ದುಬೈ: ಟಿ20 ವಿಶ್ವಕಪ್‌ನ ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ತಂಡದ ನಡುವಿನ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಉಭಯ ತಂಡದ ಆಟಗಾರರು ತೋರಿದ ಕ್ರೀಡಾ ಸ್ಪೂರ್ತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಪಂದ್ಯದಲ್ಲಿ ಸೋತ ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಘಾತಕಾರಿ ಸೋಲಿನ ನಡುವೆಯೂ ನಗು ನಗುತ್ತಾ ವಿರೋಧಿ ತಂಡದ ಅಮೋಘ ಆಟವಾಡಿದ ಆಟಗಾರರನ್ನು ಆಲಿಂಗಿಸಿ, ಕೈಕುಲುಕಿ ಅಭಿನಂದನೆ ಸಲ್ಲಿಸಿ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ.
ಈ ಫೋಟೊವನ್ನು ಟ್ವೀಟ್ ಮಾಡಿರುವ ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್ , ”ಕ್ರಿಕೆಟ್ ಸ್ಪಿರಿಟ್. ಮನುಷ್ಯರ ಸ್ಪಿರಿಟ್. ನೆನಪಿರಲಿ ಜನರು ನಿಮ್ಮನ್ನು ಮೋಸಗೊಳಿಸಲು ಬಿಡಬೇಡಿ.” ಎಂದು ಬರೆದಿದ್ದಾರೆ.
ತಂಡದ ಮೆಂಟರ್ ಆಗಿರುವ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರು ಪಾಕ್ ಆಟಗಾರಿಗೆ ಅಭಿನಂದಿಸಿದರು. ಪಾಕ್ ಮಾಜಿ ನಾಯಕ ಶೋಯೆಬ್ ಮಲಿಕ್, ಆಲ್ ರೌಂಡರ್ ಇಮದ್ ವಾಸಿಂ ಮತ್ತು ಹಾಲಿ ನಾಯಕ ಬಾಬರ್ ಅಜಂ ಜೊತೆ ಧೋನಿ ಪಂದ್ಯದ ಸೋಲಿನ ಬಳಿಕ ಮಾತನಾಡಿರುವ ವಿಡಿಯೋವನ್ನು ಐಸಿಸಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ.
ಪಂದ್ಯದ ಬಳಿಕ ಕೊಹ್ಲಿ ಅವರು ”ಸೋಲನ್ನು ಒಪ್ಪಿಕೊಂಡಿದ್ದೇವೆ ಮತ್ತು ಅದರಿಂದ ಕಲಿತಿದ್ದೇವೆ, ವಿರೋಧಿ ತಂಡದ ಎಲ್ಲಾ ಆಟಗಾರರನ್ನು ಸಮಾನವಾಗಿ ಗೌರವಿಸಿದ್ದೇವೆ. ನಾವು ಚೆನ್ನಾಗಿ ಆಡದಿದ್ದರೆ ಅದನ್ನು ಒಪ್ಪಿಕೊಳ್ಳುತ್ತೇವೆ ಮತ್ತು ವಿರೋಧಿ ತಂಡಕ್ಕೂ ಮನ್ನಣೆ ನೀಡುತ್ತೇವೆ.” ಎಂದು ಹೇಳಿದ್ದರು.
ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಗಳಿಂದ ಸೋತಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, 20 ಓವರ್‌ಗಳಲ್ಲಿ 7 ವಿಕೆಟ್‌ಗೆ 151 ರನ್ ಗಳಿಸಿತ್ತು. ಇದನ್ನು ಬೆನ್ನಟ್ಟಿದ ಪಾಕಿಸ್ತಾನ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 152 ರನ್ ಗಳಿಸಿ ಗೆದ್ದಿತು. ಇದು ವಿಶ್ವಕಪ್ ಪಂದ್ಯವೊಂದರಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ದೊರಕಿದ ಮೊದಲ ಗೆಲುವು ಇದಾಗಿದೆ.