ಜೈಪುರ: ಈ ಸೀಸನ್ ನಲ್ಲಿ ತಂಡವಾಗಿ ಆಡಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಂದು ಸೋಲು ಕಂಡಿದೆ. ರಾಜಸ್ತಾನ ರಾಯಲ್ಸ್ ವಿರುದ್ಧ ಜೈಪುರದ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ಆರು ವಿಕೆಟ್ ಅಂತರದ ಸೋಲು ಕಂಡಿದೆ. ವಿರಾಟ್ ಕೊಹ್ಲಿ ಹೊರತು ಯಾವೊಬ್ಬ ಆಟಗಾರನೂ ತಂಡದ ಬೆಂಬಲಕ್ಕೆ ನಿಲ್ಲದ ಕಾರಣ ಆರ್ ಸಿಬಿ ಸೋಲಿನ ಸರಣಿ ಮುಂದುವರಿಯಿತು.
ಜೈಪುರ ಅಂಗಳದಲ್ಲಿ ಕಳಪೆ ಪ್ರದರ್ಶನದ ಇತಿಹಾಸ ಹೊಂದಿದ್ದ ವಿರಾಟ್ ಶನಿವಾರ ಅದನ್ನು ತೊಡೆದು ಹಾಕಿದರು. ಅಜೇಯ ಶತಕ ಸಿಡಿಸಿದ ವಿರಾಟ್ ತಂಡಕ್ಕೆ ಆಧಾರವಾಗಿ ನಿಂತರು.
ವಿರಾಟ್ ಕೊಹ್ಲಿ 113 ರನ್ ಬಾರಿಸಿದರು. ಇದೇ ವೇಳೆ ಐಪಿಎಲ್‌ನಲ್ಲಿ 7500+ ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು. ಈಗ, ಅವರು ಐಪಿಎಲ್ ನಲ್ಲಿ 7579 ರನ್ ಗಳಿಸಿದ್ದಾರೆ ಮತ್ತು ಚಾಂಪಿಯನ್ಸ್ ಲೀಗ್ ಟಿ 20 ನಲ್ಲಿ ಫ್ರಾಂಚೈಸಿಗಾಗಿ 424 ರನ್ ಗಳಿಸಿದ್ದಾರೆ. ಹೀಗಾಗಿ ವಿರಾಟ್ ಆರ್ ಸಿಬಿ ತಂಡದ ಪರ 8003 ರನ್ ಗಳಿಸಿದ್ದಾರೆ.
ಇದೀಗ ಟಿ20 ಮಾದರಿಯಲ್ಲಿ ಒಂದೇ ತಂಡಕ್ಕಾಗಿ 8000+ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಗೂ ವಿರಾಟ್ ಪಾತ್ರರಾದರು.
ಐಪಿಎಲ್ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಮೊದಲ ಸ್ಥಾನದಲ್ಲಿ ಮುಂದುವರಿದರು. ಅವರು ಎಂಟು ಶತಕ ಬಾರಿಸಿದ್ದಾರೆ. ತಲಾ ಆರು ಶತಕ ಗಳಿಸಿರುವ ಕ್ರಿಸ್ ಗೇಲ್ ಮತ್ತು ಜೋಸ್ ಬಟ್ಲರ್ ನಂತರದ ಸ್ಥಾನದಲ್ಲಿದ್ದಾರೆ.
ಇದೇ ಪಂದ್ಯದ ವೇಳೆ ವಿರಾಟ್ ಐಪಿಎಲ್ ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್ ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಂಡರು. ಅವರು 110 ಕ್ಯಾಚ್ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಸುರೇಶ್ ರೈನಾ 109 ಕ್ಯಾಚ್ ಪಡೆದಿದ್ದರು.