ಬ್ಯೂನಸ್ ಐರೀಸ್: ಅಮೆರಿಕದಿಂದ ವಾಪಸ್ ಆಗಿದ್ದ ಯುವಕ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಹನ್ನೊಂದು ಜನರಿಗೆ ಮಾರಣಾಂತಿಕ ಕೋವಿಡ್ 19 ವೈರಸ್ ಹಬ್ಬಿಸಿದ್ದ…ಇದರ ಪರಿಣಾಮ ಈತ 15 ವರ್ಷ ಜೈಲು ಶಿಕ್ಷೆ ಎದುರಿಸಬೇಕಾದ ಘಟನೆ ಅರ್ಜೈಂಟೀನಾದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಅಮೆರಿಕದಿಂದ ಅರ್ಜೈಂಟೀನಾಕ್ಕೆ ಬಂದಿದ್ದ ಎರಿಕ್ ಟೋರಾಲ್ಸ್ ಸ್ವಯಂ ಐಸೋಲೇಶನ್ ನಲ್ಲಿರುವ ಕಾನೂನು ಪಾಲಿಸಬೇಕಾಗಿತ್ತು. ಆದರೆ ಈತ ಕುಟುಂಬದ ಆಪ್ತರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಎಂದು ವರದಿ ವಿವರಿಸಿದೆ. ಸ್ವಯಂ ಐಸೋಲೇಶನ್
ಉಲ್ಲಂಘಿಸಿದ್ದರಿಂದ 15 ವರ್ಷಗಳ ಜೈಲುಶಿಕ್ಷೆ ಎದುರಿಸಬೇಕಾಗಲಿದೆ ಎಂದು ವರದಿ ಹೇಳಿದೆ.
ಅರ್ಜೈಂಟೀನಾದ ಪ್ರಜೆಗಳು ಬೇರೆ ಯಾವುದೇ ದೇಶದಿಂದ ವಾಪಸ್ ಆಗಿದ್ದರೆ ಅವರು ಸ್ವಯಂ ಐಸೋಲೇಶನ್ ನಲ್ಲಿ ಇರುವುದು ಕಡ್ಡಾಯ ಎಂದು ಹೊಸ ಕಾಯ್ದೆಯನ್ನು ಜಾರಿಗೊಳಿಸಿತ್ತು. ಈ ಯುವಕ ಐಸೋಲೇಶನ್ ಬಿಟ್ಟು ಬ್ಯೂನಸ್ ಐರೀಸ್ ನಲ್ಲಿ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಎಂದು ವರದಿ ತಿಳಿಸಿದೆ.
15 ವರ್ಷದ ಬಾಲಕಿಯ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಈತನಿಂದ ಈಗ ಆ ಹುಡುಗಿ ಸೇರಿದಂತೆ ಹನ್ನೊಂದು ಮಂದಿ ಕೋವಿಡ್ 19 ವೈರಸ್ ಹಬ್ಬಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಇವರಲ್ಲಿ 76 ಹಾಗೂ 79ವರ್ಷದ ಇಬ್ಬರು ಹಿರಿಯ ವ್ಯಕ್ತಿಗಳು ಸೇರಿದ್ದಾರೆ. ಅಂದಾಜು 20 ಮಂದಿಯನ್ನು ಐಸೋಲೇಶನ್ ನಲ್ಲಿ ಇರಿಸಲಾಗಿದೆ ಎಂದು ವರದಿ ಹೇಳಿದೆ.
ಮಾರ್ಚ್ 13ರಂದು ಅಮೆರಿಕದಿಂದ ಅರ್ಜೈಂಟೀನಾಕ್ಕೆ ಟೋರಾಲ್ಸ್ ಸಂಪರ್ಕಕ್ಕೆ ಎಷ್ಟು ಮಂದಿ ಬಂದಿದ್ದಾರೆ ಎಂದು ಅಧಿಕಾರಿಗಳು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಬರ್ತ್ ಡೇ ಸಮಾರಂಭ ಆದ ಐದು ದಿನಗಳ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದ. ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದ ನಂತರ ಯುವಕನನ್ನು ಗೃಹಬಂಧನದಲ್ಲಿ ಇರಿಸಿದ್ದು, ಪಾಸ್ ಪೋರ್ಟ್ ಅನ್ನು ವಶಕ್ಕೆ
ಪಡೆದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ವೈದ್ಯಕೀಯ ತಪಾಸಣೆ ಹೊರತುಪಡಿಸಿ ಅನಗತ್ಯವಾಗಿ ಈ ಯುವಕನಿಗೆ ಮನೆಯಿಂದ ಹೊರಹೋಗಲು ಅನುಮತಿ ಇಲ್ಲ. ಮಾರಣಾಂತಿಕ ಕೋವಿಡ್ 19 ವೈರಸ್ ಹರಡುವುದನ್ನು ತಡೆಯಲು ಹಲವು ದೇಶಗಳು ಲಾಕ್ ಡೌನ್ ಸೇರಿದಂತೆ ವಿವಿಧ ತುರ್ತು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.