ಹೊಸದಿಲ್ಲಿ: ಆಗಸ್ಟ್-ಸಪ್ಟೆಂಬರ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ಸಿದ್ಧಗೊಳ್ಳಲು ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕೌಂಟಿ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ. ಯಾವ ಕೌಂಟಿಯನ್ನು ಪ್ರತಿನಿಧಿಸುವ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ. ಆದರೆ ಬಹುತೇಕ ಸರ್ರೆ ಕೌಂಟಿಯನ್ನು ಪ್ರತಿನಿಧಿಸುವ ಸಾಧ್ಯತೆಯಿದೆ.
ವಿರಾಟ್ ಅವರು ಡಿವಿಷನ್ ವನ್ ಕೌಂಟಿ ತಂಡದಲ್ಲಿ ಆಡುವುದು ಖಚಿತವಾಗಿದೆ. ಇದಕ್ಕಿಂತ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ. ಸರ್ರೆ ಮತ್ತು ಎಸೆಕ್ಸ್ ಕೌಂಟಿ ಜತೆ ಮಾತುಕತೆ ನಡೆಯುತ್ತಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ನಾಯಕನ ಪರಿಪೂರ್ಣ ಗಮನವು ಇಂಗ್ಲೆಂಡ್ ವಿರುದ್ಧಧ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೇಲೆ ಇದೆ. ಇದಕ್ಕಾಗಿ ಜೂನ್ 14ರಂದು ಆರಂಭವಾಗುವ ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಕಳೆದುಕೊಳ್ಳಲು ಅವರು ಸಿದ್ಧರಾಗಿದ್ದಾರೆ. ಆವಾಗ ಅವರು ಕೌಂಟಿಯಲ್ಲಿ ಬ್ಯುಸಿಯಾಗಿರುತ್ತಾರೆ ಎಂದು ತಿಳಿದುಬಂದಿದೆ.
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ಕೊಹ್ಲಿ ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್ ಮುಗಿದ ಬಳಿಕ ಅವರು ಇಂಗ್ಲೆಂಡಿಗೆ ತೆರಳಲಿದ್ದಾರೆ.
2014ರಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ನಡೆದಾಗ ಕೊಹ್ಲಿ ಗಮನಾರ್ಹ ನಿರ್ವಹಣೆ ನೀಡಿಲ್ಲ. ಅರ್ಧಶತಕ ಬಾರಿಸಲು ಕೂಡ ಅವರಿಂದ ಸಾಧ್ಯವಾಗಿರಲಿಲ್ಲ. ಸುÌವರ್ಟ್ ಬ್ರಾಡ್ ಮತ್ತು ಆ್ಯಂಡರ್ಸನ್ ದಾಳಿಯನ್ನು ಎದುರಿಸಲು ಕೊಹ್ಲಿ ಬಹಳಷ್ಟು ಒದ್ದಾಡಿದ್ದರು.
ಕೊಹ್ಲಿ ಅವರಲ್ಲದೇ ಚೇತೇಶ್ವರ ಪೂಜಾರ ಅವರು ಯಾರ್ಕ್‌ಶೈರ್ ಮತ್ತು ಇಶಾಂತ್ ಶರ್ಮ ಅವರು ಡರ್ಹಾಮ್ ಕೌಂಟಿಯನ್ನು ಪ್ರತಿನಿಧಿಸಲಿದ್ದಾರೆ.