ಮಾತು ಬರದ, ಕಿವಿ ಕೇಳದ, ಕಣ್ಣೇ ಕಾಣದ ಇಬ್ಬರು ಹುಡುಗರನ್ನಿಟ್ಟುಕೊಂಡು ‘ವಿರುಪಾ’ ಎಂಬ ಚಿತ್ರ ಮೂಡಿಬರುತ್ತಿದೆ ಎಂಬ ಸುದ್ದಿ ಗೊತ್ತೇ ಇದೆ. ಆ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಆ ಇಬ್ಬರು ಪ್ರತಿಭಾವಂತ ಹುಡುಗರನ್ನು ಗುರುತಿಸಿ, ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿರುವ ನಿರ್ದೇಶಕ ಪುನೀಕ್ ಶೆಟ್ಟಿ, “ವಿರುಪಾ’ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ರಿಯಲ್ ಬದುಕಲ್ಲಿ ಮಾತು ಬಾರದ, ಕಣ್ಣು ಕಾಣದ ಇಬ್ಬರು ಹುಡುಗರು ರೀಲ್ ನಲ್ಲೂ ಹಾಗೇ ಕಾಣಿಸಿಕೊಂಡು ನಟಿಸಿದ್ದಾರೆ ಎಂಬುದೇ ವಿಶೇಷ. ಈ ಚಿತ್ರ ಬಹುತೇಕ ಹಂಪಿಯಲ್ಲೇ ಚಿತ್ರೀಕರಣಗೊಂಡಿದೆ. ನಿರ್ದೇಶಕರು ಹಂಪಿ ಸುತ್ತಮುತ್ತಲಿನ ಮಕ್ಕಳನ್ನೇ ಆಯ್ಕೆ ಮಾಡಿಕೊಂಡು ಚಿತ್ರ ಮಾಡಿದ್ದಾರೆ.
“ವಿರುಪಾ’ದಲ್ಲಿ ಮೂವರು ಮಕ್ಕಳ ಕಥೆ ಇದೆ. ಹಾಗಾಗಿ ಇದು ಮಕ್ಕಳ ಚಿತ್ರ. ಚಿತ್ರಕ್ಕೆ ಡ್ಯಾಫ್ನಿ ನೀತು ಡಿಸೋಜ ನಿರ್ಮಾಪಕರು. ಅವರ ಸಹೋದರ ಡಿಕ್ಸನ್ ಜಾಕಿ ಡಿಸೋಜ ಕಾರ್ಯಕಾರಿ ನಿರ್ಮಾಪಕರು. ಇವರಿಗೆ ಇದು ಮೊದಲ ಚಿತ್ರ.
‘ವಿರುಪಾ’ ಎಂಬುದು ಮೂವರು ಮಕ್ಕಳ ಕಥೆ. ಒಬ್ಬನ ಹೆಸರು ವಿನ್ಸೆಂಟ್, ಇನ್ನೊಬ್ಬನ ಹೆಸರು ರುಸ್ತುಂ ಮತ್ತೂಬ್ಬ ಪಾಕ್ಷ. ಈ ಮೂವರ ಮೊದಲ ಅಕ್ಷರ ತೆಗೆದುಕೊಂಡು “ವಿರುಪಾ’ ಎಂಬ ಹೆಸರಿಡಲಾಗಿದೆ. ಸಿಟಿ ಮತ್ತು ಹಳ್ಳಿ ಬದುಕಿನ ನಡುವಿನ ವ್ಯತ್ಯಾಸ ಇಲ್ಲಿ ಹೇಳಲಾಗಿದೆ. ಮಕ್ಕಳ ಮನಸ್ಥಿತಿ ಕುರಿತ ವಿಷಯ ಇಲ್ಲಿದೆ. ಹಳ್ಳಿಯಲ್ಲಿರುವ ಹುಡುಗನೊಬ್ಬ ಸಿಟಿಗೆ ಹೋಗಿ, ಅಲ್ಲಿ ಇರಲಾರದೆ ಪುನಃ ಹಳ್ಳಿಗೆ ಬರುವ ಕಥೆ ಇಲ್ಲಿದೆ. ಹಳ್ಳಿ ಮತ್ತು ನಗರ ಸಂಸ್ಕೃತಿ ಅನಾವರಣಗೊಳ್ಳಲಿದೆ. ಮನಮಿಡಿಯುವ ಕಥೆಯೂ ಜೊತೆಗಿದೆಯಂತೆ.
ನಿರ್ಮಾಪಕಿ ಡ್ಯಾಫ್ನಿ ನೀತು ಡಿಸೋಜ ಅವರಿಗೆ ಒಂದೊಳ್ಳೆಯ ಸಿನಿಮಾ ಮಾಡುವ ಆಸೆ ಈ ಚಿತ್ರದ ಮೂಲಕ ಈಡೇರಿದೆಯಂತೆ. ಕಥೆ ಚೆನ್ನಾಗಿದ್ದ ಕಾರಣ, ಪ್ರತಿಭಾವಂತ ಮಕ್ಕಳು ಸಿಕ್ಕ ಹಿನ್ನೆಲೆಯಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ ನೀತು ಡಿಸೋಜ. ಇನ್ನು, ಕನ್ನಡದಲ್ಲಿ ಹೊಸಬಗೆಯ ಚಿತ್ರ ಮಾಡಿರುವ ಸಂತಸ ಅವರದು.
ಮೂಲತಃ ಭಟ್ಕಳದವರಾದ ಶಯಾಲ್ ಗೋಮ್ಸ್ ಒಬ್ಬ ಅಂಧ. ಚಿತ್ರದಲ್ಲೂ ಅಂಧನಾಗಿಯೇ ನಟಿಸಿದ್ದು, ನಟನೆ ಬಗ್ಗೆ ಎಲ್ಲವನ್ನೂ ಹೇಳಿಕೊಟ್ಟು ಕೆಲಸ ತೆಗೆಸಿರುವ ನಿರ್ದೇಶಕರು ಮತ್ತು ಚಿತ್ರತಂಡಕ್ಕೆ ಧನ್ಯವಾದ ಹೇಳಿದರು ಶಯಾಲ್. ಉಳಿದಂತೆ ಹೊಸಪೇಟೆಯ ವಿಷ್ಣು, ಇಲ್ಲಿ ಶಯಾಲ್ ಗೆಳೆಯನಾಗಿ ನಟಿಸಿದ್ದಾರೆ. ಚರಣ್ ನಾಯಕ್ ಅವರಿಗೂ ಇಲ್ಲಿ ಗಮನ ಸೆಳೆಯುವ ಪಾತ್ರವಿದೆ. ಚಿತ್ರದಲ್ಲಿ ಮಂಜುನಾಥ್ ಉಪನ್ಯಾಸಕ ಪಾತ್ರ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಪ್ರದೀಪ್ ಮಳ್ಳೂರು ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಅನಂತ್‌ರಾಜ್ ಅರಸ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಬೇಬಿ ಪ್ರಾಪ್ತಿ, ಡ್ಯಾನಿಯಲ್ ಲೆಸ್ಸಾಸರ್ಡ್, ಫೆಲ್ಸಿ ರಿತೀಶ್ ಸೇರಿದಂತೆ ಇನ್ನೂ ಅನೇಕರು ನಟಿಸಿದ್ದಾರೆ.