ಗುಂಡ್ಲುಪೇಟೆ: ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರಗೊಳಿಸಿದ ಶ್ರೀ ಮೂಲಸ್ಥಾನೇಶ್ವರ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮನ್ನು ನಾವು ಉದ್ದರಿಸಿಕೊಂಡರೆ ಮಾತ್ರ ಲೋಕ ವನ್ನು ಉದ್ದರಿಸಲು ಸಾಧ್ಯ. ಗ್ರಾಮೀಣ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗು ವುದರಿಂದ ಸ್ವಸಹಾಯ ಸಂಘಗಳ ಮೂಲಕ ಪ್ರತಿ ಯೊಬ್ಬರನ್ನೂ ಸಬಲರನ್ನಾಗಿಸಿ ಸಮುದಾಯವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು.
ದುಶ್ಚಟಗಳನ್ನು ಬಿಡಿಸುವ ಮೂಲಕ ಸದೃಢರನಾಗಿಸಲಾಗುತ್ತಿದೆ. ಸಂಕಷ್ಟಕ್ಕೆ ಸಿಲುಕಿದವರನ್ನು ದೂರವಿಡುವಂತೆ ಹಳೆಯ ದೇವಸ್ಥಾನಗಳನ್ನು ಪಾಳು ಬಿಡಲಾಗುತ್ತಿದೆ. ಆದ್ದರಿಂದಲೇ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಈವರೆಗೆ ರಾಜ್ಯಾದ್ಯಂತ 250 ಪುರಾತನ ದೇವಾಲಯಗಳನ್ನು ಅವುಗಳ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಪುನರ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ದೇವಾಲಯಗಳು ಸಾಮಾಜಿಕ ಶಕ್ತಿ ಕೇಂದ್ರ ಗಳಾಗಿವೆ. ಅವುಗಳ ಉಳಿವಿನಿಂದ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ಶ್ರದ್ಧಾಕೇಂದ್ರಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. ತಾಲೂಕಿನಲ್ಲಿ 28 ಸಾವಿರ, ಜಿಲ್ಲೆಯಲ್ಲಿ 1 ಲಕ್ಷ 31 ಸಾವಿರ ಸ್ವಸಹಾಯ ಸದಸ್ಯರಿದ್ದು, ಇವರಿಂದ ತಲಾ 10 ರೂಪಾಯಿಯಂತೆ 210 ಕೋಟಿ ರೂ. ಹಣ ಸಣ್ಣ ಉಳಿತಾಯ ಮಾಡಿಸಲಾಗಿದೆ. 300 ಕೋಟಿ ಹಣ ವನ್ನು ಅವಶ್ಯಕತೆ ಇರುವವರಿಗೆ ನೆರವು ನೀಡಲಾಗಿದೆ. ಈ ಯಶಸ್ಸಿಗೆ ಸಿಬ್ಬಂದಿಗಳ ಮತ್ತು ಸದಸ್ಯರ ಸೇವಾ ಮನೋಭಾವನೆ ಕಾರಣವಾಗಿದೆ ಎಂದರು.
ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯು ಸಾರ್ವಜನಿಕರ ಭಕ್ತಿಭಾವನೆಗಳಿಗೆ ಗೌರವ ನೀಡಿ ಹಳೆಯ ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಿದ್ದಾರೆ.
ಸ್ವಸಹಾಯ ಸಂಘಗಳ ಮೂಲಕ ಸಮಾಜದ ದುರ್ಬಲರ ಅಭಿವೃದ್ಧಿಗೆ ನೆರವಾಗುವ ಮೂಲಕ ಸರ್ಕಾರಗಳಿಗೆ ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರವಿಶಂಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಮಹೇಶ್, ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್, ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಮಲ್ಲದೇವರು ಗ್ರಾಮಸ್ಥರು ಭಾಗವಹಿಸಿದ್ದರು.