Advertisement

ವರ್ತಿಕಾ ಕಟಿಯಾರ್‌ಗೆ ಕ್ಲೀನ್‌ ಚಿಟ್‌

11:53 AM May 25, 2018 | Team Udayavani |

ಬೆಂಗಳೂರು: ಕಳೆದ ಮೂರು ವರ್ಷಗಳ ಹಿಂದೆ ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಜಯಂತಿ ಆಚರಣೆ ವೇಳೆ ಮಡಿಕೇರಿಯಲ್ಲಿ ಉಂಟಾದ ಗಲಭೆ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತ ಕುಟ್ಟಪ್ಪ ಸಾವಿನ ಪ್ರಕರಣದಲ್ಲಿ ಕೊಡಗಿನ ಅಂದಿನ ಎಸ್ಪಿ ವರ್ತಿಕಾ ಕಟಿಯಾರ್‌ ಕರ್ತವ್ಯ ಲೋಪ ಎಸಗಿಲ್ಲ ಎಂದು ಅಭಿಪ್ರಾಯಪಟ್ಟಿರುವ ಗೃಹ ಇಲಾಖೆ, ಅವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಕೈಬಿಟ್ಟಿದೆ.

Advertisement

2015ರ ನವೆಂಬರ್‌ 10ರಂದು ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಪರಿಸ್ಥಿತಿಯನ್ನು ನಿಭಾಯಿಸಲು ಎಸ್ಪಿ ವರ್ತಿಕಾ ಕಟಿಯಾರ್‌ ಜೀವದ ಹಂಗು ತೊರೆದು, ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಅಲ್ಲದೆ ಪರಿಸ್ಥಿತಿ ಹತೋಟಿಗೆ ತರಲು ಸಿಬ್ಬಂದಿಯನ್ನು ಬಳಸಿಕೊಂಡು ಪ್ರಾಮಾಣಿಕವಾಗಿ ಪ್ರಯತ್ನಿಸಿರುವುದು ದೃಢಪಟ್ಟಿರುವುದರಿಂದ ಕರ್ತವ್ಯದಲ್ಲಿ ಉದಾಸೀನತೆ, ಅಜಾಗರೂಕತೆ ಆರೋಪಗಳಿಂದ ಮುಕ್ತಗೊಳಿಸಬಹುದು ಎಂದು ತನಿಖೆಯಲ್ಲಿ “ಕ್ಲೀನ್‌ಚಿಟ್‌’ ನೀಡಿದ್ದು, ವರ್ತಿಕಾ ಕಟಿಯಾರ್‌ ವಿರುದ್ಧ ಇಲಾಖೆ ತನಿಖೆ ಸೂಕ್ತವಲ್ಲ ಎಂದು ಏ.24 ರಂದು ಆದೇಶ ಹೊರಡಿಸಿದೆ.

ಘಟನೆ ಸಂಬಂಧ ಸರ್ಕಾರದ ಸೂಚನೆ ಮೇರೆಗೆ ಮ್ಯಾಜಿಸ್ಟ್ರಿಯಲ್‌ ತನಿಖೆ ನಡೆಸಿ ಮೈಸೂರಿನ ಅಂದಿನ ಜಿಲ್ಲಾಧಿಕಾರಿ ಸಿ.ಶಿಖಾ ನೀಡಿದ್ದ ವರದಿಯನ್ನು ಗೃಹ ಇಲಾಖೆ ಅಂಗೀಕರಿಸಿ, ಇಲಾಖಾ ವಿಚಾರಣೆ ನಡೆಸುವ ಸಂಬಂಧ ಸಮಜಾಯಿಷಿ ನೀಡುವಂತೆ ವರ್ತಿಕಾ ಕಟಿಯಾರ್‌ಗೆ ಗೃಹ ಇಲಾಖೆ ನೋಟಿಸ್‌ ಜಾರಿಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ವರ್ತಿಕಾ, ಟಿಪ್ಪು ಜಯಂತಿ ಆಚರಣೆ ಸಂಬಂಧ ಮುಂಜಾಗ್ರತಾ ಕ್ರಮವಾಗಿ ವಿವಿಧ ಕೋಮುಗಳ ಮುಖಂಡರ ಜತೆ ಸಂಧಾನ ಸಭೆ ನಡೆಸಿದ್ದು, ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಂಡಿದ್ದಾರೆ. ಬೂದಿ ಮುಚ್ಚಿದ್ದ ಕೆಂಡದಂತಿದ್ದ ಪರಿಸ್ಥಿತಿಯನ್ನು ಹತೋಟಿಗೆ ತಂದು, 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಕುಟ್ಟಪ್ಪ ಹಾಗೂ ಸಾಹುಲ್‌ ಹಮೀದ್‌ ಪ್ರಕರಣಗಳ ಆರೋಪಿಗಳ ಬಂಧನ ಸೇರಿ ಇನ್ನಿತರ ವಿವರಗಳ ಸ್ಪಷ್ಟೀಕರಣವನ್ನು ಗೃಹ ಇಲಾಖೆ ಒಪ್ಪಿಕೊಂಡಿದ್ದು, ಅವರನ್ನು ದೋಷಮುಕ್ತಗೊಳಿಸಿದೆ. 

ಶಿಖಾ ವರದಿ ಒಪ್ಪಿದ್ದ ಸರ್ಕಾರ?: ಘಟನೆ ಬಗ್ಗೆ ತನಿಖೆ ನಡೆಸಿದ್ದ ಡಿಸಿ ಶಿಖಾ, ಕೊಡಗಿನ ಅಂದಿನ ಜಿಲ್ಲಾಧಿಕಾರಿ ಮೀರ್‌ ಅನಿಸ್‌ ಅಹ್ಮದ್‌ ಹಾಗೂ ಎಸ್ಪಿ ವರ್ತಿಕಾ ಕಟಿಯಾರ್‌, ಆಡಳಿತ ಹಾಗೂ ಪೊಲೀಸ್‌ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಕಾನೂನಿನ ಅಡಿಯಲ್ಲಿ ಬಳಸಲು ಅಧಿಕಾರಗಳಿದ್ದರೂ ಚಲಾಯಿಸದೇ ಉದಾಸೀನತೆ ತೋರಿ ವಿಫ‌ಲರಾಗಿದ್ದಾರೆ ಎಂಬ ಪ್ರಮುಖ ಅಂಶ ಸೇರಿದಂತೆ ಇನ್ನಿತರ ವಿವರಗಳನ್ನೊಳಗೊಂಡ ವರದಿ ಸಲ್ಲಿಸಿದ್ದರು.

Advertisement

ಈ ವರದಿಯನ್ನು ಅಂಗೀಕರಿಸಿದ್ದ ಸರ್ಕಾರ, ಕರ್ತವ್ಯ ನಿರ್ವಹಿಸಲು ವಿಫ‌ಲವಾದ ಜಿಲ್ಲಾಧಿಕಾರಿ ಮೀರ್‌ ಅನಿಸ್‌ ಅಹ್ಮದ್‌ ಹಾಗೂ ಎಸ್ಪಿ ವರ್ತಿಕಾ ಕಟಿಯಾರ್‌ ಅವರನ್ನು ನಾನ್‌ ಎಕ್ಸಿಕ್ಯೂಟೀವ್‌ ಹುದ್ದೆಗೆ ವರ್ಗಾಯಿಸಿತ್ತು. ಇಲಾಖಾ ತನಿಖೆ ನಡೆಸುವ ಸಲುವಾಗಿ ಕಾರಣ ಕೇಳಿ ಇಬ್ಬರಿಗೂ ನೋಟಿಸ್‌ ಜಾರಿಗೊಳಿಸಿತ್ತು. ದಕ್ಷಿಣ ವಲಯದ ಅಂದಿನ ಡಿಜಿಪಿ ನವೆಂಬರ್‌ 9ರಂದು ಕೇಂದ್ರಸ್ಥಾನದಲ್ಲಿ ತಂಗದಿರುವ ಬಗ್ಗೆ ಸ್ಪಷ್ಟೀಕರಣ ಕೇಳುವ ಬಗ್ಗೆ ನಿರ್ಧಾರ ಕೈಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next