗಿಸಲಾಗಿತ್ತು. ಹಸಿವಿನಿಂದ ಕಂಗೆಟ್ಟಿದ್ದ ವಿದ್ಯಾರ್ಥಿಗಳ ಪೈಕಿ ಐದು ಮಂದಿ ಗಬಗಬನೆ ಊಟ ಮಾಡಿದ್ದಾರೆ. ಇದಾದ 15 ನಿಮಿಷಗಳಲ್ಲಿ ಎದೆನೋವು ಮತ್ತು ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಇದೇ ವೇಳೆ ಮಕ್ಕಳಿಗಿಂತ ಮುಂಚಿತವಾಗಿ ಊಟ ಮಾಡಿದ್ದ ಸೆಕ್ಯುರಿಟಿ ಗಾರ್ಡ್ ಕೂಡ ಅಸ್ವಸ್ಥರಾಗಿದ್ದಾರೆ. ಈ ಪೈಕಿ ಮೂವರು ವಿದ್ಯಾರ್ಥಿಗಳು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಸುನೀಗಿದ್ದಾರೆ. ಊಟ ಬಡಿಸುವಾಗಲೇ ಸಾಂಬಾರು ಕೆಟ್ಟ ವಾಸನೆ ಬರುತ್ತಿತ್ತು. ಆದರೂ ಹೊಟ್ಟೆ ಚುರುಗುಡುತ್ತಿದ್ದ ಕಾರಣ ಮಕ್ಕಳು ಇದನ್ನು ಲೆಕ್ಕಿಸದೆ ಉಂಡಿದ್ದಾರೆ.
ಖಾಸಗಿಯಿರಲಿ ಅಥವಾ ಸರಕಾರಿ ಇರಲಿ, ಮಕ್ಕಳಿಗೆ ನೀಡುವ ಊಟದ ಶುಚಿರುಚಿಯ ಬಗ್ಗೆ ಗಮನ ಹರಿಸಬೇಕಾಗಿರುವುದು ಅಗತ್ಯ. ಮಧ್ಯಾಹ್ನದೂಟ ವಿಷವಾಗುತ್ತಿರುವ ಅನೇಕ ಘಟನೆಗಳು ಸಂಭವಿಸಿದ ಬಳಿಕ ಸರಕಾರ ಮಕ್ಕಳಿಗೆ ಶುಚಿಯಾದ ಆಹಾರ ಒದಗಿಸಲು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರಚಿಸಿದೆ. ಆ ಬಳಿಕ ವಿಷಾಹಾರದ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿರುವುದು ಗಮನಿಸಬೇಕಾದ ಅಂಶ. ಆದರೆ ಖಾಸಗಿ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಒದಗಿಸುವ ಊಟ ಉಪಾಹಾರಗಳ ಮೇಲೆ ಕಣ್ಣಿಡುವ ಸಮರ್ಪಕ ವ್ಯವಸ್ಥೆಯಿಲ್ಲ. ಖಾಸಗಿ ವಸತಿ ಶಾಲೆಗಳು ಶುಲ್ಕ ಲಕ್ಷಗಳಲ್ಲಿರುವುದರಿಂದ ಅವುಗಳ ಹಾಸ್ಟೆಲ್‌ಗಳು ಕೂಡ ಸುಸಜ್ಜಿತವಾಗಿರುತ್ತವೆ, ಮಕ್ಕಳಿಗೆ ಉತ್ತಮ ಊಟ ವಸತಿ ಸಿಗುತ್ತದೆ ಎನ್ನುವ ಸಾಮಾನ್ಯ ನಂಬಿಕೆಯಿದೆ. ಆದರೆ ಎಲ್ಲ ಶಾಲೆಗಳಲ್ಲಿ ಹೆತ್ತವರು ನಿರೀಕ್ಷಿಸುವಷ್ಟು ಸೌಲಭ್ಯಗಳು ಇಲ್ಲ ಎನ್ನುವುದು ವಾಸ್ತವ. ಹೆತ್ತವರೇನೋ ವಸತಿ ಶಾಲೆಯಲ್ಲಿ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ ಎಂಬ ಭ್ರಮೆಯಲ್ಲಿರುತ್ತಾರೆ. ಆದರೆ ಎಷ್ಟೋ ವಸತಿ ಶಾಲೆಗಳು ಶೋಷಣೆಯ ಮತ್ತು ಸುಲಿಗೆಯ ಕೇಂದ್ರಗಳಾಗಿವೆ. ಪ್ರಸ್ತುತ ದುರಂತ ಸಂಭವಿಸಿರುವ ವಸತಿ ಶಾಲೆಯ ಮೇಲೆ ಈ ಆರೋಪ ಇಲ್ಲದಿದ್ದರೂ ಇದು ಮಾಜಿ ಶಾಸಕರೊಬ್ಬರ ಪತ್ನಿಯ ಒಡೆತನದ್ದು ಎಂಬ ಕಾರಣಕ್ಕೆ ರಾಜಕೀಯ ಆಯಾಮವನ್ನೂ ಪಡೆದುಕೊಂಡಿದೆ.
ಆಹಾರವನ್ನು ದೊಡ್ಡ ಪ್ರಮಾಣದಲ್ಲಿ ಸಾಮೂಹಿಕವಾಗಿ ತಯಾರಿಸುವಾಗ ಕಿಂಚಿತ್ ಎಚ್ಚರ ತಪ್ಪಿದರೂ ಪರಿಣಾಮ ಘೋರವಾಗಿರಬಲ್ಲುದು. ಅಮಾಯಕ ಮಕ್ಕಳು ಇದರ ಪರಿಣಾಮ ಅನುಭವಿಸುವಂತಾಗಬಾರದು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮಾಡಲು ಆರೋಗ್ಯ ಇಲಾಖೆ ಖಾಸಗಿ ವಸತಿ ಶಾಲೆಗಳ ಊಟೋಪಾಚಾರಗಳ ಮೇಲೂ ಕಣ್ಣಿಡಬೇಕು. ಅಂತೆಯೇ ಹೆತ್ತವರು ಕೂಡ ಆಗಾಗ ಭೇಟಿ ನೀಡಿ ಶಾಲೆಯಲ್ಲಿರುವ ಸೌಲಭ್ಯಗಳನ್ನು ಖಚಿತಪಡಿಸುವುದು ಒಳ್ಳೆಯದು.