Advertisement

ವಿರಾಟ್@30;ಇವು ದಾಖಲೆಗಳ ಸರದಾರ ಕೊಹ್ಲಿಯ ಅವಿಸ್ಮರಣೀಯ ಇನ್ನಿಂಗ್ಸ್

06:21 PM Nov 05, 2018 | Team Udayavani |

ಆಧುನಿಕ ಕ್ರಿಕೆಟ್ ನ ಚಾಂಪಿಯನ್ ಆಟಗಾರ, ದಾಖಲೆಗಳ ಸರದಾರ, ವಿಶ್ವಕ್ರಿಕೆಟ್ ತನ್ನತ್ತ ಬೆರಗು ಕಣ್ಣುಗಳಿಂದ ನೋಡುವಂತೆ ಮಾಡಿದ ಡಿಲ್ಲಿ ಡ್ಯಾಶರ್, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಈಗ 30ರ ಸಂಭ್ರಮ. ಈ ಸಂದರ್ಭದಲ್ಲಿ ಕಿಂಗ್ ಕೊಹ್ಲಿಯ ಏಕದಿನ ಪಂದ್ಯಗಳ ಚೇಸಿಂಗ್ ಸಮಯದ ಕೆಲವು ಅವಿಸ್ಮರಣೀಯ ಇನ್ನಿಂಗ್ಸ್ ಗಳ ತುಣುಕು ಇಲ್ಲಿವೆ.
  
ಇಂಗ್ಲೆಂಡ್ ವಿರುದ್ದ 122 ರನ್
2017 ರ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು. ಪುಣೆಯಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಂಗ್ಲರು, ನಿಗದಿತ 50  ಓವರ್ ಗಳಲ್ಲಿ ಬರೋಬ್ಬರಿ  350 ರನ್ ರಾಶಿ ಹಾಕಿದ್ದರು. ಈ ರನ್ ರಾಶಿಯನ್ನು ಬೆನ್ನತ್ತಿದ ಭಾರತ ತಂಡ 12 ಓವರ್ ಕಳೆಯುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು 63  ರನ್ ಗಳಿಸಿ ಸಂಕಷ್ಟದಲ್ಲಿತ್ತು. ಈ ವೇಳೆ ಕ್ರೀಸ್ ಆಕ್ರಮಿಸಿಕೊಂಡ ಕೊಹ್ಲಿ ಕೇದಾರ್ ಜಾದವ್ ಜೊತೆ ಸೇರಿ ದ್ವಿಶತಕದ ಜೊತೆಯಾಟವಾಡಿ ಇನ್ನೂ 10  ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ವಿರಾಟ್ ಕೊಹ್ಲಿ 105  ಎಸೆತಗಳಲ್ಲಿ122 ರನ್ ಬಾರಿಸಿದ್ದರು. ಕೊಹ್ಲಿಯ ವೃತ್ತಿ ಜೀವನದ ಅದ್ಭುತ ಇನ್ನಿಂಗ್ಸ್ ಗಳಲ್ಲಿ ಇದೂ ಒಂದು.

Advertisement

ನ್ಯೂಜಿಲ್ಯಾಂಡ್ ವಿರುದ್ದ 154 ರನ್ ಗಳ ಇನ್ನಿಂಗ್ಸ್


ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ನಲ್ಲಿ ನಡೆದಿದ್ದ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ ಈ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಕಿವೀಸ್ ನ 285  ರನ್ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 41  ರನ್ ಗೆ ಆರಂಭಿಕರಿಬ್ಬರನ್ನೂ ಕಳೇದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ವಿರಾಟ್ ಕೊಹ್ಲಿ ತಮ್ಮ ವಿರಾಟ್ ರೂಪವನ್ನು ತೋರಿಸಿದ್ದರು. ನಾಯಕರಾಗಿದ್ದ ಧೋನಿ ಜೊತೆ ಸೇರಿಕೊಂಡು ಅದ್ಭುತ ಇನ್ನಿಂಗ್ಸ್ ಒಂದನ್ನು ಕಟ್ಟಿದ್ದರು. ಕೇವಲ 134 ಏಸೆತಗಳನ್ನು ಎದುರಿಸಿದ ಕೊಹ್ಲಿ 154 ರನ್ ಗಳನ್ನು ಬಾರಿಸಿದ್ದರು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡಾ ತಮ್ಮ ಮಡಿಲಿಗೆ ಹಾಕಿಕೊಂಡರು .

ಆಸೀಸ್ ವಿರುದ್ಧ 115 ರನ್ ಗಳ ಆಕ್ರಮಣಕಾರಿ ಇನ್ನಿಂಗ್ಸ್
ಅದು ಆಸ್ಟ್ರೇಲಿಯಾ  ವಿರುದ್ಧ 2013ರ ಅಕ್ಟೋಬರ್  30ರಂದು ನಡೆದಿದ್ದ ಏಕದಿನ ಪಂದ್ಯ. ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ರನ್ ಹೊಳೆಯೆ ಹರಿದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಆಸೀಸ್ ತಂಡದ ನಾಯಕ ಜಾರ್ಜ್ ಬೈಲಿ (156 ರನ್), ಶೇನ್ ವಾಟ್ಸನ್ (102ರನ್) ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಆರು ವಿಕೆಟ್ ನಷ್ಟಕ್ಕೆ 350 ರನ್ ಪೇರಿಸಿತ್ತು. ಬೃಹತ್ ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆದಿತ್ತು. ಆದರೆ ಕೊನೆಯ 20  ಓವರ್ ಗಳಲ್ಲಿ 180 ರನ್ ಗಳಿಸಬೇಲಾದ ತಂಡವನ್ನು ಆಧರಿಸಿದ್ದು ಕೊಹ್ಲಿಯ ಅಬ್ಬರದ ಶತಕ. ವಿರಾಟ್ ಕೇವಲ 66  ಎಸೆತಗಳಲ್ಲಿ115 ರನ್ ಚಚ್ಚಿ ಬಿಸಾಕಿದ್ದರು. 18 ಬೌಂಡರಿ ಮತ್ತು 1 ಸಿಕ್ಸರ್ ಈ ಇನ್ನಿಂಗ್ಸ್ ನಲ್ಲಿತ್ತು. ಕೊನೆಗೆ ಈ ಪಂದ್ಯವನ್ನು ಭಾರತ ಮೂರು ಎಸೆತ ಬಾಕಿ ಇರುವಂತೆ ಜಯ ಗಳಿಸಿತ್ತು.

ಪಾಕಿಸ್ತಾನ ವಿರುದ್ಧ183 ರನ್
2012ರ ಏಶ್ಯಾ ಕಪ್ ಪಂದ್ಯಾವಳಿಯ ಈ ಪಂದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಎಂದೂ ಮರೆಯುವಂತದಲ್ಲ. ಬಾಂಗ್ಲಾದೇಶದ ಢಾಕಾ ಶೇರ್ ಏ ಬಾಂಗ್ಲಾ ಕ್ರಿಕೆಟ್ ಮೈದಾನದಲ್ಲಿ ಬದ್ಧ ವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಇತಿಹಾಸ ಸೃಷ್ಠಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ಗಳಿಸಿದ್ದು ಬರೋಬ್ಬರಿ 329 ರನ್ ಗಳು. ಇನ್ನೇನೂ ಈ ಪಂದ್ಯವನ್ನು ಗೆದ್ದೇ  ಬಿಟ್ಟೆವು ಎಂದು ಬೀಗುತ್ತಿದ್ದ ಪಾಕಿಸ್ತಾನದ ಆಲೋಚನೆಯನ್ನು ಬುಡಮೇಲು ಮಾಡಿದ್ದು ವಿರಾಟ್ ಕೊಹ್ಲಿಯ ಅಸಾಧಾರಣ ಬ್ಯಾಟಿಂಗ್.

ಮೊದಲ ಓವರ್ ನಲ್ಲೆ ಗಂಭೀರ್ ವಿಕೆಟ್ ಪತನವಾದ ಕಾರಣ ಕ್ರೀಸ್ ಗೆ ಬಂದ ವಿರಾಟ್ ಸಚಿನ್ ತೆಂಡೂಲ್ಕರ್ ಜೊತೆಗೂಡಿ ಒಂದು ಅವಿಸ್ಮರಣೀಯ ಇನ್ನಿಂಗ್ಸ್ ಕಟ್ಟಿದರು. 148 ಎಸೆತ ಎದುರಿಸಿದ ಕೊಹ್ಲಿ ತಮ್ಮ ಜೀವನ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿದರು. 183 ರನ್ ಗಳ ಈ ಅಪೂರ್ವ ಇನ್ನಿಂಗ್ಸ್ ವೇಳೆ 22  ಬೌಂಡರಿ ಎರಡು ಸಿಕ್ಸರ್ ಬಾರಿಸಿದ್ದರು.  ಈ ಪಂದ್ಯವನ್ನು ಭಾರತ ಇನ್ನೂ 13 ಎಸೆತ ಬಾಕಿ ಇರುವಂತೆಯೇ 6  ವಿಕೆಟ್ ಅಂತರದಿಂದ ಗೆಲುವಿನ ನಗೆ ಬೀರಿತ್ತು.

Advertisement

ಹೋಬಾರ್ಟ್ನಲ್ಲಿ 133 ರನ್ ಹೊಡೆದ ವಿರಾಟ್


2013ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಕಾಮನ್ ವೆಲ್ತ್ ಬ್ಯಾಂಕ್ ತ್ರಿಕೋನ ಸರಣಿಯ ಪಂದ್ಯವಿದು. ಈ ಪಂದ್ಯ ವಿರಾಟ್ ಕೊಹ್ಲಿ ವೃತ್ತಿ ಜೀವನದ ಅತ್ಯಂತ ಶ್ರೇಷ್ಠ  ಪಂದ್ಯ. ಟೀಂ ಇಂಡಿಯಾ ಫೈನಲ್ ತಲುಪಬೇಕಾದರೆ ಪಂದ್ಯವನ್ನು 40  ಓವರ್ ಗಳ ಮೊದಲೇ ಗೆಲ್ಲುವ ಅನಿವಾರ್ಯತೆಯಿಂದ ಕಣಕ್ಕಿಳಿದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ ತಂಡ ಗಳಿಸಿದ್ದು 320  ರನ್. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ 86 ರನ್ ಗಳಿಸುವಷ್ಟರಲ್ಲಿ ಸಚಿನ್ ಮತ್ತು ಸೆಹ್ವಾಗ್ ವಿಕೆಟ್ ಕಳೆದುಕೊಂಡಿತ್ತು.  ನಂತರ ನಡೆದಿದ್ದು ವಿರಾಟ್ ಮ್ಯಾಜಿಕ್. ಕೇವಲ 86  ಎಸೆತಗಳಿಂದ ಕೊಹ್ಲಿ ಗಳಿಸಿದ್ದು 133 ರನ್. ಅದರಲ್ಲೂ ಮಾರಕ ದಾಳಿಯ ಬೌಲರ್ ಲಸಿತ್ ಮಾಲಿಂಗರ ಒಂದು ಓವರ್ ನಲ್ಲಿ ಕೊಹ್ಲಿ ಬರೋಬ್ಬರಿ 24  ರನ್ ಹೊಡೆದಿದ್ದರು. ಈ ಪಂದ್ಯದಲ್ಲಿ ಮಾಲಿಂಗ ತನ್ನ 7.4 ಓವರ್ ನಲ್ಲಿ 96  ರನ್ ಬಿಟ್ಟು ಕೊಟ್ಟಿದ್ದರು. ಇದು ಕೊಹ್ಲಿ ಬ್ಯಾಟಿಂಗ್ ಪರಾಕ್ರಮಕ್ಕೆ ಸಾಕ್ಷಿ. ಈ ಪಂದ್ಯವನ್ನು ಭಾರತ ಕೇವಲ 36.4 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ಬೆನ್ನಟ್ಟಿ ವಿಜಯದ ಕೇಕೆ ಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next