Advertisement

ಜ. 14, 15 ರಂದು ವರ್ಚುವಲ್‌ ಹರ ಜಾತ್ರೆ: ವಚನಾನಂದ ಶ್ರೀ

07:04 PM Dec 07, 2020 | Suhan S |

ದಾವಣಗೆರೆ: ಮುಂದಿನ ಜ. 14, 15ರಂದು ಎರಡು ದಿನಗಳ ಕಾಲ ಹರ ಜಾತ್ರೆಯನ್ನು ವರ್ಚುವಲ್‌ ಆಗಿ ಆಚರಿಸಲಾಗುವುದು ಎಂದು ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು.

Advertisement

ಭಾನುವಾರ ಹರಿಹರದ ಪಂಚಮಸಾಲಿ ಪೀಠದಲ್ಲಿ ನಡೆದ ಹರ ಜಾತ್ರೆಯ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕೋವಿಡ್‌ ಹಿನ್ನೆಲೆಯಲ್ಲಿ ಯಾವುದೇ ಸನ್ಮಾನ, ಗೌರವ ಸಮಾರಂಭ ಇರುವುದಿಲ್ಲ. ಬದಲಾಗಿ ಎರಡು ದಿನಗಳ ಕಾಲ ನಾಡಿನ ಪ್ರಮುಖ ಸಾಹಿತಿ, ಅನುಭಾವಿತರೊಂದಿಗೆ ಆತ್ಮನಿರ್ಭರ ಭಾರತಕ್ಕಾಗಿ ಕೃಷಿ-ಋಷಿ ಸಮಾವೇಶ, ಯುವ ಸಮಾವೇಶ ಮೂಲಕ ಚಿಂತನ-ಮಂಥನ ಹಾಗೂ ಪೀಠಾರೋಹಣದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಹರಿಹರದಲ್ಲಿ ನಡೆಯುವ ಸಮಾವೇಶಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಸರ್ಕಾರದ ನಿಯಾಮಾನುಸಾರ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮಾಡಲಾಗುತ್ತದೆ. ಇತಿಹಾಸ ಕೆದಕುವಬದಲು ಸಮಾಜಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ಮಾಡಬೇಕು. ಜಾತ್ರೆ ಯಶಸ್ಸಿಗೆ ತಮ್ಮ ತನು, ಮನ ಧನ ಸಹಾಯ ಸಹಕಾರ ನೀಡಬೇಕೆಂದರು.

ಧರ್ಮದರ್ಶಿ ಚಂದ್ರಶೇಖರ ಪೂಜಾರ ಮಾತನಾಡಿ, ಕೋವಿಡ್ ದಿಂದಾಗಿದಾಗಿ ವ್ಯಾಪಾರ-ವ್ಯವಹಾರ ಇಲ್ಲದೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಹಾಗಾಗಿ ಹರ ಜಾತ್ರೆಯನ್ನು ಸರಳವಾಗಿ ಮಾಡೋಣ. 2ಎ ಮತ್ತು ಓಬಿಸಿ ಸೌಲಭ್ಯ ಗಳ ಬಗ್ಗೆ ಹಕ್ಕೋತ್ತಾಯವನ್ನು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಮಾತನಾಡಿ, ಹರ ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಸಮಾಜ ಇಷ್ಟೊಂದು ದೊಡ್ಡದಾಗಿರುವ ಬಗ್ಗೆ ಗೊತ್ತಾಗಿದ್ದು ಹರ ಜಾತ್ರೆಯಿಂದ. ನಮ್ಮಲ್ಲಿರುವ ವೈಮನಸ್ಯ ಬಿಟ್ಟು ಸಂಘಟಿತರಾಗಿ ಮಾಡೋಣ ಎಂದರು.

Advertisement

ಧರ್ಮದರ್ಶಿಗಳಾದ ಪಿ.ಡಿ. ಶಿರೂರು, ವಿಧಾನ ಪರಿಷತ್‌ ಮಾಜಿ ಸದಸ್ಯ ಸೋಮಣ್ಣಬೇವಿನಮರದ, ಸಮಾಜದ ಹಿರಿಯರಾದ ಹೊಳೆಸಿರಿಗೆರೆಯ ನಾಗನಗೌಡರು, ಹರಿಹರ ತಾಲೂಕಿನ ಸಮಾಜದ ಅಧ್ಯಕ್ಷ ಗುಳದಳ್ಳಿ ಶೇಖರಪ್ಪ, ಚಿತ್ರದುರ್ಗದ ನಾಗರಾಜ, ಪರಮೇಶರಪ್ಪ, ಮಂಜುನಾಥ ಸ್ವಾಮಿ, ಮಹೇಶ ಹಾವೇರಿ, ಶಶಿಧರ ಪೂಜಾರ, ಮಲ್ಲಿಕಾರ್ಜುನ ಹಾವೇರಿ, ಸಿ.ಆರ್‌. ಬಳ್ಳಾರಿ, ಹರಿಹರ ನಗರಸಭಾ ಸದಸ್ಯ ಸಿದ್ಧೇಶ,ಯುವ ಘಟಕದ ಸಂಘಟನಾ ಕಾರ್ಯದರ್ಶಿ ಕರಿಬಸಪ್ಪ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹರ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಬಿ. ಲೋಕೇಶ, ಉಪಾಧ್ಯಕ್ಷರನ್ನಾಗಿ ವಸಂತ ಹುಲ್ಲತ್ತಿ ಅವರನ್ನು ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next