ಲಂಡನ್: ಇಂಗ್ಲೆಂಡ್ ಮತ್ತು ಭಾರತದ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಸೋಮವಾರ ಅಂತ್ಯವಾಗಿದೆ. ಭಾರತ ತಂಡ 157 ರನ್ ಗಳ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಅಂತಿಮ ದಿನದಾಟದಲ್ಲಿ ಭಾರತೀಯ ಬೌಲರ್ ಗಳು ಇಂಗ್ಲೆಂಡ್ ಆಟಗಾರರ ಮೇಲೆ ಸವಾರಿ ಮಾಡಿದರು. ಮೊದಲ ವಿಕೆಟ್ ಗೆ ರೋರಿ ಬರ್ನ್ಸ್ ಮತ್ತು ಹಮೀದ್ ಶತಕದ ಜೊತೆಯಾಟವಾಡಿದ್ದರು. ಇವರನ್ನು ಶಾರ್ದೂಲ್ ಠಾಕೂರ್ ಬೇರ್ಪಡಿಸಿದ ಬಳಿಕ ಭಾರತ ಸತತ ವಿಕೆಟ್ ಬೇಟೆಯಾಡಿತು. ಇಂಗ್ಲೆಂಡ್ ತಂಡ ಕೇವಲ 210 ರನ್ ಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 157 ರನ್ ಗಳ ಅಂತರದ ಸೋಲನುಭವಿಸಿತು.
ಇದನ್ನೂ ಓದಿ:ಓವಲ್ ಸುವರ್ಣ ಸಂಭ್ರಮಕ್ಕೆ ಗೆಲುವಿನ ಕಾಣಿಕೆ
ಬೌಲಿಂಗ್ ವಿಭಾಗದಲ್ಲಿ ಕಮ್ ಬ್ಯಾಕ್ ಮ್ಯಾಚ್ ಆಡಿದ ಉಮೇಶ್ ಯಾದವ್ ಮೂರು ವಿಕೆಟ್ ಕಿತ್ತರೆ, ಜಸ್ಪ್ರೀತ್ ಬುಮ್ರಾ, ರವಿ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು.
ಈ ಗೆಲುವಿನೊಂದಿಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಏರಿದೆ. ಎರಡು ಗೆಲುವಿನೊಂದಿಗೆ 26 ಅಂಕ ಗಳಿಸಿರುವ ಟೀಂ ಇಂಡಿಯಾ 54.17 ಶೇ ಅಂಕಗಳನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿ ಪಾಕಿಸ್ಥಾನವಿದ್ದರೆ, ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ತಂಡವಿದೆ. ಇಂಗ್ಲೆಂಡ್ ತಂಡ 29.17 % ನೊಂದಿಗೆ ಕೊನೆಯ ಅಂದರೆ ನಾಲ್ಕನೇ ಸ್ಥಾನದಲ್ಲಿದೆ.