Advertisement

ಟಿ20ಗೂ ವಿರಾಟ್‌ ಕೊಹ್ಲಿ ವಿಶ್ರಾಂತಿ?

02:27 PM Nov 29, 2017 | |

ನಾಗ್ಪುರ: ಶ್ರೀಲಂಕಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗಾಗಿ ವಿಶ್ರಾಂತಿ ಪಡೆದಿರುವ ವಿರಾಟ್‌ ಕೊಹ್ಲಿ, ಅನಂತರದ ಟಿ20 ಸರಣಿಯಲ್ಲೂ ಆಡುವುದು ಖಚಿತಪಟ್ಟಿಲ್ಲ ಎಂಬ ಸುದ್ದಿ ಮಂಗಳವಾರ ಹೊರಬಿದ್ದಿದೆ.

Advertisement

“ಟಿ20 ಸರಣಿಯಲ್ಲಿ ಆಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲು ಕೊಹ್ಲಿ ಆಯ್ಕೆಗಾರರಲ್ಲಿ ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಸೋಮವಾರ ಟಿ20 ತಂಡವನ್ನು ಪ್ರಕಟಿಸಲಿಲ್ಲ’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ. 

“ಡಿಸೆಂಬರ್‌ 12ರ ತನಕ ವಿರಾಟ್‌ ಕೊಹ್ಲಿ ಕೆಲವು ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿಕ್ಕಿದೆ. ಬಳಿಕ ಅವರು ಸ್ಪಷ್ಟ ನಿರ್ಧಾರವೊಂದಕ್ಕೆ ಬರಲಿದ್ದಾರೆ’ ಎಂದು ಮಂಡಳಿಯ ಮೂಲ ತಿಳಿಸಿದೆ. ಟಿ20 ಪಂದ್ಯಗಳು ಡಿ. 20, 22 ಮತ್ತು 24ರಂದು ನಡೆಯಲಿವೆ.

ಮುಂಚಿತವಾಗಿ ಆಫ್ರಿಕಾಕ್ಕೆ? 
ದಕ್ಷಿಣ ಆಫ್ರಿಕಾದ ಸುದೀರ್ಘ‌ ಪ್ರವಾಸ ಸಿದ್ಧತೆಗೆ ಕಾಲಾವಕಾಶ ಸಾಲದು ಎಂಬುದಾಗಿ ಕೊಹ್ಲಿ ಇತ್ತೀಚೆ ಗಷ್ಟೇ ಹೇಳಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾಕ್ಕೆ ಸಾಕಷ್ಟು ಮುಂಚಿತವಾಗಿಯೇ ಟೆಸ್ಟ್‌ ಸ್ಪೆಷಲಿಸ್ಟ್‌ಗಳನ್ನು ಕಳು ಹಿಸುವ ಯೋಜನೆಯೂ ಬಿಸಿಸಿಐ ಮುಂದಿದೆ. ಆಫ್ರಿಕಾ ವಾತಾವರಣಕ್ಕೆ ಹೊಂದಿಕೊಳ್ಳುವುದು, ಅಭ್ಯಾಸ ನಡೆಸುವುದು ಇದರ ಉದ್ದೇಶ. 2010ರ ಪ್ರವಾಸದ ವೇಳೆ ಭಾರತದ ಕೆಲವು ಆಟಗಾರರು 10 ದಿನ ಮುಂಚಿತವಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿ, ಡರ್ಬನ್‌ನ “ಗ್ಯಾರಿ ಕರ್ಸ್ಟನ್‌ ಅಕಾಡೆಮಿ’ಯಲ್ಲಿ ಅಭ್ಯಾಸ ನಡೆಸಿ ಸರಣಿಗೆ ಸಜ್ಜಾಗಿದ್ದರು. ಅಂದಿನ ಟೆಸ್ಟ್‌ ಸರಣಿ 1-1 ಅಂತರದಿಂದ ಸಮನಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 

ಈ ಸಲವೂ ಇದೇ ಕ್ರಮ ಅನುಸರಿಸುವುದಾದರೆ ಕೊಹ್ಲಿ ಸಹಿತ ಪ್ರಮುಖ ಟೆಸ್ಟ್‌ ಆಟಗಾರರು ಬೇಗನೇ ಹರಿಣಗಳ ನಾಡಿಗೆ ತೆರಳುವುದು ಖಚಿತ. ಆಗ ಕೊಹ್ಲಿ ಟಿ20 ಸರಣಿಯಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದೇ ಹೇಳಬೇಕಾಗುತ್ತದೆ. ಜ. 5ರಿಂದ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿ ಆರಂಭವಾಗಲಿದೆ. ಈ ವರ್ಷಾರಂಭದ ಭಾರತ ಪ್ರವಾಸದ ವೇಳೆ ಆಸ್ಟ್ರೇಲಿಯದ ಟೆಸ್ಟ್‌ ಸ್ಪೆಷಲಿಸ್ಟ್‌ಗಳು ಕೆಲವು ದಿನ ಮೊದಲೇ ಇಲ್ಲಿಗೆ ಆಗಮಿಸಿ ಅಭ್ಯಾಸದಲ್ಲಿ ತೊಡಗಿದ್ದರೆಂಬುದು ಉಲ್ಲೇಖನೀಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next