Advertisement

ಪ್ರತಿಭೆಯ ವಿರಾಟ್‌ ರೂಪ

06:00 AM Aug 12, 2018 | |

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ವಿರಾಟ್‌ ಕೊಹ್ಲಿಗೆ  ಅಗ್ರಸ್ಥಾನ ದೊರೆತಿದೆ. ಕಿರಿಹರೆಯದ ಹಿರಿದಾದ ಸಾಧನೆ. ಕೊಹ್ಲಿಯನ್ನು ಸಚಿನ್‌ ತೆಂಡುಲ್ಕರ್‌ ಜೊತೆಗೆ ಹೋಲಿಸುವ ಪ್ರಯತ್ನ ನಡೆಯುತ್ತಿದೆ. ಈ ಸಂದರ್ಭಕ್ಕಾಗಿ ವಿರಾಟ್‌ ಕೊಹ್ಲಿಯ “ಕ್ರೀಡಾ ಮೀಮಾಂಸೆ’ಯನ್ನು ಕುರಿತ ಒಂದು ಲೇಖನ…

Advertisement

ಈ ಬಾರಿ ವಿದೇಶಿ ನೆಲದಲ್ಲಿ ಗೆದ್ದೇ ಗೆಲ್ಲುವೆವು- ಎಂಬ ಅಪರಿಮಿತ ವಿಶ್ವಾಸ ಮತ್ತು ಮಹಾತ್ವಾಕಾಂಕ್ಷೆಯಿಂದ ಇಂಗ್ಲೆಂಡ್‌ ನೆಲಕ್ಕೆ ತೆರಳಿದ ಭಾರತ ಕ್ರಿಕೆಟ್‌ ತಂಡ ಮೊದಲ ಟೆಸ್ಟ್‌ ಪಂದ್ಯದಲ್ಲೇ ಸೋಲನ್ನನುಭವಿಸಿದೆ. ಗೆಲ್ಲುವ ಎಲ್ಲಅವಕಾಶ ಪಡೆದಿದ್ದರೂ, ಬಿಟ್ಟ ಕ್ಯಾಚುಗಳು ಮತ್ತು ಬ್ಯಾಟಿಂಗ್‌ನಲ್ಲಿ ದಯನೀಯ ವೈಫ‌ಲ್ಯ ಕಂಡದ್ದರಿಂದ ಭಾರತಕ್ಕೆ ಗೆಲುವು ಮರೀಚಿಕೆಯಾಯಿತು. ಆದರೆ, ಈ ಟೆಸ್ಟ್‌ ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು ನಾಯಕರಾದ  ಮತ್ತು  ಮಹತ್ವಾಕಾಂಕ್ಷಿ ಆಟಗಾರರಾದ ವಿರಾಟ್‌ ಕೊಹ್ಲಿ. ಇದೀಗ ಐಸಿಸಿಯ ರ್‍ಯಾಂಕಿಂಗ್‌ನಲ್ಲಿ ನಂಬರ್‌ ವನ್‌ ಪಟ್ಟಕ್ಕೇರಿರುವ ಕೊಹ್ಲಿಯ ಬ್ಯಾಟಿಂಗ್‌ ಕುರಿತಾಗಿ ಕ್ರಿಕೆಟ್‌ ಪಂಡಿತರುಗಳು “ಭಲೇ ಭಲೇ!’ ಎನ್ನುತ್ತಿದ್ದಾರೆ. ಶ್ರೀಲಂಕಾದ ಮಾಜಿ ನಾಯಕರಾದ‌ ಕುಮಾರ ಸಂಗಕ್ಕರರಂತೂ ವಿರಾಟ್‌, ಸಚಿನ್‌ ತೆಂಡೂಲ್ಕರ್‌ಗಿಂತಲೂ ಶ್ರೇಷ್ಠರಿರಬಹುದು ಎಂಬಂತಹ ಮಾತನ್ನು ಆಡಿದ್ದಾರೆ. ಇವರ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿಬಂದರೂ, ಬ್ಯಾಟಿಂಗ್‌ ಕೌಶಲದ ಬಗ್ಗೆ ಬಹುತೇಕ “ಆಹಾ!…’ ಎಂದು ತಲೆಯಾಡಿಸುತ್ತಿರುವುದು ವಿಶೇಷ. ಹಾಗಾದರೆ, ವಿರಾಟ್‌ ಕೊಹ್ಲಿ ಶತಮಾನದ ಆಟಗಾರರಿರಬಹುದೆ? ನೋಡೋಣ ಬನ್ನಿ.

ಇನ್ನೂ ಇಪ್ಪತ್ತೂಂಬತ್ತು ವರ್ಷದ ವಿರಾಟ್‌ ಕೊಹ್ಲಿಯವರ ಬ್ಯಾಟಿಂಗ್‌ ಅನೇಕ ದೃಷ್ಟಿಕೋನದಿಂದ ವಿಶಿಷ್ಟವಾಗಿದೆ. ಎಂತಹದೇ ಕಠಿಣ ಪರಿಸ್ಥಿತಿಯನ್ನೂ ಮೆಟ್ಟಿ ನಿಂತು ಬ್ಯಾಟಿಂಗ್‌ ಮಾಡುವ ಅಪರೂಪದ ಕುಶಲತೆ ಇವರಿಗೆ ದಕ್ಕಿದೆ. ಆಕ್ರಮಣಕಾರಿ ಬ್ಯಾಟಿಂಗ್‌ ಮತ್ತು ತಾಂತ್ರಿಕ ಔನ್ಯತ್ಯ ವಿರಾಟ್‌ ಕೊಹ್ಲಿಯವರ ಟ್ರೇಡ್‌ಮಾರ್ಕ್‌ ಎಂದರೂ ತಪ್ಪಾಗಲಾರದು. ತಾನೊಬ್ಬ ಪರಿಪೂರ್ಣ ಆಟಗಾರನಾಗಬೇಕೆನ್ನುವ ತಹತಹ ಮತ್ತು ಹಸಿವೆ ಇವರನ್ನು ವಿಶಿಷ್ಟ ಆಟಗಾರನನ್ನಾಗಿಸಿದೆ. ಕಳೆದ ಬಾರಿ ಅಂದರೆ 2014ರ ವಿದೇಶ ಸರಣಿಯಲ್ಲಿ ಜೇಮ್ಸ್‌ ಆ್ಯಂಡರ್‌ಸನ್ನನ ಸ್ವಿಂಗ್‌ ಬೌಲಿಂಗ್‌ ವಿರುದ್ಧ ದಯನೀಯ ವೈಫ‌ಲ್ಯ ಕಂಡಿದ್ದ ಕೊಹ್ಲಿ, ಮೊನ್ನಿನ ಪಂದ್ಯದಲ್ಲಿ ಬ್ಯಾಟಿಂಗ್‌ ಪಾರಮ್ಯ ಮೆರೆದು, ಶತಕ ಗಳಿಸಿದ್ದು ಇವರ ಮಹತ್ವಾಕಾಂಕ್ಷೆಗೆ ಮತ್ತು ಮಾನಸಿಕ ಸದೃಢತೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಟಿ-20 ಮತ್ತು ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಆಡುವುದಕ್ಕೂ ಶುದ್ಧತೆಯ ಸಂಕೇತವಾಗಿರುವ ಟೆಸ್ಟ್‌ ಪಂದ್ಯಗಳಲ್ಲಿ ಇವರು ಇನ್ನಿಂಗ್ಸ್‌ ಕಟ್ಟುವುದಕ್ಕೂ ಅಗಾಧ ವ್ಯತ್ಯಾಸವಿದೆ. ಟೆಸ್ಟ್‌ ಪಂದ್ಯಗಳಲ್ಲಿ ವಿರಾಟ್‌ ಚೆಂಡನ್ನು ಗಾಳಿಯಲ್ಲಿ ಹೊಡೆಯುವುದನ್ನು ಬಿಟ್ಟುಕೊಟ್ಟು ಕ್ಲಾಸಿಕಲ್‌ ಮತ್ತು ಸಾಂಪ್ರದಾಯಿಕ ಶೈಲಿಯಲ್ಲೇ ರನ್‌ ಗಳಿಸುತ್ತಿರುವುದು ಅಭಿಮಾನಿಗಳ ಮತ್ತು ಪಂಡಿತರ ಗಮನ ಸೆಳೆದಿದೆ. ಯಾವುದೇ ಒಬ್ಬ ದಾಂಡಿಗ ಸರ್ವಶ್ರೇಷ್ಠ ಎನ್ನಿಸಿಕೊಳ್ಳಬೇಕಾದರೆ ಆತ ವಿದೇಶಿ ನೆಲದಲ್ಲಿ ಗಳಿಸುವ ರನ್ನುಗಳು ಬಹಳ ಮುಖ್ಯ. ಇದೀಗ ತನ್ನ “ಅಹಂ’ ಅನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಇಂಗ್ಲೆಂಡಿನ ನೆಲದಲ್ಲೂ ಸಹ ಕೊಹ್ಲಿ ತನ್ನ ಮಾಂತ್ರಿಕ ಬ್ಯಾಟಿಂಗ್‌ ಅನ್ನು ಪ್ರದರ್ಶಿಸಿದ್ದು ವಿರಾಟ್‌ನ ಗರಿಮೆಯನ್ನು ಇನ್ನೂ ಹೆಚ್ಚಿಸಿದೆ. ಆದ್ದರಿಂದಲೇ ಸಚಿನ್‌ ತೆಂಡುಲ್ಕರ್‌ ಜೊತೆಗಿನ ಹೋಲಿಕೆ ಪ್ರಾರಂಭವಾಗಿದೆ.

ಹೋಲಿಕೆ ಬಲುಕಷ್ಟದ್ದು !
ಸಚಿನ್‌ ತೆಂಡುಲ್ಕರ್‌ ಮತ್ತು ವಿರಾಟ್‌ ಕೊಹ್ಲಿ ಬ್ಯಾಟಿಂಗನ್ನು ಹೋಲಿಸುವುದು ವಿಪರೀತ ಮತ್ತು ಅನಗತ್ಯ ಎನ್ನಿಸಬಹುದು. ತೆಂಡೂಲ್ಕರ್‌ ಭಾರತ ತಂಡವನ್ನು 1990ರ ದಶಕದಲ್ಲಿ ಪ್ರವೇಶಿಸಿದಾಗ ಇದ್ದ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಅಜಗಜಾಂತರವಿದೆ. ವಿದೇಶಿ ನೆಲದಲ್ಲಿ ಆಡುವ ಮತ್ತು ಗೆಲ್ಲುವ ಆತ್ಮವಿಶ್ವಾಸ ನಿಧಾನವಾಗಿಯಾದರೂ ಭಾರತ ತಂಡಕ್ಕೆ ಈಗ ದಕ್ಕತೊಡಗಿದೆ. ಅಷ್ಟೇ ಅಲ್ಲ, ವಿರಾಟ್‌ ಕೊಹ್ಲಿಯ ವ್ಯಕ್ತಿತ್ವಕ್ಕೂ ತೆಂಡುಲ್ಕರ್‌ ವ್ಯಕ್ತಿತ್ವಕ್ಕೂ ಬಹಳ ಭಿನ್ನತೆ ಇರುವುದು ಮೇಲ್ನೋಟಕ್ಕೆ ಗಮನಕ್ಕೆ ಬರುತ್ತದೆ. ತೆಂಡುಲ್ಕರ್‌ಗೆ ನಾಯಕತ್ವದ ಗುಣವೇ ಇದ್ದಿರಲಿಲ್ಲ, ತನ್ನ ಬ್ಯಾಟಿಂಗ್‌ ಕೌಶಲದ ಬಗ್ಗೆ ಸ್ಪಷ್ಟತೆ ಇತ್ತು. ಆದರೆ, ಸಾಮೂಹಿಕವಾಗಿ ತಂಡದ ನಾಯಕತ್ವ ವಹಿಸಿ ಕೊಂಡಾಗ ವಿಪರೀತದ ಹಿಂಸೆ ಅನುಭವಿಸಿದ್ದಂತೆ ಭಾಸವಾಗುತ್ತಿತ್ತು. ಅವರಿಗೆ ಎಲ್ಲರನ್ನೂ ತನ್ನೊಟ್ಟಿಗೆ ಕರೆದೊಯ್ಯುವ ಸಾಮರ್ಥ್ಯ ಕೊನೆಯವರೆಗೂ ದಕ್ಕಲಿಲ್ಲ. ಅದನ್ನರಿತೇ  ನಾಯಕತ್ವವನ್ನು ಸ್ವಯಂಪ್ರೇರಿತರಾಗಿ ತ್ಯಜಿಸಿದರು. ಆದರೆ, ವಿರಾಟ್‌ ಕೊಹ್ಲಿ ಹಾಗಲ್ಲ. ನಾಯಕತ್ವ ಬೇಕೇ ಬೇಕು ಎನ್ನುವ ಹಟಮಾರಿ. ವಿಪರೀತದ ಅಹಂಕಾರ ಇವರ ದೈಹಿಕ ಭಾಷೆಯಲ್ಲೇ ವ್ಯಕ್ತವಾಗುತ್ತಿರುತ್ತದೆ. 

ತನ್ನ ಎದುರು ಯಾವ ಬಗೆಯ ಭಿನ್ನಾಭಿಪ್ರಾಯ ಬಂದರೂ ಅತಿಯಾದ ಹಠಮಾರಿತನದಿಂದ ಅದನ್ನು ತೊಲಗಿಸಿಕೊಳ್ಳುವ ವ್ಯಕ್ತಿತ್ವ ಇವರದ್ದು. ಪ್ರಾಯಃ ಈತನಲ್ಲದೆ ಬೇರೆ ಯಾರೇ ನಾಯಕರಿದ್ದರೂ ಅನಿಲ್‌ ಕುಂಬ್ಳೆ ತರಹದ ಸ್ಟಾರ್‌ ಆಟಗಾರ ಮತ್ತು ಅನುಭವಸ್ಥರನ್ನು ಮುಲಾಜಿಲ್ಲದೆ ತರಬೇತುದಾರನ ಹುದ್ದೆಯಿಂದ ಕೆಳಗಿಳಿಸುವುದು ಸಾಧ್ಯವಿರಲಿಲ್ಲವೇನೊ? ತನ್ನ ಮೂಗಿನ ನೇರಕ್ಕೇ ಯೋಚಿಸುವ ವಿರಾಟ್‌, ಚೇತೇಶ್ವರ ಪೂಜಾರನಂತಹ ಟೆಸ್ಟ್‌ ಪರಿಣತನನ್ನು ಪದೇ ಪದೇ ತಂಡದಿಂದ ಕೈಬಿಡಲು ಮುಜುಗರ ಪಟ್ಟುಕೊಳ್ಳಲಾರರು. ಇಂಗ್ಲೆಂಡ್‌, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದ ಅಂಕಣಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಘೋಷಿಸಿಕೊಳ್ಳುವ ಛಲ ಹಿಂದಿನ ಯಾವ ಆಟಗಾರರಲ್ಲೂ ಕಾಣುವುದು ಸಾಧ್ಯವಿರಲಿಲ್ಲ. ಇವರಿಗಿಂತ ಮೊದಲು ಆಕ್ರಮಣಕಾರಿ ನಾಯಕತ್ವ ಪ್ರದರ್ಶಿಸಿದ್ದ ಸೌರವ್‌ ಗಂಗೂಲಿ ಕೂಡ ಇವರ‌ಷ್ಟು ಆತ್ಮವಿಶ್ವಾಸವನ್ನು ಪ್ರದರ್ಶಿಸಿರಲಿಲ್ಲ ಎನ್ನಿಸುತ್ತದೆ. ಹಾಗಿದ್ದರಿಂದಲೇ ವಿರಾಟ್‌ ಕೊಹ್ಲಿ ಜಾಗತೀಕರಣದ ನಂತರದ ಭಾರತದ ಒಬ್ಬ ಪ್ರತಿನಿಧಿ. ಅಂದರೆ, ಇವರ No holds bar ವ್ಯಕ್ತಿತ್ವಕ್ಕೆ ನವ ಭಾರತ ಕಂಡುಕೊಳ್ಳುತ್ತಿರುವ ಹೊಸ ಮೌಲ್ಯಗಳ ಪ್ರತಿನಿಧಿ ಇವರಿರಬಹುದು ಎಂದು ಭಾಸವಾಗುತ್ತಿದೆ. ಸೌಮ್ಯ ಗುಣಕ್ಕೆ ಹೊರತಾಗಿ ಒಂದು ಬಗೆಯ ವ್ಯಗ್ರತೆ, ಸಾವಧಾನಕ್ಕೆ ಬದಲಾಗಿ ವೇಗದ ನಾಗಾಲೋಟ, ಎದುರಾಳಿಗಳ ಜೊತೆಗೆ ಇನ್ನಿಲ್ಲದ ಶಠ್ಯತೆ- ಇವರ ವ್ಯಕ್ತಿತ್ವದಲ್ಲಿ , ಹಾವಭಾವಗಳಲ್ಲಿ ಪದೇ ಪದೇ ಗೋಚರವಾಗುತ್ತದೆ. ಫಾರ್ಮ್ ಕಳೆದುಕೊಂಡು ಬಹಳ ದಿನವಾಗಿರುವ ಮಹೇಂದ್ರ ಸಿಂಗ್‌ ಧೋನಿಯನ್ನು ವಿರಾಟ್‌ ಪದೇ ಪದೇ ರಕ್ಷಿಸುತ್ತಾರೆ. ಹೊಸ ಆರ್ಥಿಕತೆ ತಂದುಕೊಟ್ಟ ಅಧಿಕಾರದ ಕೂಸು ಇವರು. ತಮ್ಮ ಆಸಕ್ತಿ ಅಥವಾ ಕೆಲವೊಮ್ಮೆ ಹಿತಾಸಕ್ತಿಯನ್ನು ಸಂರಕ್ಷಿಸಿಕೊಳ್ಳಲು ಯಾವುದೇ ಮುಜುಗರ ಪಟ್ಟುಕೊಳ್ಳಲಾರರು. ಇದು ವಿರಾಟ್‌ರವರ ವ್ಯಕ್ತಿತ್ವದ ಇನ್ನೊಂದು ಆಯಾಮ.

Advertisement

 ಬ್ಯಾಟಿಂಗ್‌ ವಿಷಯಕ್ಕೆ ಬಂದರೆ ತೆಂಡೂಲ್ಕರ್‌ನಲ್ಲಿ ಕಾಣದಿರುವ ಕೆಲ ಅಂಶಗಳನ್ನು ನಾವು ಗಮನಿಸಬಹುದು. ಸುದೀರ್ಘ‌ ಇನ್ನಿಂಗ್ಸ್‌ ಕಟ್ಟುವ ಕಲೆ ಕೊಹ್ಲಿಯವರಿಗೆ ಸಹಜವಾಗಿಯೇ ದಕ್ಕಿದೆ. ಇಲ್ಲಿಯವರೆಗೆ ಆಡಿರುವ 67 ಟೆಸ್ಟ್‌ ಪಂದ್ಯಗಳಲ್ಲಿ 22 ಶತಕ ಗಳಿಸಿರುವ ಇವರು ಪದೇ ಪದೇ ದೀರ್ಘ‌ ಇನ್ನಿಂಗ್ಸ್‌ ಕಟ್ಟುತ್ತಾರೆ. ಶತಕದ ಸಮೀಪ ಬಂದಾಗ ತನ್ನ ಇನ್ನಿಂಗ್ಸ್‌ನ ವೇಗ ತಗ್ಗಿಸುವುದಿಲ್ಲ. ವಿಪರೀತ ಫಿಟ್‌ ಇರುವ ಕೊಹ್ಲಿ ದ್ವಿಶತಕಗಳ ಸರಮಾಲೆಯನ್ನೇ ಸಿಡಿಸುವ ಸಾಮರ್ಥ್ಯ ಹೊಂದಿದ್ದಾರೆ. ವಿಕೆಟ್‌ನ ದಶದಿಕ್ಕುಗಳಲ್ಲೂ ಸುಲಲಿತವಾಗಿ ತೆಂಡೂಲ್ಕರ್‌ನಂತೆಯೇ ಇವರು ಆಡಬಲ್ಲರು. ಆದರೆ ಇವರಿಗಿರುವ “ಅಹಂ’ ಒಂದಲ್ಲಾ ಒಂದು ದಿನ ಇವರ ಬ್ಯಾಟಿಂಗ್‌ ಮೇಲೆ ಪರಿಣಾಮ ಮಾಡಬಹುದು ಎನ್ನಿಸುತ್ತದೆ.

ಸದ್ಯಕ್ಕಂತೂ ಯಾವ ದೃಷ್ಟಿಕೋನದಿಂದ ನೋಡಿದರೂ, ಅನೇಕ ಮಿತಿಗಳ ನಡುವೆಯೂ ಇವರ‌ದ್ದು ದೈತ್ಯ ಪ್ರತಿಭೆಯೇ ಸರಿ.

ಟಿ. ಅವಿನಾಶ್‌

Advertisement

Udayavani is now on Telegram. Click here to join our channel and stay updated with the latest news.

Next