ಹೊಸದಿಲ್ಲಿ: ಕೊರೊನಾ ದೆಸೆಯಿಂದ ಎಲ್ಲ ಜಾಗತಿಕ ಕ್ರಿಕೆಟ್ ಕೂಟಗಳು ರದ್ದುಗೊಂಡ ಬಳಿಕ ಪ್ರತಿಕ್ರಿಯಿಸಿರುವ
ಟೀಮ್ ಇಂಡಿಯಾ ನಾಯಕ
ವಿರಾಟ್ ಕೊಹ್ಲಿ, “ಕೊರೊನಾ ವಿರುದ್ಧ ಒಗ್ಗೂಡಿ ಹೋರಾಡಿ ಗೆದ್ದು ಬರೋಣ’ ಎಂದು ಕರೆಯಿತ್ತಿದ್ದಾರೆ.
“ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕೊರೊನಾ ವಿರುದ್ಧ ಒಗ್ಗೂಡಿ ಹೋರಾಡೋಣ. ಸುರಕ್ಷಿತವಾಗಿರಿ, ಮುಂಜಾಗ್ರತೆ ವಹಿಸಿ. ಬಹಳ ಮುಖ್ಯವಾಗಿ, ರೋಗ ಬರದಂತೆ ತಡೆಗಟ್ಟುವುದೇ ಎಲ್ಲರ ಉದ್ದೇಶವಾಗಿರಲಿ. ದಯವಿಟ್ಟು ಎಲ್ಲರೂ ಎಚ್ಚರಿಕೆಯಿಂದಿರಿ…’ ಎಂದು ವಿರಾಟ್ ಕೊಹ್ಲಿ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ.
ಪ್ರವಾಸಿ
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ರದ್ದುಗೊಂಡ ಬಳಿಕ ವಿರಾಟ್ ಕೊಹ್ಲಿ ಮತ್ತು ತಂಡದ ಇತರ ಸದಸ್ಯರು ಮುಖಕ್ಕೆ ಕಪ್ಪು ಮಾಸ್ಕ್ ಧರಿಸಿ ಲಕ್ನೋ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.
ಸರಣಿಯ ದ್ವಿತೀಯ ಪಂದ್ಯ ರವಿವಾರ ಲಕ್ನೋದ “ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂ’ನಲ್ಲಿ ನಡೆಯಬೇಕಿತ್ತು.
ಟೀಮ್ ಇಂಡಿಯಾ ಸದಸ್ಯರೆಲ್ಲ ಈಗಾಗಲೇ ತಮ್ಮ ಮನೆಗಳನ್ನು ಸೇರಿಕೊಂಡಿದ್ದಾರೆ. ಕ್ವಿಂಟನ್ ಡಿ ಕಾಕ್ ಪಡೆ ದಕ್ಷಿಣ ಆಫ್ರಿಕಾದತ್ತ ಪ್ರಯಾಣ ಬೆಳೆಸಿದೆ.