Advertisement

ಕೇರಳದಲ್ಲಿ ನ್ಯೂರೋ ವೈರಸ್‌: ಕಟ್ಟೆಚ್ಚರ..!

02:55 PM Nov 19, 2021 | Team Udayavani |

ಚಾಮರಾಜನಗರ: ಕೋವಿಡ್‌ 19 ಸೇರಿ ಹೊಸ ವೈರಾಣುಗಳು ಪತ್ತೆಯಾಗುತ್ತಿರುವ ಕೇರಳದ ವೈನಾಡಿನಲ್ಲಿ ಹೊಸ ವೈರಾಣು ನ್ಯೂರೋ ವೈರಸ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಮೂಲೆಹೊಳೆ ಚೆಕ್‌ಪೋಸ್ಟ್‌ ಪ್ರವೇಶಿಸುವವರ ಮೇಲೆ ವಿಶೇಷ ಗಮನ ನೀಡಲಾಗಿದೆ.

Advertisement

ದೇಶದಲ್ಲಿಯೇ ಕೊರೊನಾ, ನಿಫಾ, ಡೆಲ್ಟಾ ಸೇರಿದಂತೆ ಹೊಸ ವೈರಸ್‌ಗಳು ಕೇರಳದಲ್ಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದ್ದು, ಇದೀಗ ಕೇರಳದಲ್ಲಿ ಕಂಡುಬಂದಿರುವ ವೈರಸ್‌ ಪಟ್ಟಿಗೆ ಹೊಸದಾಗಿ ನ್ಯೂರೋ ವೈರಸ್‌ ಸೇರಿಕೊಂಡಿದೆ. ಇದರಿಂದ ಕೇರಳ-ಕರ್ನಾಟಕ ಗಡಿಯಲ್ಲಿರುವ ಗುಂಡ್ಲುಪೇಟೆ ತಾಲ್ಲೂಕಿನ ಗಡಿಯಂಚಿನ ಗ್ರಾಮ ಮತ್ತು ಹಾಡಿಗಳ ಜನರು ಯಾವುದೇ ಆತಂಕಕ್ಕೆ ಒಳಗಾಗದೇ, ವೈಯಕ್ತಿಕ ಸ್ವತ್ಛತೆಯನ್ನು ಪಾಲಿಸಬೇಕು.

ಇದನ್ನೂ ಓದಿ:- ಪ್ರಕೃತಿ ಸಂಪತ್ತು ಪ್ರೀತಿಸಿ: ಸುನಂದಾ ಬೆಹನ್‌ ಸಲಹೆ

ವೈರಸ್‌ ಗುಣಲಕ್ಷಣಗಳಾದ ವಾಂತಿ ಬೇಧಿ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರೀಕ್ಷಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಗಡಿಭಾಗದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ.

ಅಲ್ಲದೇ ಮೂಲೆಹೊಳೆ ಚೆಕ್‌ಪೋಸ್ಟ್‌ ಮೂಲಕ ಜಿಲ್ಲೆಗೆ ಪ್ರವೇಶಿಸುವ ಎಲ್ಲಾ ಪ್ರಯಾಣಿಕರನ್ನು ಆರೋಗ್ಯ ಕಾರ್ಯಕರ್ತರು ಪರೀಕ್ಷಿಸಿ, ವೈರಸ್‌ನ ಗುಣಲಕ್ಷಣಗಳಾದ ವಾಂತಿ ಬೇಧಿಯಾಗುತ್ತಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ, ಪ್ರಕರಣಗಳು ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುವ ಸಂಬಂಧ ಸೂಕ್ತ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತಿದೆ.

Advertisement

ಅಲ್ಲದೇ ಮಾರುಕಟ್ಟೆ, ಬೀದಿ ಬದಿ ವ್ಯಾಪಾರಗಳು ಹೆಚ್ಚಾಗಿ ಕಂಡುಬರುವ ಭಾಗಗಳಲ್ಲಿ ಮೊಬೈಲ್‌ ಯೂನಿಟ್‌ ನಿಯೋಜಿಸಿ, ಸಾರ್ವಜನಿಕರನ್ನು ತಪಾಸಣೆ ನಡೆಸಲಾಗುತ್ತಿದೆ. ಜಾಗೃತಿ ಕಾರ್ಯಕ್ರಮಗಳ ಮೂಲಕ ಆರೋಗ್ಯ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವಿಶ್ವೇಶ್ವರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next