Advertisement

ಪ್ರಣಾಳಿಕೆಗಳೇ ಮುಖ್ಯವಾಗ್ತಿರೋದು ದುರಂತ

06:34 AM Jan 27, 2019 | |

ಬ್ಯಾಡಗಿ: ಸಂವಿಧಾನದ ಆಶಯಗಳನ್ನು ಈಡೇರಿಸುವ ಮೂಲಕ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಚಿಂತನೆಗಳನ್ನು ಮುಖ್ಯ ವಾಹಿನಿಗೆ ತರಬೇಕಾಗಿದೆ. ಆದರೆ, ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಆಡಳಿತಾರೂಢ ಸರ್ಕಾರಗಳಿಗೆ ಪಕ್ಷದ ಪ್ರಣಾಳಿಕೆಗಳು ಮುಖ್ಯವಾಗುತ್ತಿರುವುದು ದುರಂತದ ಸಂಗತಿ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಖೇದ ವ್ಯಕ್ತಪಡಿಸಿದರು.

Advertisement

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಧರ್ಮ, ಜಾತಿ, ಜನಾಂಗದ ಜನರಿರುವ ದೇಶದಲ್ಲಿ ಶಾಸನಬದ್ಧ ಗಣತಂತ್ರ ವ್ಯವಸ್ಥೆ ಒಪ್ಪಿಕೊಂಡಿರುವ ನಾವು, ಮೂಲಭೂತ ಹಕ್ಕುಗಳಿಗಾಗಿ ಇಂದಿಗೂ ಹೋರಾಟ ನಡೆಸುತ್ತಿರುವುದು ವಿಷಾದಕರ ಸಂಗತಿ. ರಾಷ್ಟ್ರೀಯತೆ ಜೊತೆ ದೇಶದ ಸರ್ವಾಂಗೀಣ ಅಭಿವೃದ್ಧಿ ಸರ್ಕಾರಗಳ ಪ್ರಥಮ ಆದ್ಯತೆಯಾಗಬೇಕು ಎಂದರು.

ದೇಶದಲ್ಲಿ ಶೈಕ್ಷಣಿಕ ಕ್ರಾಂತಿಯಾಗದೇ ಬದಲಾವಣೆ ಸಾಧ್ಯವಿಲ್ಲ ಎನ್ನುವ ಅಂಬೇಡ್ಕರ್‌ ಅವರ ಮಾತು ಅಕ್ಷರಶಃ ಸತ್ಯ. ಅಂತಹುದಕ್ಕೆ ಸೂಕ್ತ ಪ್ರೋತ್ಸಾಹ ಸಿಗದ ಕಾರಣ ದೇಶದೆಲ್ಲೆಡೆ ಇಂದಿಗೂ ಭಯೋತ್ಪಾದನೆ, ಭ್ರಷ್ಟಾಚಾರ, ನಿರುದ್ಯೋಗ ಇನ್ನಿತರ ಜ್ವಲಂತ ಸಮಸ್ಯೆಗಳು ಜೀವಂತವಾಗಿವೆ. ಸರ್ಕಾರಗಳು ಬದಲಾಗಬಹುದು. ಆದರೆ, ಭಾರತದಲ್ಲಿರುವ ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮೆಲ್ಲರಲ್ಲಿಯೂ ಮೂಡಬೇಕಾಗಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿರುವ ದೇಶವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲುಗಳಲ್ಲಿ ನಿಲ್ಲುವಂತೆ ಮಾಡಲು ಯುವ ಜನಾಂಗ ಮನಸ್ಸು ಮಾಡಬೇಕಾಗಿದೆ ಎಂದರು.

ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ವೈಚಾರಿಕ ಮತ್ತು ವೈಜ್ಞಾನಿಕ ಕಾಲಘಟ್ಟದಲ್ಲಿಯೂ ದೇಶವು ಇಂದು ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಡಾ| ಅಂಬೇಡ್ಕರ್‌ ಅವರು ಭಾರತ ಹೀಗೆಯೇ ಇರಬೇಕು ಎಂಬುದರ ಕುರಿತು ಲಿಖೀತ ರೂಪದ ಸಂವಿಧಾನ ನೀಡಿದ್ದಾರೆ. ಅದರನ್ವಯ ನಮಗೆ ನೀಡಿರುವ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಮಗೆ ದೊರೆತ ಸ್ವಾತಂತ್ರ ಋಣಾತ್ಮಕ ಚಿಂತನೆಗಳಿಗೆ ಬಳಕೆಯಾಗಬೇಕಿದೆ. ದೇಶಕ್ಕೆ ಒಳ್ಳೆಯದನ್ನು ಮಾಡುವ ಕುರಿತು ಚರ್ಚೆಗಳು ನಡೆಯಬೇಕಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ರಾಜಕಾರಣದ ಒಳಸುಳಿಗೆ ಸಿಲುಕಿದ ಭಾರತೀಯರು ಸ್ವಾತಂತ್ರ್ಯ ದೊರೆತು ಏಳು ದಶಕ ಕಳೆದರೂ ಇಂದಿಗೂ ಯಾವುದೇ ಸಮಸ್ಯೆಗಳಿಂದ ಮುಕ್ತವಾಗಲು ಸಾಧ್ಯವಾಗಿಲ್ಲ. ಈ ನಿಟ್ಟಿ ನಲ್ಲಿ ಭಾರತವನ್ನು ವಿಶ್ವಕ್ಕೆ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ನಿರ್ಧಾರಕ್ಕೆ ಪಕ್ಷಭೇದ ಮರೆತು ಸಂಘಟಿತರಾಗೋಣ ಎಂದರು.

Advertisement

ಇದಕ್ಕೂ ಮುನ್ನ ಗೌರವರಕ್ಷೆ ಸ್ವೀಕರಿಸಿ ಬಳಿಕ ಗಣರಾಜ್ಯೋತ್ಸವ ಸಂದೇಶವನ್ನು ತಹಶೀಲ್ದಾರ್‌ ಗುರುಬಸವರಾಜ ತಿಳಿಸಿದರು. ವೇದಿಕೆಯಲ್ಲಿ ಜಿಪಂ ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಶಿವಯೋಗಿ ಶಿರೂರ, ರಾಜ್ಯ ಸಮಿತಿ ನಿರ್ದೇಶಕ ಸುರೇಶ ಯತ್ನಳ್ಳಿ, ಪುರಸಭೆ ಉಪಾಧ್ಯಕ್ಷೆ ದಾಕ್ಷಾಯಣಮ್ಮ ಪಾಟೀಲ, ಸದಸ್ಯರಾದ ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ಶಾಂತಮ್ಮ ಬೇವಿನಮಟ್ಟಿ, ರೋಹಿಣಿ ಹುಣಸೀಮರದ, ನಾರಾಯಣಪ್ಪ ಕರ್ನೂಲ, ದುರ್ಗೇಶ ಗೋಣೆಮ್ಮನವರ, ಎಂ.ಆರ್‌.ಭದ್ರಗೌಡ್ರ, ನಜೀರ್‌ಅಹ್ಮದ್‌ ಶೇಖ್‌, ಬಸವರಾಜ ಹಂಜಿ, ಮಂಜುನಾಥ ಬೋವಿ, ಪ್ರಶಾಂತ್‌ ಯಾದ್ವಾಡ, ಯಮನೂರಪ್ಪ ಉಜನಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಪ್ರದರ್ಶನ ಜನಮನಸೂರೆಗೊಂಡವು.

ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಸೇವಾದಳದ ವಿದ್ಯಾರ್ಥಿಗಳಿಂದ ಅಕರ್ಷಕ ಪಥ ಸಂಚಲನ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಮಂಜುನಾಥಸ್ವಾಮಿ ಸ್ವಾಗತಿಸಿದರು. ಬಿ.ಎಫ್‌.ದೊಡ್ಮನಿ ನಿರೂಪಿಸಿದರು. ಬಸವರಾಜ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next