Advertisement

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

10:45 AM Apr 19, 2024 | Team Udayavani |

ಬೆಂಗಳೂರು: ಸುಶಿಕ್ಷಿತ ಹಾಗೂ ಪ್ರಬುದ್ಧ ಮತದಾರರ ಕ್ಷೇತ್ರವೆಂದೇ ಕರೆಯಲ್ಪಡುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಬಿಜೆಪಿ- ಕಾಂಗ್ರೆಸ್‌ ನಡುವೆ ಮತ್ತೆ ಜಿದ್ದಾಜಿದ್ದಿ ಹೋರಾಟ ನಡೆದಿದೆ. ಪ್ರತೀ ಚುನಾವಣೆಯಂತೆ ಕಾಂಗ್ರೆಸ್‌ ಈ ಸಲವೂ ಹೊಸ ಮುಖದೊಂದಿಗೆ ಕಣಕ್ಕಿಳಿದಿದ್ದು ಮೂರು ದಶಕಗಳ ಹಿಂದೆ ಕಳೆದುಕೊಂಡಿರುವ ಕ್ಷೇತ್ರವನ್ನು ಪುನಃ ತನ್ನ ತೆಕ್ಕೆಗೆ ಪಡೆಯಲು ಕೈಪಡೆ ಭಗೀರಥ ಪ್ರಯತ್ನ ನಡೆಸಿದೆ.

Advertisement

ಹಾಲಿ ಸಂಸದ ಬಿಜೆಪಿಯ ತೇಜಸ್ವಿ ಸೂರ್ಯ 2ನೇ ಬಾರಿಗೆ ಮರು ಆಯ್ಕೆ ಬಯಸಿ ಕಣಕ್ಕಿಳಿದಿದ್ದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಕೇವಲ ಅತ್ಯಲ್ಪ ಮತಗಳ ಅಂತರದಿಂದ ಸೋತಿದ್ದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಹಾಲಿ ಸಂಸದ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ನಡುವೆ ಸಂಸತ್ತಿನ ಮೆಟ್ಟಿಲೇರಲು ಹೋರಾಟ ನಡೆದಿದೆ. ಮತದಾರರ ಮನಗೆಲ್ಲುವ ಕಸರತ್ತಿನಲ್ಲಿ ಇಬ್ಬರು ಅಭ್ಯರ್ಥಿಗಳು ನಿರತರಾಗಿದ್ದಾರೆ.

ಕಳೆದ 1989ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಈ ಕ್ಷೇತ್ರದಿಂದ ಗೆದ್ದಿದ್ದೇ ಕಡೆಯದು. ಆಗ ಮಾಜಿ ಮುಖ್ಯಮಂತ್ರಿ ದಿವಂಗತ ಆರ್‌. ಗುಂಡೂರಾವ್‌ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟಿದ್ದರು. ಅನಂತರ 1991ರಲ್ಲಿ ಈ ಕ್ಷೇತ್ರದಲ್ಲಿ ಖಾತೆ ತೆರೆದ ಬಿಜೆಪಿ ಹಿಂದಿರುಗಿ ನೋಡಿಲ್ಲ. ಬಿಜೆಪಿಯಲ್ಲಿ ಅನಂತಕುಮಾರ್‌ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ ನಡೆಸಿದ ಪ್ರಯತ್ನಗಳೆಲ್ಲವೂ ಕೈಹಿಡಿಯಲಿಲ್ಲ. ಐಟಿ ದಿಗ್ಗಜ ನಂದನ್‌ ನಿಲೇಕಣಿ, ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌
ಸೇರಿದಂತೆ ಘಟಾನುಘಟಿಗಳನ್ನೇ ಕಣಕ್ಕಿಳಿಸಿದರೂ ಇಲ್ಲಿ ಕಾಂಗ್ರೆಸ್‌ಗೆ ಜಯ ಒಲಿದಿಲ್ಲ. ವಿಧಾನಸಭಾ ಚುನಾವಣೆ ಸೋಲಿನ ಅನುಕಂಪದ ಜತೆಗೆ ಮಹಿಳಾ ಅಭ್ಯರ್ಥಿ ಎಂಬುದರೊಂದಿಗೆ ಈಗ ಸೌಮ್ಯಾ ರೆಡ್ಡಿ ಅವರು ಲೋಕಸಮರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ 5 ವರ್ಷದ ಕೆಲಸದ ರಿಪೋರ್ಟ್‌ ಕಾರ್ಡ್‌ ಜತೆಗೆ ಪ್ರಧಾನಿ ನರೇಂದ್ರ ಮೋದಿ ನಾಮಬಲ
ಮತ್ತು ಮೋದಿ ಗ್ಯಾರಂಟಿಯೊಂದಿಗೆ ಮತದಾರರ ಮುಂದೆ ಹೋಗುತ್ತಿದ್ದರೆ, ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಯಶಸ್ವಿಯಾಗಿ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳ ಜತೆಗೆ ಈ ಹಿಂದೆ ಶಾಸಕಿಯಾಗಿ ಮಾಡಿದ ಕೆಲಸಗಳ ಸಾಧನೆಗಳೊಂದಿಗೆ ಮತದಾರರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಹೀಗಾಗಿ ಇಬ್ಬರು ಅಭ್ಯರ್ಥಿಗಳು “ಗ್ಯಾರಂಟಿ’ ಜಪದಲ್ಲಿ ತೊಡಗಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜಯನಗರ ವಿಧಾನಸಭಾ ಕ್ಷೇತ್ರದಿಂದ 4 ಸಲ ಶಾಸಕರಾಗಿ ಆಯ್ಕೆಯಾಗಿದ್ದ ಹಾಗೂ ಸದ್ಯ ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ರಾಮಲಿಂಗಾರೆಡ್ಡಿ ಅವರೇ ವಾಸ್ತವವಾಗಿ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೆಂದೇ ಹೇಳಬಹುದು. ಪ್ರತೀ ಲೋಕಸಭಾ ಚುನಾವಣೆಯಲ್ಲೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚುನಾವಣ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದ ರಾಮಲಿಂಗಾರೆಡ್ಡಿ ಅವರು ಈ ಸಲ ಪುತ್ರಿ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಪ್ರದರ್ಶನ ಕಾಣುತ್ತಿದೆ. ಇಡೀ ಕ್ಷೇತ್ರದ ಮೂಲೆ ಮೂಲೆಯ ರಾಜಕೀಯ ಒಳ-ಹೊರಗಿನ ಆಟಗಳನ್ನು ಬಲ್ಲ ರೆಡ್ಡಿ ಅವರ ನಾಮಬಲವೇ ಸೌಮ್ಯಾ ರೆಡ್ಡಿಗೆ ಶ್ರೀರಕ್ಷೆ. ಅದೇ ರೀತಿ ಬಿಜೆಪಿಯ ತೇಜಸ್ವಿ ಸೂರ್ಯ ತಮ್ಮ ಪಕ್ಷದ ಶಾಸಕರು ಹಾಗೂ ತಮ್ಮದೇ ಪಡೆಯೊಂದಿಗೆ ಕ್ಷೇತ್ರದೆಲ್ಲೆಡೆ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

Advertisement

ಕ್ಷೇತ್ರದಲ್ಲಿ ಬಲಾಬಲ: ಕ್ಷೇತ್ರದ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕಡೆ ಅಂದರೆ ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಜಯನಗರ ಹಾಗೂ ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಶಾಸಕರಿದ್ದರೆ ಉಳಿದ ಮೂರು ಕಡೆ ಅಂದರೆ ವಿಜಯನಗರ, ಗೋವಿಂದರಾಜನಗರ ಹಾಗೂ ಬಿಟಿಎಂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ವಿಪಕ್ಷ ನಾಯಕರೂ ಆಗಿರುವ ಪದ್ಮನಾಭನಗರದ ಆರ್‌.ಅಶೋಕ್‌ ಹಾಗೂ ಸಚಿವರೂ ಆಗಿರುವ ಬಿಟಿಎಂ ಕ್ಷೇತ್ರದ ರಾಮಲಿಂಗಾರೆಡ್ಡಿ ಅವರಿಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆ ಹಾಗೂ ಸವಾಲು ಆಗಿದ್ದು ಇಬ್ಬರಿಗೂ ಗೆಲ್ಲುವ ಅನಿವಾರ್ಯತೆ ಎದುರಾಗಿದೆ.

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಒಕ್ಕಲಿಗರು, ಮುಸ್ಲಿಮರು, ದಲಿತರು, ಹಿಂದುಳಿದ ವರ್ಗಗಳ ಮತಗಳ ಪ್ರಾಬಲ್ಯವಿದ್ದರೂ ಬ್ರಾಹ್ಮಣ ಮತದಾರರ ಪ್ರಭಾವ ಹೆಚ್ಚಿದ್ದಂತೆ ಕಾಣುತ್ತಿದೆ. ಅಂದಾಜು 4 ಲಕ್ಷ ಒಕ್ಕಲಿಗ, 2.50 ಲಕ್ಷದಿಂದ 3 ಲಕ್ಷದಷ್ಟು ತಲಾ ಮುಸ್ಲಿಂ ಹಾಗೂ ಬ್ರಾಹ್ಮಣ ಸಮುದಾಯದ ಮತಗಳಿವೆ.

ಉಳಿದಂತೆ ಪರಿಶಿಷ್ಟರು, ಹಿಂದುಳಿದ ವರ್ಗ, ಕ್ರಿಶ್ಚಿಯನ್ನರು, ರೆಡ್ಡಿ ಜನಾಂಗದ ಮತಗಳಿವೆ. ಈ ಸಲ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಕಾರ್ಡ್‌ ಪ್ರಯೋಗ ಮಾಡಿದ್ದು ಅದು ಫ‌ಲಕೊಟ್ಟರೆ ಈ ಕ್ಷೇತ್ರದಲ್ಲೂ ಒಕ್ಕಲಿಗ ಮತಗಳು
ವಿಭಜನೆಯಾದರೆ ಲಾಭ ಆಗಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ. ಆದರೆ ಬಿಜೆಪಿ ತನ್ನದೇ ಭದ್ರ ಮತ ಬ್ಯಾಂಕ್‌ ಹೊಂದಿರುವುದರಿಂದ ಆ ಮತ ಬ್ಯಾಂಕ್‌ಗೆ ಲಗ್ಗೆ ಹಾಕಲು ಕಾಂಗ್ರೆಸ್‌ ಸರ್ವ ಪ್ರಯತ್ನ ನಡೆಸಿದ್ದು ಫ‌ಲಿತಾಂಶ ಸಾಕಷ್ಟು
ಕುತೂಹಲ ಕೆರಳಿಸಿದೆ.

■ ಎಂ.ಎನ್‌.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next