Advertisement

ಭಾರತದ ಮೇಲೆ ಭಾರೀ ಒತ್ತಡ; ಸರಣಿ ಗೆಲುವಿನ ಹಾದಿಯಲ್ಲಿ ದಕ್ಷಿಣ ಆಫ್ರಿಕಾ

10:36 PM Jun 13, 2022 | Team Udayavani |

ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾದ ಟಿ20 ಅಬ್ಬರಕ್ಕೆ ಅದುರುತ್ತಿರುವ ಭಾರತವೀಗ ಮಾಡು-ಮಡಿ ಒತ್ತಡಕ್ಕೆ ಸಿಲುಕಿದೆ. ಸರಣಿಯ 3ನೇ ಮುಖಾಮುಖಿ ಮಂಗಳವಾರ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಇದನ್ನು ಗೆದ್ದರಷ್ಟೇ ಟೀಮ್‌ ಇಂಡಿಯಾಕ್ಕೆ ಉಳಿಗಾಲ. ಮತ್ತೆ ಎಡವಿದರೆ ತವರಲ್ಲೇ ಸರಣಿ ಸೋಲಿನ ಅವಮಾನಕ್ಕೆ ಸಿಲುಕಲಿದೆ. ಟೆಂಬ ಬವುಮ ಪಡೆಯ ಯೋಜನೆಯೂ ಇದೇ ಆಗಿದೆ, ಭಾರತದ ನೆಲದಲ್ಲೇ ಭಾರತವನ್ನು ಸೋಲಿಸಿ ಮೆರೆಯುವುದು!

Advertisement

ಹೊಸದಿಲ್ಲಿಯ ಮೊದಲ ಟಿ20 ಪಂದ್ಯವನ್ನು ಭಾರತ ಕಳಪೆ ಬೌಲಿಂಗ್‌ನಿಂದಾಗಿ ಕಳೆದುಕೊಂಡರೆ, ರವಿವಾರ ಕಟಕ್‌ನಲ್ಲಿ ಬ್ಯಾಟಿಂಗ್‌ ಕೈಕೊಟ್ಟಿತು. ಒಂದು ಹಂತದಲ್ಲಿ ಬೌಲಿಂಗ್‌ ಮೇಲುಗೈ ಸಾಧಿಸಿದರೂ ಹೆನ್ರಿಕ್‌ ಕ್ಲಾಸೆನ್‌ ಅವರ ಟಾಪ್‌ ಕ್ಲಾಸ್‌ ಬ್ಯಾಟಿಂಗ್‌ ಭಾರತವನ್ನು ಮುಳುಗಿಸಿತು.

ಸ್ಕೋರ್‌ಬೋರ್ಡ್‌ನಲ್ಲಿ ಕೇವಲ 148 ರನ್‌ ಇದ್ದರೂ ಭುವನೇಶ್ವರ್‌ ಕುಮಾರ್‌ ಪವರ್‌ ಪ್ಲೇ ಅವಧಿಯಲ್ಲಿ ಘಾತಕವಾಗಿ ಎರಗಿ ಹರಿಣಗಳನ್ನು ದಿಕ್ಕು ತಪ್ಪಿಸಿದ್ದರು. ಅಂತಿಮ ಸ್ಪೆಲ್‌ನಲ್ಲೂ ಘಾತಕವಾಗಿ ಪರಿಣಮಿಸಿದರು. ಆದರೆ ಇವರಿಗೆ ಇನ್ನೊಂದು ತುದಿಯಿಂದ ಬೆಂಬಲ ನೀಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆವೇಶ್‌ ಖಾನ್‌ ನಿಯಂತ್ರಣ ಸಾಧಿಸಿದರೂ ವಿಕೆಟ್‌ ಕೀಳಲು ಯಶಸ್ವಿಯಾಗಲಿಲ್ಲ. ಪಾಂಡ್ಯ, ಚಹಲ್‌, ಅಕ್ಷರ್‌ ಪಟೇಲ್‌ ಮ್ಯಾಜಿಕ್‌ ನಡೆಯಲೇ ಇಲ್ಲ.

ಎರಡೂ ಪಂದ್ಯಗಳಲ್ಲಿ ಸ್ಪಿನ್ನರ್‌ಗಳ ವೈಫ‌ಲ್ಯ ಎದ್ದು ಕಂಡಿತು. ಚಹಲ್‌ 6 ಓವರ್‌ಗಳಿಂದ 75 ರನ್‌, ಅಕ್ಷರ್‌ ಪಟೇಲ್‌ 5 ಓವರ್‌ಗಳಿಂದ 59 ರನ್‌ ನೀಡಿ ಭಾರೀ ದುಬಾರಿಯಾಗಿದ್ದಾರೆ. ಎಲ್ಲರ ಪರಾಕ್ರಮ ಐಪಿಎಲ್‌ಗೆ ಸೀಮಿತವಾದಂತಿತ್ತು. ಇಲ್ಲಿ ಮಿಲ್ಲರ್‌, ಡುಸೆನ್‌, ಕ್ಲಾಸೆನ್‌ ಅವರೆಲ್ಲ ನಮ್ಮ ಸ್ಪಿನ್ನರ್‌ಗಳನ್ನು ನಿರ್ದಯವಾಗಿ ದಂಡಿಸುತ್ತಿದ್ದಾರೆ.

ಬದಲಾವಣೆ ಅಗತ್ಯ
ಭಾರತ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಕಟಕ್‌ ಪಂದ್ಯ ಆಡಲಿಳಿದಿತ್ತು. ಆದರೆ ಮತ್ತೆ ಇದೇ ಕಾಂಬಿನೇಶನ್‌ ಮುಂದುವರಿದರೆ ಗೆಲುವಿನ ಹಳಿ ಏರುವುದು ಕಷ್ಟವಾದೀತು. ಮುಖ್ಯವಾಗಿ ಬೌಲಿಂಗ್‌ ವಿಭಾಗದಲ್ಲಿ ಕೆಲವು ಪರಿವರ್ತನೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆರ್ಷದೀಪ್‌ ಸಿಂಗ್‌ ಅಥವಾ ಉಮ್ರಾನ್‌ ಮಲಿಕ್‌ ಅವರಿಗೆ ಅವಕಾಶ ಕೊಟ್ಟು ನೋಡಬೇಕಿದೆ. ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌, ಲೆಗ್‌ಸ್ಪಿನ್ನರ್‌ ರವಿ ಬಿಷ್ಣೋಯಿ ಸರದಿಯಲ್ಲಿದ್ದಾರೆ. ಆದರೆ ಅಯ್ಯರ್‌ ಐಪಿಎಲ್‌ನಲ್ಲಿ ಘೋರ ವೈಫ‌ಲ್ಯ ಅನುಭವಿಸಿದವರು ಎಂಬುದನ್ನು ಮರೆಯುವಂತಿಲ್ಲ.

Advertisement

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ವಿಭಾಗ ಹೆಚ್ಚು ಬಲಿಷ್ಠವಾಗಿರುವುದರಿಂದ ಭಾರತದ ಬೌಲಿಂಗ್‌ ಸಾಮರ್ಥ್ಯ ಏನೂ ಸಾಲದು ಎಂಬುದು ಈಗಾಗಲೇ ಸಾಬೀತಾಗಿದೆ. ಪ್ರವಾಸಿ ಪಡೆ ಯಾರನ್ನೂ ನಂಬಿಕೊಂಡಿಲ್ಲ. ಕಟಕ್‌ನಲ್ಲಿ ಪಟಪಟನೆ 3 ವಿಕೆಟ್‌ ಬಿದ್ದಾಗ ಬವುಮ-ಕ್ಲಾಸೆನ್‌ ಇನ್ನಿಂಗ್ಸ್‌ ಕಟ್ಟಿದ ರೀತಿ ಅಮೋಘ. ಅದರಲ್ಲೂ ಕ್ಲಾಸೆನ್‌ ಡಿಕಾಕ್‌ಗೆ ಬದಲಿಯಾಗಿ ಬಂದವರು. ಈ ಅವಕಾಶವನ್ನು ಭರ್ಜರಿಯಾಗಿ ಬಾಚಿಕೊಂಡರು.

ಓಪನಿಂಗ್‌ ವೈಫ‌ಲ್ಯ
ಭಾರತದ ಬ್ಯಾಟಿಂಗ್‌ ಕೋಟ್ಲಾದಲ್ಲಿ ಮಿಂಚಿದರೂ ಕಟಕ್‌ನಲ್ಲಿ ಕೈಕೊಟ್ಟಿತು. ಮುಖ್ಯವಾಗಿ ಟೀಮ್‌ ಇಂಡಿಯಾದ ಆರಂಭವೇ ಗಟ್ಟಿಮುಟ್ಟಾ ಗಿಲ್ಲ. ಇಶಾನ್‌ ಕಿಶನ್‌ ಗಮ ನಾರ್ಹ ಪ್ರದರ್ಶನ ನೀಡಿದರೂ ಜತೆಗಾರ ಋತುರಾಜ್‌ ಗಾಯಕ್ವಾಡ್‌ ಸತತ ವೈಫ‌ಲ್ಯ ಕಾಣುತ್ತಿ ದ್ದಾರೆ. ವನ್‌ಡೌನ್‌ನಲ್ಲಿ ಬರುವ ಶ್ರೇಯಸ್‌ ಅಯ್ಯರ್‌ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕವನ್ನು ನಂಬುವುದು ಕಷ್ಟ ಎನ್ನುವ ಪರಿಸ್ಥಿತಿ ಇದೆ. ಪಾಂಡ್ಯ, ಪಂತ್‌ ಸಿಡಿಯುವ ಜತೆಗೆ ನಿಂತು ಆಡುವುದನ್ನೂ ಕಲಿಯಬೇಕಿದೆ. ರಿಷಭ್‌ ಪಂತ್‌ ನಾಯಕತ್ವಕ್ಕೆ ಇನ್ನೂ ಪಕ್ವವಾಗಿಲ್ಲ ಎಂಬುದು ಪುನಃ ಸಾಬೀತಾಗಿದೆ. ಗಳಿಸಿದ್ದು ಕೇವಲ 23 ಹಾಗೂ 5 ರನ್‌. ದಿನೇಶ್‌ ಕಾರ್ತಿಕ್‌ ಉತ್ತಮ ಲಯದಲ್ಲಿದ್ದಾರೆ. ಕಟಕ್‌ ಪಂದ್ಯದ ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತಿದ್ದು, ಹೆಚ್ಚಿನ ನಿರೀಕ್ಷೆ ಮೂಡಿಸಿದ್ದಾರೆ.

ರಬಾಡ, ನೋರ್ಜೆ, ಪಾರ್ನೆಲ್‌ ಅವರನ್ನೊಳಗೊಂಡ ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್‌ ಭಾರತದ ಟ್ರ್ಯಾಕ್‌ನಲ್ಲಿ ಮಿಂಚುತ್ತಿರುವುದು ವಿಶೇಷ. ದಕ್ಷಿಣ ಆಫ್ರಿಕಾದ ಗೆಲುವಿನ ಆಟದಲ್ಲಿ ಐಪಿಎಲ್‌ ಯಶಸ್ಸು ಕೂಡ ಇದೆ ಎಂಬುದು ರಹಸ್ಯವಲ್ಲ.

ವಿಶಾಖಪಟ್ಟಣದಲ್ಲಿ ಭಾರತ
ಪೂರ್ವದ ಬಂದರು ನಗರಿ ವಿಶಾಖಪಟ್ಟಣದಲ್ಲಿ ಭಾರತ ಈವರೆಗೆ 3 ಟಿ20 ಪಂದ್ಯಗಳನ್ನಾಡಿದೆ. ಒಂದನ್ನು ಗೆದ್ದಿದೆ, ಒಂದರಲ್ಲಿ ಸೋತಿದೆ. 2012ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧದ ಪ್ರಥಮ ಮುಖಾಮುಖಿ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು.

ಇಲ್ಲಿ ದ್ವಿತೀಯ ಟಿ20 ಪಂದ್ಯ ಏರ್ಪಟ್ಟಿದ್ದು 2016ರಲ್ಲಿ. ಎದುರಾಳಿ ಶ್ರೀಲಂಕಾ. ನಾಯಕರು ಮಹೇಂದ್ರ ಸಿಂಗ್‌ ಧೋನಿ ಮತ್ತು ದಿನೇಶ್‌ ಚಂಡಿಮಾಲ್‌. ಭಾರತದ ಗೆಲುವಿನ ಅಂತರ 9 ವಿಕೆಟ್‌.

ಆರ್‌. ಅಶ್ವಿ‌ನ್‌ ಸ್ಪಿನ್‌ ದಾಳಿಗೆ ತತ್ತರಿಸಿದ ಶ್ರೀಲಂಕಾ 18 ಓವರ್‌ಗಳಲ್ಲಿ 82 ರನ್ನಿಗೆ ಕುಸಿಯಿತು. ಅಶ್ವಿ‌ನ್‌ ಸಾಧನೆ 8 ರನ್ನಿಗೆ 4 ವಿಕೆಟ್‌. 4 ಓವರ್‌ಗಳಲ್ಲಿ ಒಂದು ಮೇಡನ್‌ ಆಗಿತ್ತು. ಸುರೇಶ್‌ ರೈನಾ 6 ರನ್ನಿಗೆ 2 ವಿಕೆಟ್‌ ಕೆಡವಿದರು. ಜವಾಬಿತ್ತ ಭಾರತ ರೋಹಿತ್‌ ಶರ್ಮ (13) ವಿಕೆಟ್‌ ಕಳೆದುಕೊಂಡು 13.5 ಓವರ್‌ಗಳಲ್ಲಿ ಗುರಿ ಮುಟ್ಟಿತು (ಒಂದಕ್ಕೆ 84). ಶಿಖರ್‌ ಧವನ್‌ 46, ಅಜಿಂಕ್ಯ ರಹಾನೆ 22 ರನ್‌ ಮಾಡಿ ಅಜೇಯರಾಗಿ ಉಳಿದರು.

ಆಸ್ಟ್ರೇಲಿಯ ವಿರುದ್ಧ ಸೋಲು
ಇಲ್ಲಿ ಕೊನೆಯ ಪಂದ್ಯ ಏರ್ಪಟ್ಟಿದ್ದು 2019ರಲ್ಲಿ. ಎದುರಾಳಿ ಆಸ್ಟ್ರೇಲಿಯ. ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿದ ವಿರಾಟ್‌ ಕೊಹ್ಲಿ ಪಡೆ ಗಳಿಸಿದ್ದು 7 ವಿಕೆಟಿಗೆ ಕೇವಲ 127 ರನ್‌. ಇದರಲ್ಲಿ ಕೆ.ಎಲ್‌. ರಾಹುಲ್‌ ಗಳಿಕೆಯೇ 50 ರನ್‌ ಆಗಿತ್ತು.
ಆಸ್ಟ್ರೇಲಿಯ ಕೂಡ ಚೇಸಿಂಗ್‌ ವೇಳೆ ಚಡಪಡಿಸಿತು. ಈ ಮೊತ್ತವನ್ನು ಹಿಂದಿಕ್ಕಲು ಭರ್ತಿ 20 ಓವರ್‌ ತೆಗೆದುಕೊಂಡಿತು. ಅಂತಿಮ ಓವರ್‌ನಲ್ಲಿ 3 ವಿಕೆಟ್‌ಗಳಿಂದ 14 ರನ್‌ ತೆಗೆಯಬೇಕಾದ ಒತ್ತಡಕ್ಕೆ ಸಿಲುಕಿತು. ಆಗ ಪಂದ್ಯ ಭಾರತದ ಕೈಯಲ್ಲೇ ಇತ್ತು. ಬುಮ್ರಾ ಹಿಂದಿನ ಓವರ್‌ನ ಅಂತಿಮ 2 ಎಸೆತಗಳಲ್ಲಿ 2 ವಿಕೆಟ್‌ ಕಿತ್ತು ಭಾರತಕ್ಕೆ ಮೇಲುಗೈ ಒದಗಿಸಿದ್ದರು. ಆದರೆ ಉಮೇಶ್‌ ಯಾದವ್‌ ಇಂಥದೇ ಮ್ಯಾಜಿಕ್‌ ಮಾಡುವಲ್ಲಿ ವಿಫ‌ಲರಾದರು. ಅವರ ಅಂತಿಮ ಓವರ್‌ನಲ್ಲಿ ಜೇ ರಿಚರ್ಡ್‌ಸನ್‌ ಮತ್ತು ಪ್ಯಾಟ್‌ ಕಮಿನ್ಸ್‌ ಸೇರಿಕೊಂಡು 14 ರನ್‌ ಬಾರಿಸಿ ಗೆಲುವನ್ನು ಕಸಿದೇ ಬಿಟ್ಟರು!

ಮಾಯಾಂಕ್‌ ಮಾರ್ಕಂಡೆ, ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಅವರಿಗೆ ಇದು ಪದಾರ್ಪಣ ಪಂದ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next