ಚತ್ತೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದು, ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಗಳ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ರನ್ನು ಹಿಂದಿಕ್ಕಿದ್ದಾರೆ.
ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ 72ನೇ ಶತಕವಾಗಿದೆ. ಇದೀಗ ಅವರು ಸಚಿನ್ ತೆಂಡೂಲ್ಕರ್ ನಂತರ ಎಲೈಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದು ಏಕದಿನದಲ್ಲಿ ಅವರ 44ನೇ ಶತಕವಾಗಿದೆ. ಐವತ್ತು ಓವರ್‌ಗಳ ಮಾದರಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು (49) ಸರಿಗಟ್ಟಲು ಕೊಹ್ಲಿ ಈಗ ಕೇವಲ 5 ಶತಕಗಳಿಂದ ಹಿಂದೆಯಿದ್ದಾರೆ.
ಮೂರು ವರ್ಷಕ್ಕೂ ಹೆಚ್ಚು ಕಾಲದ ಅಂತರದ ನಂತರ ಬಂದಿರುವ ಈ ಶತಕ ಕೊಹ್ಲಿ ಪಾಲಿಗೆ ವಿಶೇಷವಾಗಿದೆ. ಈ ವರ್ಷದ ಆರಂಭದಲ್ಲಿ ಫಾರ್ಮ್‌ನಲ್ಲಿ ತೀವ್ರ ಕುಸಿತವನ್ನು ಅನುಭವಿಸಿದ್ದ ಕೊಹ್ಲಿ, ಏಷ್ಯಾ ಕಪ್ ನಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕವನ್ನು ಹೊಡೆದು ಫಾರ್ಮಿಗೆ ಮರಳಿದ್ದರು. ನಂತರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು.
ಇದನ್ನೂ ಓದಿ:‘ರಾಕೆಟ್ ಮ್ಯಾನ್’ ಖ್ಯಾತಿಯ ಹಿರಿಯ ಗಾಯಕ ಎಲ್ಟನ್ ಜಾನ್ ಟ್ವಿಟರ್ ಗೆ ಗುಡ್ ಬೈ
ಇಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 91 ಎಸೆತಗಳಿಂದ 113 ರನ್ ಗಳಿಸಿದರು. ಈ ವೇಳೆ ಎರಡು ಸಿಕ್ಸರ್ ಮತ್ತು 11 ಬೌಂಡರಿ ಬಾರಿಸಿದ್ದರು.
ಇದೇ ವೇಳೆ ವಿರಾಟ್ ಕೊಹ್ಲಿ ಅವರು ಇಶಾನ್ ಕಿಶನ್ ಜೊತೆಗೆ 290 ರನ್ ಗಳ ಜೊತೆಯಾಟವಾಡಿದರು. ಕಿಶನ್ 210 ರನ್ ಮಾಡಿದರು.