ಧಾರವಾಡ: ವೈದ್ಯಕೀಯ ಕ್ಷೇತ್ರದಲ್ಲಿ ಹಣ ಗಳಿಕೆಗಿಂತ ಸೇವಾ ಮನೋಭಾವವೇ ಮುಖ್ಯ ಎಂದು ಎಸ್‌ಡಿಎಂ ವಿವಿ ಕುಲಪತಿ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ನಗರದ ಸತ್ತೂರಿನ ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್‌ಡಿಎಂ ದಂತ ವಿಜ್ಞಾನ ಮಹಾವಿದ್ಯಾಲಯದ 30ನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. ಪದವಿಯ ಅವಧಿಯಲ್ಲಿ ಗಳಿಸಿದ ವಿದ್ಯೆಯನ್ನು ರೋಗಿಗಳನ್ನು ಉಪಚರಿಸಲು ಬಳಸಬೇಕು. ಇದೇ ನೀವು ಕಲಿತ ದಂತ ಮಹಾವಿದ್ಯಾಲಯಕ್ಕೆ ನೀಡುವ ಕೊಡುಗೆ ಎಂದರಲ್ಲದೇ ಸೇವಾ ಮನೋಭಾವ ಉಳ್ಳವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು ಎಂದರು.
ಶಿಕÒಣ ಪಡೆದ ಬಳಿಕ ಸಿಗುವ ಅನುಭವದಿಂದಲೇ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ ಎಂದರು. ಕ್ಷೇತ್ರ ಯಾವುದೇ ಇರಲಿ. ಗುಣಮಟ್ಟ ಹೆಚ್ಚಿದಂತೆ ಜವಾಬ್ದಾರಿ ಜತೆ ಸ್ಪರ್ಧೆಯೂ ಇರಲಿದೆ. ಹೀಗಾಗಿ ಸೇವಾ ಅವಧಿಯಲ್ಲಿ ಗುಣಮಟ್ಟದ ಸೇವೆ ನೀಡುವ ಮೂಲಕ ಶಿಕ್ಷಣ ಪಡೆದ ಸಂಸ್ಥೆ-ಪಾಲಕರಿಗೆ ಉತ್ತಮ ಹೆಸರು ತರುವ ಕೆಲಸ ಮಾಡಬೇಕು. ಅದರಲ್ಲೂ ಜೀವನದಲ್ಲಿ ಯಶಸ್ಸಿಗಿಂತ ಆತ್ಮತೃಪ್ತಿ ಮುಖ್ಯ ಎಂಬುದನ್ನರಿತು ಮುನ್ನಡೆಯಬೇಕು ಎಂದರು.
ಇದೇ ಸಂದರ್ಭದದಲ್ಲಿ 100 ಪದವೀಧರರಿಗೆ ಹಾಗೂ 40 ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು. ಉಪ ಕುಲಪತಿ ಡಾ|ನಿರಂಜನಕುಮಾರ, ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|ಬಲರಾಮ ನಾಯಕ, ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ವಿ.ಜೀವಂಧರಕುಮಾರ, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಹಿರಿಯ ಪ್ರಸೂತಿ ವೈದ್ಯೆ ಡಾ|ರತ್ನ ಮಾಲಾ ದೇಸಾಯಿ, ಪದ್ಮಲತಾ ನಿರಂಜನಕುಮಾರ, ಯು.ಎಸ್.ದಿನೇಶ ಪಾಲ್ಗೊಂಡಿದ್ದರು.
ಪಂಚಮಿ ಸ್ವಾಗತ ಗೀತೆ ಹಾಡಿದರು. ಡಾ|ಬಲರಾಮ ನಾಯ್ಕ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಡಾ|ಗೀತಾ ಹಿರೇಮಠ, ಡಾ|ಪ್ರಗತಿ, ಡಾ|ಪ್ರಿಯಾ, ಡಾ|ವೆಂಕಟೇಶ ಪರಿಚಯಿಸಿದರು. ಡಾ|ರೋಸಲೀನ್ ಪ್ರಮಾಣ ವಚನ ಬೋಧಿಸಿದರು. ಡಾ|ಐಶ್ವರ್ಯ ನಾಯ್ಕ ನಿರೂಪಿಸಿದರು. ಡಾ|ಸ್ವಾತಿ ಶೆಟ್ಟಿ ವಂದಿಸಿದರು.