ಕಾರ್ಕಳ: ಧರ್ಮ, ಆಚರಣೆಗಳಿಗೆ ಸಂಬಂಧಿಸಿ ನಾವು ಸಮಾಜದಲ್ಲಿ ಸಂಕೋಚಪಡುತ್ತೇವೆ. ನಮ್ಮ ದೇವರ
ಬಗ್ಗೆ ಹೇಳಲು, ಆಚಾರ ವಿಚಾರಗಳ ರಕ್ಷಣೆ ಮಾಡಬೇಕಾದರೆ ಇರಿಸು ಮುರಿಸು ಅನುಭವಿಸುತ್ತೇವೆ. ಮೂಢನಂಬಿಕೆ, ಹಳೇ ಸಂಪ್ರದಾಯ ಅಥವಾ ಆಧುನಿಕತೆಯಿಂದ ಹಿಂದೆ ಇದ್ದೇವೆ ಅನ್ನುವ ಯೋಚನೆಗಳೂ ಬರುತ್ತವೆ. ಆದರೆ ಮುನಿ ಮಹಾರಾಜರ ಚಾತುರ್ಮಾಸ್ಯದಿಂದಾಗಿ ಅವೆಲ್ಲವೂ ದೂರವಾಗಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಪರಮಪೂಜ್ಯ 108 ಶ್ರೀ ವೀರಸಾಗರ ಮುನಿಮಹಾರಾಜರ ಚಾತುರ್ಮಾಸ್ಯ ಸಮಿತಿ ಆಶ್ರಯದಲ್ಲಿ ಮುನಿಶ್ರೀ ವೀರಸಾಗರ ಮಹಾರಾಜರಿಗೆ ಶಾಸ್ತ್ರದಾನ, ಪಿಂಛಿ ಪ್ರದಾನ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯನ್ನು ರವಿವಾರ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ದ.ಕ. ಜಿಲ್ಲೆಯಲ್ಲಿ ಜೈನ ಶ್ರಾವಕ ಶ್ರಾವಕಿಯರಿದ್ದರೂ ಮುನಿಗಳ ಸೇವೆ ಮಾಡುವುದಿಲ್ಲ ಎನ್ನುವ ಅಪವಾದವಿತ್ತು. ಚಾತುರ್ಮಾಸ್ಯದಿಂದಾಗಿ ಅದು ತಪ್ಪಿದೆ. ಚಾತುರ್ಮಾಸ್ಯ ಸಂದರ್ಭವನ್ನು ಶಾಸನದ ಮೂಲಕ ದಾಖಲಿಸಬೇಕು. ಸದ್ಯ ಶಾಸನ ರಚನೆ ಕಡಿಮೆಯಾಗಿದೆ ಎಂದ ಅವರು, ಧಾರ್ಮಿಕವಾಗಿ ನಾವು ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಎಂದರು.
ಹಿರಿಯ ವಿದ್ವಾಂಸ ಪ್ರೊ| ಹಂಪ ನಾಗರಾಜಯ್ಯ ಮಾತನಾಡಿ, ಪಿಂಛಿ ಅಹಿಂಸೆಯ ಪ್ರತೀಕ. ಜಾಣ್ಮೆಗಿಂತ ತಾಳ್ಮೆ ಮುಖ್ಯ ಎಂದು ಸಮಾಜಕ್ಕೆ ತಿಳಿಸಿದ್ದು ಜೈನ ಧರ್ಮದ ಹಿರಿಮೆ. ತಾಳ್ಮೆಗೆ ಸಂಬಂಧಿಸಿದಂತೆ ಅನೇಕ ಅಗ್ನಿಪರೀಕ್ಷೆಗಳು ಧರ್ಮಕ್ಕೆ ಎದುರಾಗಿವೆ. ಆದರೆ ಭಟ್ಟಾರಕರ ಮಾರ್ಗದರ್ಶನದಲ್ಲಿ ಅವನ್ನೆಲ್ಲ ಗೆದ್ದು ಬಂದಿದ್ದೇವೆ ಎಂದರು.
ಸಮಾರಂಭದಲ್ಲಿ ಬ್ರಹ್ಮಚಾರ್ಯರಿಗೆ ವಸ್ತ್ರದಾನ, ಸೇವಾ ಕತೃಗಳು, ದಾನಿಗಳು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ನಡೆಯಿತು. ಕಾರ್ಕಳ ಜೈನಮಠದ ಶ್ರೀ ಲಲಿತ ಕೀರ್ತೀ ಭಟ್ಟಾರಕ ಪಟ್ಟಾಚಾಯವರ್ಯ ಮಹಾ ಸ್ವಾಮೀಜಿ, ಮೂಡಬಿದಿರೆಯ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಸೋಂದಾ ಜೈನಮಠದ ಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯ ಮಹಾ ಸ್ವಾಮೀಜಿ, ನರಸಿಂಹರಾಜಪುರದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಬ್ರಹ್ಮಚಾರಿ ಅಶೋಕ್ ಜೈನ್, ಹೇಮಾವತಿ ವೀ. ಹೆಗ್ಗಡೆ, ಸುಪ್ರಿಯಾ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಎಂ.ಕೆ. ವಿಜಯಕುಮಾರ್, ಶಶಿಕಲಾ ಹೆಗ್ಡೆ ಉಪಸ್ಥಿತರಿದ್ದರು. ಅಂಡಾರು ಮಹಾವೀರ ಹೆಗ್ಡೆಸ್ವಾಗತಿಸಿ, ನವಿತಾ ಜೈನ್ ವಂದಿಸಿದರು.