ನವದೆಹಲಿ: ಸಚಿನ್ ತೆಂಡುಲ್ಕರ್ ನಿವೃತ್ತಿಯಾಗುವಾಗ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ವರ್ಣಿಸಲಾಗಿತ್ತು. ಕೆಲವರಂತೂ ಅವರು ಬ್ರಾಡ್ಮನ್‌ಗಿಂತ ಶ್ರೇಷ್ಠ ಎಂದಿದ್ದರು. ಆಗ ಬಹಳ ವಾದವಿವಾದಗಳಾಗಿದ್ದವು. ಇದೀಗ ವಿರಾಟ್ ಕೊಹ್ಲಿಯನ್ನು ಏಕದಿನ ಕ್ರಿಕೆಟ್‌ನ ಸರ್ವಶ್ರೇಷ್ಠ ಆಟಗಾರ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ವರ್ಣಿಸಿದ್ದಾರೆ.
ಇಲ್ಲಿಯವರೆಗೆ ಸಚಿನ್ ತೆಂಡುಲ್ಕರ್, ವಿವಿಯನ್ ರಿಚರ್ಡ್ಸ್ ಹೀಗೆ ವರ್ಣನೆಗೊಳಗಾಗಿದ್ದರು. ಈಗ ಈ ಮಹಾನ್ ದಿಗ್ಗಜರನ್ನು ಪಟ್ಟಿಯಿಂದ ಹೊರಗಿಟ್ಟು ಮಾತನಾಡಿರುವುದು ಅಭಿಮಾನಿಗಳ ನಡುವೆ ಮತ್ತೂಮ್ಮೆ ಭಾರೀ ವಾಗ್ವಾದ ನಡೆಯುವ ಸಾಧ್ಯತೆಯಿದೆ. ಕೊಹ್ಲಿ ಇತ್ತೀಚೆಗೆ ಏಕದಿನದಲ್ಲಿ 35ನೇ ಶತಕ ಬಾರಿಸಿದ್ದರು. 208 ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಅತ್ಯಂತ ವೇಗದಲ್ಲಿ ಇಂತಹ ಸಾಧನೆ ಮಾಡಿದ ವಿಶ್ವದಾಖಲೆ ನಿರ್ಮಿಸಿದರು.
ಈ ಸರಣಿಯಲ್ಲೇ 3 ಶತಕ ಬಾರಿಸಿ ದ್ವಿಪಕ್ಷೀಯ ಸರಣಿಯೊಂದರಲ್ಲಿ ಗರಿಷ್ಠ ರನ್‌ಗಳಿಸಿದ ಮತ್ತೂಂದು ವಿಶ್ವದಾಖಲೆಯನ್ನೂ ನಿರ್ಮಿಸಿದರು. ಅಲ್ಲದೇ ಅವರು ಆಡಿದ ಪಂದ್ಯಗಳಲ್ಲಿ ಭಾರತ ಗೆದ್ದಿದ್ದೇ ಹೆಚ್ಚು. ಇಷ್ಟೆಲ್ಲ ಹಿನ್ನೆಲೆಯಿರುವಾಗ ಕೊಹ್ಲಿ ವಿಶ್ವಶ್ರೇಷ್ಠ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಾರ್ವಕಾಲಿಕ ಸರ್ವಶ್ರೇಷ್ಠ ಆಟಗಾರ ಎನ್ನುವುದಕ್ಕೆ ಮಾತ್ರ ವಿರೋಧವಿದೆ.
ಅಂಕಿಸಂಖ್ಯೆಗಳು ಏನು ಹೇಳುತ್ತವೆ ಎನ್ನುವುದಕ್ಕಿಂತ ಅವರ ಪ್ರತಿ ಇನಿಂಗ್ಸ್‌ನ ಮಹತ್ವವೇನು ಎನ್ನುವುದು ಪರಿಶೀಲನೆಗೊಳಪಡಬೇಕಾದ ಸಂಗತಿ. ಈ ದೃಷ್ಟಿಯಿಂದ ಕೊಹ್ಲಿ ಬಹಳ ಮೌಲ್ಯಯುತ ಆಟಗಾರ. ತಂಡಕ್ಕೆ ಅಗತ್ಯವಿದ್ದಾಗಲೆಲ್ಲ ನೆಲಕಚ್ಚಿ ಆಡಿರುವ ಅವರು ಆಟಗಾರರ ಮನಃಸ್ಥಿತಿಯಲ್ಲೇ ಬದಲಾವಣೆ ಮಾಡಿದ್ದಾರೆ. ಭಾರತೀಯರ ಮಟ್ಟಿಗೆ ಕೊಹ್ಲಿ ಬ್ಯಾಟಿಂಗ್ ಯಾವಾಗಲೂ ಒಂದು ಮಾದರಿ, ಅಷ್ಟೇ ಸ್ಪರ್ಧಾತ್ಮಕ. ಯಾವುದೇ ಪಂದ್ಯವನ್ನು ಎಂತಹ ಹಂತದಲ್ಲೂ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ ವಾನ್ ಮತ್ತು ಕೊಹ್ಲಿ ಅಭಿಮಾನಿಗಳು ಹೇಳುವುದು ಸರಿಯೆನ್ನುವುದರಲ್ಲೂ ಅರ್ಥವಿದೆ. ಆದರೂ ನಿರ್ಣಾಯಕವಾಗಿ ಕೊಹ್ಲಿಯೊಬ್ಬರೇ ಶ್ರೇಷ್ಠ ಎಂಬ ಮಾತುಗಳು ವಿವಾದವಾಗುವ ಸಾಧ್ಯತೆ ದಟ್ಟವಾಗಿದೆ.